ADVERTISEMENT

ಕಾರವಾರ: ಹೆಚ್ಚಿದ ಬೀಡಾಡಿ ದನ ಅಪಘಾತಕ್ಕೆ ಮೂಲ!

ಗಣಪತಿ ಹೆಗಡೆ
Published 28 ಅಕ್ಟೋಬರ್ 2024, 4:49 IST
Last Updated 28 ಅಕ್ಟೋಬರ್ 2024, 4:49 IST
ಕಾರವಾರ ತಾಲ್ಲೂಕಿನ ಭೈರೆ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಅಡ್ಡಲಾಗಿ ನಿಂತಿರುವ ಬೀಡಾಡಿ ದನಗಳು
ಕಾರವಾರ ತಾಲ್ಲೂಕಿನ ಭೈರೆ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಅಡ್ಡಲಾಗಿ ನಿಂತಿರುವ ಬೀಡಾಡಿ ದನಗಳು   

ಕಾರವಾರ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ನಡೆಯುವ ವಾಹನ ಅಪಘಾತಗಳಿಗೆ ಚಾಲಕರ ನಿರ್ಲಕ್ಷಕ್ಕಿಂತ ಬೀಡಾಡಿ ದನಗಳ ಅಡ್ಡಬರುತ್ತಿರುವ ಕಾರಣವೇ ಹೆಚ್ಚಿದೆ. ಅಷ್ಟರಮಟ್ಟಿಗೆ ಬೀಡಾಡಿ ದನಗಳ ಹಾವಳಿ ಮಿತಿಮೀರಿದೆ.

ಕೃಷಿ, ಮೀನುಗಾರಿಕೆ ಜೀವಾಳವಾಗಿರುವ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಹೈನುಗಾರಿಕೆ ಕ್ಷೇತ್ರವೂ ಬಲವಾಗಿತ್ತು. ಕಾಲ ಬದಲಾದಂತೆ ಹೈನುಗಾರಿಕೆ ಕ್ಷೇತ್ರ ಕಳೆಗುಂದಿದೆ. ದನಗಳನ್ನು ಸಲಹುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ರಸ್ತೆಯ ಮೇಲೆ ಬೀಡಾಡಿ ತಿರುಗುವ ದನಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಬೀಡಾಡಿ ದನಗಳನ್ನು ರಕ್ಷಿಸಲು ನಗರ, ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಿಸಿದ ಕೊಂಡವಾಡೆಗಳು ನಿರ್ವಹಣೆಯ ಕೊರತೆಯಿಂದ ಬಾಗಿಲು ತೆರೆಯುವುದು ಅಪರೂಪವಾಗಿದೆ. ದನಗಳ ಪಾಲನೆ ಕಷ್ಟದಾಯಕವಾದ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳು ಬೀಡಾಡಿ ದನ ಸೆರೆಹಿಡಿಯಲು ಮುಂದಾಗುತ್ತಿಲ್ಲ ಎಂಬ ಆರೋಪಗಳಿವೆ.

ADVERTISEMENT

ಕಾರವಾರ ನಗರದಲ್ಲಿ ನಗರಸಭೆ ನಿರ್ಮಿಸಿದ್ದ ಕೊಂಡವಾಡೆಯ ಜಾಗವನ್ನು ಖಾಸಗಿ ಪ್ರಾಣಿ ರಕ್ಷಕರ ಸಂಸ್ಥೆಗೆ ನೀಡಲಾಗಿದೆ. ಅಲ್ಲಿ ಅವರೇ ಬೀಡಾಡಿ ದನಗಳನ್ನು ರಕ್ಷಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಪ್ರದೇಶದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಬೀಡುಬಿಡುವ ಗೋವುಗಳಿಂದ ಅಪಘಾತ ಹೆಚ್ಚುತ್ತಿದೆ. ಮಾಜಾಳಿ, ಸದಾಶಿವಗಡ, ಅಂಬ್ರಾಯಿ, ಭೈರೆ ಮುಂತಾದೆಡೆ ಇಂತಹ ಘಟನೆ ಹೆಚ್ಚುತ್ತಲೇ ಇವೆ.

‘ಶಿರಸಿ ನಗರ ಪ್ರದೇಶದಲ್ಲಿ ರಾತ್ರಿಯ ಸಂದರ್ಭದಲ್ಲಿ ಬೀಡಾಡಿ ದನಗಳಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ. ಸಂಚಾರಕ್ಕೆ ಸಮಸ್ಯೆ ತರುತ್ತಿವೆ. ವಾಹನ ಸವಾರರು ವಾಹನ ಚಲಾಯಿಸುವಾಗ ಕೆಲವು ಸಲ ಕಾಣದೆ ಹಲವಾರು ಅಪಘಾತಗಳು ಸಂಭವಿಸಿವೆ. ಕೊಂಡವಾಡೆ ಇದ್ದರೂ ದನಗಳನ್ನು ಅಲ್ಲಿಗೆ ಕಳಿಸುತ್ತಿಲ್ಲ’ ಎನ್ನುತ್ತಾರೆ ನಗರ ನಿವಾಸಿ ಅರ್ಚನಾ ನಾಯ್ಕ.

‘ಬೀಡಾಡಿ ದನಗಳ ಮಾಲಿಕರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಲಾಗಿದೆ. ಆದರೂ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂಬುದಾಗಿ ಪೌರಾಯುಕ್ತ ಎಚ್.ಕಾಂತರಾಜ್ ಪ್ರತಿಕ್ರಿಯಿಸುತ್ತಾರೆ.

ಗೋಕರ್ಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು, ಪ್ರವಾಸಿಗರಿಗೆ ಕೆಲವೊಮ್ಮೆ ಕಿರಿಕಿರಿಯಾದ ಘಟನೆಯೂ ಇದೆ. ಕೇವಲ ಬೀಡಾಡಿ ದನ ಮಾತ್ರ ಅಲ್ಲ, ಮನೆಯಲ್ಲಿಯೇ ಸಾಕಿದ ದನ ರಸ್ತೆಯ ಮೇಲೆ ಬಿಡುವುದರಿಂದಲೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ವಾಹನ ಸವಾರರಂತೂ ಬೀಡಾಡಿ ದನಗಳ ಹಾವಳಿಗೆ ಹೈರಾಣಾಗಿದ್ದಾರೆ. ಸಮುದ್ರ ತೀರದಲ್ಲಿಯೂ ದನಗಳ ಹಾವಳಿ ಹೆಚ್ಚಿರುವ ದೂರುಗಳಿವೆ.

ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದೆ. ರಸ್ತೆ ಪಕ್ಕ, ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಗಳು ಹೂವು, ಹಣ್ಣು, ತರಕಾರಿಯ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ, ಅಂತಹ ಸ್ಥಳಗಳಲ್ಲಿ ಬಿಡಾಡಿ ದನಗಳು ಗುಂಪು ಗುಂಪಾಗಿ ಜಮಾವಣೆಗೊಳ್ಳುತ್ತವೆ. ಪಟ್ಟಣದ ಗಾಂಧಿನಗರ ಹಾಗೂ ಕಾಳಗನಕೊಪ್ಪದಲ್ಲಿ ಎರಡು ಕೊಂಡವಾಡೆಗಳಿದ್ದರೂ ನಿರ್ವಹಣೆ ಇಲ್ಲದೇ, ಸೊರಗಿವೆ.

‘ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿರುತ್ತದೆ. ಸಂತೆಯಲ್ಲಿಯೇ ನುಗ್ಗುವ ದನಗಳು ಇಕ್ಕಟ್ಟಾದ ಜಾಗದಲ್ಲಿಯೇ ಜನರನ್ನು ತಳ್ಳುತ್ತ, ತರಕಾರಿಗೆ ಬಾಯಿ ಹಾಕುತ್ತವೆ. ಜನರಿಗೂ ಕಿರಿಕಿರಿ ತರುತ್ತಿವೆ. ದನಗಳು ಮಾರುಕಟ್ಟೆಯ ಒಳಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಂಬಂಧಿಸಿದವರು ವಿಫಲರಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಫಕ್ಕೀರೇಶ ಬಡಿಗೇರ ದೂರಿದರು.

ಯಲ್ಲಾಪುರ ಪಟ್ಟಣದ ವಿವಿಧ ರಸ್ತೆಗಳಲ್ಲಿ ಜಾನುವಾರುಗಳು ಬೇಕಾಬಿಟ್ಟಿ ಮಲಗುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ಕಿರವತ್ತಿ ಸುತ್ತಮುತ್ತ ಪ್ರದೇಶದಲ್ಲಿ ಚಲಿಸುತ್ತಿರುವ ವಾಹನಕ್ಕೆ ಸಿಲುಕಿ ಜಾನುವಾರುಗಳು ಮೃತಪಡುವುದು ಸಾಮಾನ್ಯವಾಗಿದೆ.

‘ರಸ್ತೆಯಲ್ಲಿ ಸಂಚರಿಸುವ ಜಾನುವಾರುಗಳನ್ನು ಗೋಶಾಲೆಗೆ ಸೇರಿಸಲಾಗುತ್ತದೆ. ಅದರ ವೆಚ್ಚವನ್ನು ಮಾಲಿಕರೇ ಭರಿಸಬೇಕಾಗುತ್ತದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನಿಲ್ ಗಾವಡೆ ಹೇಳುತ್ತಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ವಾಹನಗಳಿಗೆ ಡಿಕ್ಕಿಯಾಗಿ ರಸ್ತೆಯಲ್ಲೇ ಕಳೆಬರವಾಗುವ ದನಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವಾರವಷ್ಟೇ ಗೇರುಸೊಪ್ಪ ಸಮೀಪ ಬಸ್ ಡಿಕ್ಕಿ ಹೊಡೆದು ಆಕಳು ಮೃತಪಟ್ಟು ವಿವಾದಕ್ಕೆ ಕಾರಣವಾದ ಘಟನೆ ನಡೆದಿದೆ. ಬೀಡಾಡಿ ದನಗಳನ್ನು ಕೂಡಿಡಲು ಗ್ರಾಮೀಣ ಭಾಗಗಳಲ್ಲಿ ಕೊಂಡೆವಾಡೆಗಳಿಲ್ಲ. ಪಟ್ಟಣ ವ್ಯಾಪ್ತಿಯ ಪ್ರಭಾತನಗರದ ಕೊಂಡೆವಾಡೆ ಖಾಲಿ ಉಳಿದು ವರ್ಷಗಳೇ ಕಳೆದಿವೆ.

ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಗುಂಪು ನಿಂತಿರುವುದು

‘ಜಾನುವಾರು ಗಣತಿ ನಡೆದರೂ, ಬೀಡಾಡಿ ಜಾನುವಾರುಗಳು ಲೆಕ್ಕಕ್ಕೆ ಸಿಗದಿರುವುದು ದೊಡ್ಡ ಸಮಸ್ಯೆಯಾಗಿದೆ’ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಬಸವರಾಜ ಹೇಳುತ್ತಾರೆ.

ಸಿದ್ದಾಪುರ ಪಟ್ಟಣ, ಗ್ರಾಮೀಣ ಭಾಗದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಿದೆ. ಬೀಡಾಡಿ ದನಗಳ ಕಾಟ ನಿಯಂತ್ರಿಸಲು ಗ್ರಾಮ ಪಂಚಾಯಿತಿಗಳು ಸಭೆಯಲ್ಲಿ ನಿರ್ಣಯಿಸಿ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ದೇವರಾಜ ಹಿತ್ತಲಕೊಪ್ಪ ಹೇಳುತ್ತಾರೆ.

ಅಂಕೋಲಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ರಾತ್ರಿ ವೇಳೆ ಬೀಡಾಡಿ ದನಗಳ ಕಾಟ ಹೆಚ್ಚುತ್ತಿದೆ. ರಸ್ತೆ ಅಪಘಾತಗಳಿಗೆ ಇದು ಕಾರಣವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಗೋವು ಕಳ್ಳತನ ಘಟನೆಗಳು ನಡೆಯುತ್ತಿರುವ ದೂರುಗಳಿವೆ.

ಮುಂಡಗೋಡದ ಪಟ್ಟಣದಲ್ಲಿ ನಡೆಯುವ ವಾರದ ಸಂತೆ ವೇಳೆ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದರೂ ಸಂಬಂಧಪಟ್ಟವರು ಕ್ರಮ ಜರುಗಿಸುತ್ತಿಲ್ಲ
ಫಕ್ಕೀರೇಶ ಬಡಿಗೇರ ಸಾಮಾಜಿಕ ಕಾರ್ಯಕರ್ತ
ಅಂಕೋಲಾ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ರಸ್ತೆಯಲ್ಲಿ ಬೀಡಾಡಿ ದನಗಳು ಮಲಗಿಕೊಂಡಿರುತ್ತವೆ. ರಾತ್ರಿ ವೇಳೆ ಅವುಗಳಿಂದ ಅಪಘಾತ ಹೆಚ್ಚುತ್ತಿದೆ
ವಿಜಯಕುಮಾರ ನಾಯ್ಕ ಅಂಕೋಲಾ ಸಾಮಾಜಿಕ ಕಾರ್ಯಕರ್ತ
ದನಗಳನ್ನು ಮನಸ್ಸಿಗೆ ಬಂದ ಹಾಗೆ ರಸ್ತೆಯ ಮೇಲೆ ಬಿಡಲಾಗುತ್ತಿದೆ. ಅನೇಕ ಸಂದರ್ಭದಲ್ಲಿ ವಾಹನ ಬಡಿದು ಅಪಘಾತವಾದಾಗ ನಾನೇ ಸ್ವತಃ ವೈದ್ಯರನ್ನು ಕರೆದು ಆರೈಕೆ ಮಾಡಿದ್ದೇನೆ
ಸುಜೇಯ ಶೆಟ್ಟಿ ಗೋಕರ್ಣ ಗ್ರಾಮ ಪಂಚಾಯಿತಿ ಸದಸ್ಯ
ಬೀಡಾಡಿ ದನಗಳನ್ನು ಸೆರೆಹಿಡಿದು ಗೋಶಾಲೆಗೆ ಬಿಡಲು ವ್ಯವಸ್ಥೆ ಆಗಬೇಕು. ಸುಸಜ್ಜಿತ ಗೋಶಾಲೆ ಇದ್ದರೆ ದನಗಳು ಬೀಡಾಡಿ ತಿರುಗದಂತೆ ತಡೆಯಬಹುದು ಎಂಬುದಕ್ಕೆ ದುಸಗಿ ಗೋಶಾಲೆ ಉದಾಹರಣೆ
ಜಗದೀಶ ಇಟಗಿ (ಹಳಿಯಾಳ) ರೈತ

ಹೆದ್ದಾರಿಯೇ ಕೊಟ್ಟಿಗೆ!

ಜೊಯಿಡಾ ತಾಲ್ಲೂಕಿನ ರಾಮನಗರ ಜೊಯಿಡಾ ಜಗಲಪೇಟ ಮತ್ತು ಕುಂಬಾರವಾಡದಲ್ಲಿ ಬೀಡಾಡಿ ದಿನಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಹಿಂಡು ಹಿಂಡಾಗಿ ಕುಳಿತುಕೊಳ್ಳಲು ಪ್ರಾರಂಭಿಸುತ್ತವೆ. ದನಗಳಿಗೆ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯೆ ಕೊಟ್ಟಿಗೆಯಂತಾಗಿದೆ.

‘ಜಾನುವಾರುಗಳ ಮಾಲೀಕರು ಸಂಜೆಯಾದಂತೆ ಜಾನುವಾರುಗಳನ್ನು ಕರೆದುಕೊಂಡು ಹೋಗಬೇಕು. ಇಲ್ಲವಾದರೆ ತಾಲ್ಲೂಕಿನ ಒಂದರಂತೆ ಸರ್ಕಾರ ಗೋಶಾಲೆಯನ್ನು ನಿರ್ಮಾಣ ಮಾಡಿ ಜಾನುವಾರಗಳ ರಕ್ಷಣೆ ಮಾಡಬೇಕು’ ಎಂಬುದಾಗಿ ಆಗ್ರಹಿಸುತ್ತಾರೆ ಜೊಯಿಡಾದ ಉಲ್ಲಾಸ ದೇಸಾಯಿ ಮತ್ತು ಮಾರುತಿ ನಾಯ್ಕ.

120 ಗೋವುಗಳಿಗೆ ಗೋಶಾಲೆ ಆಸರೆ

ಹಳಿಯಾಳ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬೀಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ. ದುಸಗಿ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಸುಮಾರು 20 ಎಕರೆ ವಿಶಾಲವಾದ ಜಾಗದಲ್ಲಿ ಜಿಲ್ಲಾಮಟ್ಟದ ಪುಣ್ಯಕೋಟಿ ಸರ್ಕಾರಿ ಗೋಶಾಲೆ ತೆರೆಯಲಾಗಿದೆ. ಇಲ್ಲಿ ಈಗಾಗಲೇ 120 ದನಕರುಗಳು ದಾಖಲಾಗಿವೆ. ‘ಜಿಲ್ಲೆಯ ಯಾವುದೇ ಭಾಗದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ತಡೆದು ರಕ್ಷಣೆ ಮಾಡಿದ ಗೋವುಗಳು ಇನ್ನಿತರ ಬೀಡಾಡಿ ಗೋವುಗಳನ್ನು ಇಲ್ಲಿ ತಂದು ಆರೈಕೆಗೆ ಬಿಡಲಾಗುತ್ತಿದೆ. ಅವುಗಳಿಗೆ ಸೂಕ್ತ ಆರೈಕೆ ಔಷಧೋಪಚಾರ ಮಾಡಲಾಗುತ್ತಿದೆ’ ಎಂದು ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ನದಾಫ್ ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.