ADVERTISEMENT

ಕಾಳಿಯ ನೀರಿನಲ್ಲಿ ‘ಕಯಾಕಿಂಗ್’ ಸಂಭ್ರಮ

ಪುಟ್ಟ ದೋಣಿಗಳಲ್ಲಿ ಕುಳಿತು ಪೆಡಲ್ ತಳ್ಳಿ ಮುಂದೆ ಸಾಗಿದ ನೂರಾರು ಮಂದಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 13:13 IST
Last Updated 8 ಮಾರ್ಚ್ 2020, 13:13 IST
ಜೊಯಿಡಾ ತಾಲ್ಲೂಕಿನ ಅವೇಡಾ ಗ್ರಾಮದಲ್ಲಿ ಕಾಳಿ ನದಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ಕಯಾಕಿಂಗ್ ಹಬ್ಬ’ದಲ್ಲಿ ಭಾಗವಹಿಸಿದವರ ಸಂಭ್ರಮ ಹೀಗಿತ್ತು
ಜೊಯಿಡಾ ತಾಲ್ಲೂಕಿನ ಅವೇಡಾ ಗ್ರಾಮದಲ್ಲಿ ಕಾಳಿ ನದಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ಕಯಾಕಿಂಗ್ ಹಬ್ಬ’ದಲ್ಲಿ ಭಾಗವಹಿಸಿದವರ ಸಂಭ್ರಮ ಹೀಗಿತ್ತು   

ಕಾರವಾರ: ಜೊಯಿಡಾ ತಾಲ್ಲೂಕಿನ ಗಣೇಶಗುಡಿ ಸಮೀಪದ ಅವೇಡಾ ಗ್ರಾಮದಲ್ಲಿ ಕಾಳಿ ನದಿಯಲ್ಲಿ ಭಾನುವಾರ ನಡೆದ ‘ಕಯಾಕಿಂಗ್ ಹಬ್ಬ’ದಲ್ಲಿ ನೂರಾರು ಮಂದಿ ಸಂಭ್ರಮಿಸಿದರು. ಪುಟ್ಟ ದೋಣಿಗಳಲ್ಲಿನೀರಿನ ಮೇಲೆ ಸಾಗುತ್ತಮನಸ್ಸು ಹಗುರಾಗಿಸಿಕೊಂಡರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌, ವಿವಿಧ ಅಧಿಕಾರಿಗಳು ಸಾರ್ವಜನಿಕರ ಜೊತೆ ನೀರಿನಲ್ಲಿ ಮುಂದೆ ಮುಂದೆ ಹೋಗುತ್ತ ಹುರಿದುಂಬಿಸಿದರು.ಪುಟ್ಟ ದೋಣಿಗಳಲ್ಲಿ ಕುಳಿತು ಪೆಡಲ್ ತಳ್ಳುತ್ತ ನದಿಯಲ್ಲಿ ಸಾಗಿದರು.

ಇದಕ್ಕೂ ಮೊದಲು ನಡೆದಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ,‘ನೆರೆ ಮತ್ತು ಕೋವಿಡ್ 19ನಂತಹ ವೈರಾಣು ಸೋಂಕಿನಿಂದಈ ವರ್ಷ ಪ್ರವಾಸೋದ್ಯಮ ಬೆಳವಣಿಗೆ ಆಶಾದಾಯಕವಾಗಿಲ್ಲ. ಆದರೆ, ಇಂತಹ ನೈಸರ್ಗಿಕ ವಿಕೋಪಗಳು ಸದಾ ಆಗುತ್ತಿರುತ್ತವೆ. ಅವನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಈಗಾಗಲೇ ಜಲಕ್ರೀಡೆಗಳು, ಗಾಳಿಪಟ ಉತ್ಸವ, ಕದಂಬ ಉತ್ಸವಗಳನ್ನು ಆಯೋಜಿಸಲಾಗಿದೆ. ಅರಣ್ಯ ಪ್ರದೇಶ ಹೆಚ್ಚು ಇರುವಲ್ಲಿ ಯಾವ ರೀತಿಯಲ್ಲಿ ಪ್ರವಾಸೋದ್ಯಮ ಮಾಡಬೇಕು ಎಂಬುದು ಚರ್ಚಾಸ್ಪದ ವಿಚಾರ. ಕಾಡಿನಲ್ಲಿ ಆಯೋಜಿಸುವ ಪ್ರವಾಸೋದ್ಯಮ ಚಟುವಟಿಕೆಗಳು ಆಸಕ್ತರನ್ನು ಸೆಳೆಯಲು ಸಮರ್ಥವಾಗಬೇಕು’ ಎಂದರು.

ADVERTISEMENT

‘ಅರಣ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಸರ್ಕಾರದ ಹಂತದಲ್ಲಿ ಚರ್ಚೆಯಾಗಬೇಕು. ಜೊತೆಗೇ ಈ ಕ್ಷೇತ್ರದ ಅಭಿವೃದ್ಧಿಗೆ ಪ್ರವಾಸಿಗರಲ್ಲಿ ಶಿಸ್ತು ಬರುವುದೂ ಮುಖ್ಯ.ಪ್ರವಾಸೋದ್ಯಮ ಬೆಳೆಯಬೇಕಾದರೆ ಪ್ರವಾಸಿಗರಿಗೆ ನಂಬಿಕೆ ಬರುವುದು ಮುಖ್ಯ. ಪ್ರವಾಸಿಗರನ್ನು ದೇವರಂತೆ ನೋಡಬೇಕು. ಗೋವಾ, ಕೇರಳ ರಾಜ್ಯಗಳು ಇದೇ ಕಾರಣಕ್ಕಾಗಿ ಈ ಉದ್ಯಮದಲ್ಲಿ ಮುಂದೆ ಹೋಗಿವೆ. ಜಿಲ್ಲೆಯಲ್ಲಿದಾಂಡೇಲಿಯೂ ಜಗತ್ ಪ್ರಸಿದ್ಧ ಪ್ರವಾಸಿ ತಾಣವಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಮರಿಯಾ ಕ್ರಿಸ್ಟೊರ್ ಮಾತನಾಡಿ, ‘ಈ ಜಿಲ್ಲೆಯಲ್ಲಿ ಶೇ 80ರಷ್ಟು ಕಾಡು ಇದೆ. ಪ್ರವಾಸೋದ್ಯಮ ಮುಖ್ಯವಾಗಿರುವ ಈ ಜಿಲ್ಲೆಯಲ್ಲಿ ಮುಂದಿನ ಹೆಜ್ಜೆಗಳನ್ನು ಸೂಕ್ಷ್ಮವಾಗಿಡಬೇಕು. ಈ ರೀತಿಯ ಉತ್ಸವಗಳು ಪ್ರವಾಸೋದ್ಯಮಕ್ಕೆ ವೇದಿಕೆ ಕೊಡುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಸಮಸ್ಯೆ ಪರಿಹರಿಸಿ’

ಅವೇಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷಕಸ್ತೂರಿ ಬಾ ಮಾತನಾಡಿ, ‘ಜೊಯಿಡಾ ತಾಲ್ಲೂಕಿನಲ್ಲಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಇದರ ಜೊತೆಗೇ ಇಲ್ಲಿನ ಜನರ ಸಂಕಷ್ಟಗಳನ್ನು ಪರಿಹರಿಸಲು ಗಮನ ಕೊಡಬೇಕು. ಅರಣ್ಯದಂಚಿನ ನಿವಾಸಿಗಳು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲೂ ಕಷ್ಟ ಪಡುತ್ತಿದ್ದಾರೆ.ಅವರಿಗೆ ಅನುಕೂಲ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ಜುಂಜು ನಾಯ್ಕ ಉತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜಸಿಂಗ್ರೇರ್, ಕಾರವಾರ ಉಪ ವಿಭಾಗಾಧಿಕಾರಿ ಎಂ.ಪ್ರಿಯಾಂಗಾ, ಭಟ್ಕಳ ಉಪ ವಿಭಾಗಾಧಿಕಾರಿ ಭರತ್ ಸೆಲ್ವನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ವೇದಿಕೆಯಲ್ಲಿದ್ದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.