
ಕಾರವಾರ: ವರ್ಷದ ಹಿಂದೆ ಸ್ವಂತ ಕಟ್ಟಡವಿಲ್ಲದೆ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಈಗ ಸ್ವಂತ ಕಟ್ಟಡ ಸಿಕ್ಕಿದೆ. ಆದರೆ, ವಿದ್ಯಾರ್ಥಿಗಳಿಗೆ ಕೊಠಡಿಯ ಹೊರಗಿನ ಆವರಣದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಇನ್ನೂ ತಪ್ಪಿಲ್ಲ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ–66ರ ಅಂಚಿನಲ್ಲಿರುವ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿರುವ ಮಹಿಳಾ ಕಾಲೇಜಿಗೆ ಐದು ಕೊಠಡಿಗಳ ಕಟ್ಟಡ ನಿರ್ಮಾಣಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇದೇ ಕಟ್ಟಡದಲ್ಲಿ ತರಗತಿಗಳು ಆರಂಭಗೊಂಡಿವೆ. ಕೊಠಡಿಯ ಕೊರತೆ ಕಾರಣದಿಂದ ಈಗಲೂ ವಿದ್ಯಾರ್ಥಿನಿಯರನ್ನು ಹೊರ ಆವರಣದಲ್ಲಿ ಕೂರಿಸಿ, ಪಾಠ ಮಾಡುವ ಸ್ಥಿತಿ ಮುಂದುವರಿದಿದೆ.
ಸೀಮಿತ ಕೊಠಡಿಗಳ ಕಾರಣದಿಂದ ಪ್ರಾಧ್ಯಾಪಕರು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ಇಲ್ಲದ ಕಾರಣದಿಂದ ಪ್ರಾಧ್ಯಾಪಕರು ಹೊರ ಆವರಣದಲ್ಲೇ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಬಿಸಿಎ, ಬಿ.ಕಾಂ, ಬಿಎ ಪದವಿ ತರಗತಿಗಳಿದ್ದು, 152 ವಿದ್ಯಾರ್ಥಿನಿಯರಿದ್ದಾರೆ.
‘ಕಾಲೇಜಿಗೆ ₹3 ಕೋಟಿ ವೆಚ್ಚದಲ್ಲಿ 5 ಕೊಠಡಿಗಳ ಕಟ್ಟಡ ಮೊದಲ ಹಂತದಲ್ಲಿ ನಿರ್ಮಾಣಗೊಂಡಿದೆ. ಅವುಗಳಲ್ಲಿ ಆಡಳಿತ ಕಚೇರಿಗೆ, ಕಂಪ್ಯೂಟರ್ ಪ್ರಯೋಗಾಲಯಕ್ಕೆ ತಲಾ ಒಂದೊಂದು ಕೊಠಡಿ ಬಳಕೆ ಆಗುತ್ತಿದೆ. ಒಂದು ಕೊಠಡಿಯಲ್ಲಿ ಗ್ರಂಥಾಲಯ ನಡೆಯುತ್ತಿದೆ. ಉಳಿದ ಎರಡು ಕೊಠಡಿ ಮತ್ತು ಪ್ರಯೋಗಾಲಯ, ಗ್ರಂಥಾಲಯ ಬಳಸಿಕೊಂಡೂ ತರಗತಿ ನಡೆಸುತ್ತಿದ್ದೇವೆ. ಕೆಲವೇ ತರಗತಿಗಳು ಮಾತ್ರ ಹೊರ ಆವರಣದಲ್ಲಿ ನಡೆಯುತ್ತಿದೆ’ ಎಂದು ಕಾಲೇಜಿನ ಪ್ರಾಚಾರ್ಯ ವಿ.ಜಿ.ಗಣೇಶ್ ಪ್ರತಿಕ್ರಿಯಿಸಿದರು.
‘ಹೊರ ಆವರಣದಲ್ಲಿಯೂ ತರಗತಿ ನಡೆಸಬೇಕಿರುವ ಕಾರಣಕ್ಕೆ ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಿದ್ದೇವೆ. ಇನ್ನರ್‌ವ್ಹೀಲ್ ಕ್ಲಬ್ ಈ ಸೌಕರ್ಯವನ್ನು ದೇಣಿಗೆಯಾಗಿ ನೀಡಿದೆ’ ಎಂದೂ ತಿಳಿಸಿದರು.
ಹೆಚ್ಚುವರಿ ಕೊಠಡಿಗಳಿಗೆ ಈಗಾಗಲೆ ₹3.30 ಕೋಟಿ ಅನುದಾನ ಮಂಜೂರಾಗಿದ್ದು ಹಾಲಿ ಕಟ್ಟಡದ ಪಕ್ಕದಲ್ಲೇ ಕೊಠಡಿ ನಿರ್ಮಿಸಲು ಜಾಗ ಲಭ್ಯವಿದೆ. ಕೆಲ ತಿಂಗಳಲ್ಲೇ ಕಾಮಗಾರಿ ಆರಂಭಗೊಳ್ಳಬಹುದುವಿ.ಜಿ.ಗಣೇಶರ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ
ಬಸ್‌ಗಾಗಿ ಕಿ.ಮೀ ದೂರದ ನಡೆಯಬೇಕು
‘ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಲೇಜ್ ಇದ್ದರೂ ಬಸ್‌ಗೆ ಕಿ.ಮೀಗಟ್ಟಲೆ ದೂರ ನಡೆಯಬೇಕಾಗುತ್ತಿದೆ. ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದಿದ್ದರೆ ಬಸ್ ತಪ್ಪುತ್ತಿದ್ದು ಹಲವು ತಾಸು ಕಾಯುವ ಸ್ಥಿತಿ ಉಂಟಾಗಿದೆ’ ಎಂದು ಕಾಲೇಜಿನ ವಿದ್ಯಾರ್ಥಿನಿಯರು ಸಮಸ್ಯೆ ಹೇಳಿಕೊಂಡರು. ‘ಕಾಲೇಜಿನ ಸಮೀಪ ಬಸ್ ತಂಗುದಾಣ ಇಲ್ಲ. ಬಸ್ ನಿಲುಗಡೆಗೆ ಅವಕಾಶ ಕೋರಿದರೂ ಸ್ಪಂದನೆ ಸಿಗುತ್ತಿಲ್ಲ. ಸಾಗರ ಮತ್ಸ್ಯಾಲಯ ಅಥವಾ ದಿವೇಕರ ಕಾಲೇಜಿನ ಬಳಿ ಬಸ್ ನಿಲುಗಡೆಯಾಗವ ಜಾಗ ತಲುಪಲು ದೂರವಾಗುತ್ತಿದೆ’ ಎಂದು ವಿವರಿಸಿದರು.
ದಶಕ ಕಳೆದರೂ ಮುಗಿಯದ ಗೋಳು
‘2013–14ರಲ್ಲಿ ಜಿಲ್ಲೆಯ ಏಕೈಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಾರವಾರದಲ್ಲಿ ಸ್ಥಾಪನೆಯಾಗಿದೆ. ಆರಂಭದ 2 ವರ್ಷ ಬಿಣಗಾದ ಪ್ರೌಢಶಾಲೆ ಕಟ್ಟಡದಲ್ಲಿ ನಂತರ ನಗರದ ಬಾಡಿಗೆ ಕಟ್ಟಡದಲ್ಲಿ ನಡೆದಿದೆ. ಕಿರಿದಾದ ಕಟ್ಟಡದಲ್ಲಿ ನಡೆಯುತ್ತಿದ್ದ ಕಾಲೇಜ್‌ನಲ್ಲಿ ಸೌಕರ್ಯದ ಕೊರತೆಯಲ್ಲೇ ವಿದ್ಯಾರ್ಥಿನಿಯರು ಕಲಿತಿದ್ದಾರೆ. ಹೊಸ ಕಟ್ಟಡ ಸ್ಥಾಪನೆಯಾದರೂ ಕೊರತೆ ನೀಗಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂತೋಷ ನಾಯ್ಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.