ADVERTISEMENT

ಅಂಕೋಲಾ ಕೇಣಿ ಬಂದರು ಯೋಜನೆಗೆ ಪ್ರಬಲ ವಿರೋಧ

ಇಐಎ ವರದಿ ತಿರಸ್ಕರಿಸಲು ಪರಿಸರ ತಜ್ಞರು, ಸ್ಥಳೀಯರಿಂದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 20:03 IST
Last Updated 22 ಆಗಸ್ಟ್ 2025, 20:03 IST
ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಕೇಣಿ ಬಂದರು ಯೋಜನೆಯ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸಿದರು.
ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಕೇಣಿ ಬಂದರು ಯೋಜನೆಯ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸಿದರು.   

ಕಾರವಾರ: ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಬಂದರು ನಿರ್ಮಾಣ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಶುಕ್ರವಾರ ಸಾರ್ವಜನಿಕ ಆಲಿಕೆ ಸಭೆ ನಡೆಯಿತು.  

ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಯೋಜನೆಯನ್ನು ವಿರೋಧಿಸಿದರು. ಲಿಖಿತವಾಗಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಸಭೆಯು ರಾತ್ರಿವರೆಗೆ ಮುಂದುವರಿಯಿತು.

‘ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿಲ್ಲ. ಸಾರ್ವಜನಿಕ ಆಲಿಕೆ ಸಭೆಗೆ ಮುನ್ನ ಯೋಜನೆ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ನೋಟಿಸ್ ನೀಡಿಲ್ಲ. ಹೀಗಾಗಿ ಈ ಸಭೆ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದೆ. ಸಭೆ ರದ್ದುಪಡಿಸಬೇಕು’ ಎಂದು ಪರಿಸರ ತಜ್ಞರು ಒತ್ತಾಯಿಸಿದರು.

ADVERTISEMENT

‘ಇದೇ ಅಂತಿಮ ಇಐಎ ವರದಿಯಲ್ಲ. ಇನ್ನೊಮ್ಮೆ ಸಭೆಗೆ ಅವಕಾಶ ಇಲ್ಲ. ಇಲ್ಲಿ ಮಂಡನೆಯಾಗುವ ಜನರ ಅಭಿಪ್ರಾಯ ಆಧರಿಸಿ ವರದಿ ಕಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

‘ಬಂದರು ಯೋಜನೆ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿಯನ್ನು 3 ತಿಂಗಳಲ್ಲಿ ಸಿದ್ಧಪಡಿಸಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಸಮುದ್ರ, ಸುತ್ತಲಿನ ಪರಿಸರದ ಮೇಲೆ ಬೀರುವ ಪರಿಣಾಮದ ಅಧ್ಯಯನ ಸಾಧ್ಯವಿಲ್ಲ. ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲೆ ಬೀರುವ ಪರಿಣಾಮದ ಉಲ್ಲೇಖವೇ ಇಲ್ಲ. ಹೀಗಾಗಿ ವರದಿಯನ್ನು ತಿರಸ್ಕರಿಸಬೇಕು’ ಎಂದು ಕಡಲಜೀವ ವಿಜ್ಞಾನಿ ವಿ.ಎನ್.ನಾಯಕ ಒತ್ತಾಯಿಸಿದರು.

‘ಬಂದರು ನಿರ್ಮಾಣ, ಬಳಿಕ ಹಡಗುಗಳ ನಿರ್ವಹಣೆಗೆ ಅಧಿಕ ಪ್ರಮಾಣದಲ್ಲಿ ನೀರು ಬೇಕು. ಅದನ್ನು ಎಲ್ಲಿಂದ ಪಡೆಯಲಾಗುತ್ತದೆ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖವಿಲ್ಲ. ಯೋಜನೆಗೆ ಕಲ್ಲುಬಂಡೆಗಳ ಅಗತ್ಯವಿದ್ದು, ಅವುಗಳಿಗಾಗಿ ಗುಡ್ಡ ಕೊರೆಯುವ ಆತಂಕವಿದೆ’ ಎಂದರು.

ಪರಿಸರ ತಜ್ಞರು, ವಕೀಲರು, ವಿವಿಧ ಕ್ಷೇತ್ರಗಳ ಪ್ರಮುಖರು ಸೇರಿ ಯೋಜನೆ ವ್ಯಾಪ್ತಿಯ ಅಪಾರ ಸಂಖ್ಯೆ ಜನರು ಮೌಖಿಕವಾಗಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಸಭೆಯ ಕಾರಣಕ್ಕಾಗಿ ಜಿಲ್ಲೆಯ ಕರಾವಳಿ ಭಾಗದ ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಿಭಾಗದ ಹಿರಿಯ ಪರಿಸರ ಅಧಿಕಾರಿ ಕೀರ್ತಿ ಕುಮಾರ್, ಪ್ರಾದೇಶಿಕ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್, ಯೋಜನೆ ಕೈಗೊಳ್ಳಲಿರುವ ಜೆಎಸ್‌ಡಬ್ಲ್ಯು ಕೆಪಿಪಿಎಲ್ ಕಂಪನಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೇಣಿ ಬಂದರು ಯೋಜನೆಗೆ ಸಂಬಂಧಿಸಿದಂತೆ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಸೇರಿದ್ದ ಜನರು.

ಕನ್ನಡದಲ್ಲಿ ಪೂರ್ಣ ವರದಿಗೆ ಒತ್ತಾಯ

‘ಕೇಣಿ ಬಂದರು ಯೋಜನೆಯ ಇಐಎ ವರದಿ ಇಂಗ್ಲಿಷ್‌ನಲ್ಲಿ  600 ಪುಟಗಳಿವೆ. ಕನ್ನಡ ಭಾಷೆಯಲ್ಲಿ ವರದಿ ಕೇವಲ 48 ಪುಟಗಳಿವೆ. ವರದಿಯ ಬಹುತೇಕ ಅಂಶಗಳನ್ನು ಕೈಬಿಟ್ಟು ಜನರನ್ನು ತಪ್ಪು ದಾರಿಗೆಳೆಯಲು ಜೆಎಸ್‌ಡಬ್ಲ್ಯು ಕಂಪನಿ ಇಂತಹ ಕೆಲಸ ಮಾಡಿದೆ. ನಿಯಮಾವಳಿ ಪ್ರಕಾರ ಯೋಜನೆಯ ಸಂಪೂರ್ಣ ವರದಿಯನ್ನು ಕನ್ನಡದಲ್ಲಿಯೂ ಪ್ರಕಟಿಸಿ ಜನರಿಗೆ ತಿಳಿಯುವಂತೆ ಮಾಡಬೇಕು’ ಎಂದು ವಕೀಲೆ ಶ್ರೀಜಾ ಚಕ್ರವರ್ತಿ ಒತ್ತಾಯಿಸಿದರು.  ‘ಬಂದರು ಸ್ಥಾಪನೆ ಹೆಸರಿನಲ್ಲಿ ಪಶ್ಚಿಮ ಘಟ್ಟದ ಪರಿಸರ ಹಾಳುಗೆಡವಲು ಜೆಎಸ್‌ಡಬ್ಲ್ಯು ಕಂಪನಿ ಮುಂದಾಗಿದೆ. ಒಡಿಶಾ ಗೋವಾ ಸೇರಿ ದೇಶದ ವಿವಿಧೆಡೆ ಬಂದರು ಸ್ಥಾಪಿಸಿದ್ದ ಈ ಕಂಪನಿ ಅಲ್ಲಿ ಮಾಲಿನ್ಯ ಹೆಚ್ಚಲು ಕಾರಣವಾಗಿದೆ’ ಎಂದು ದೂರಿದರು. ‘ವಾರ್ಷಿಕ 40 ಲಕ್ಷ ಟನ್ ಕಲ್ಲಿದ್ದಲು ನಿರ್ವಹಣೆ ಮಾಡಲಾಗದ ಕಂಪನಿ ಕೇಣಿ ಬಂದರಿನಲ್ಲಿ 3.4 ಕೋಟಿ ಟನ್ ನಿರ್ವಹಣೆ ನಡೆಸಲು ಸಾಧ್ಯವಿಲ್ಲ. ಅಭಿವೃದ್ಧಿಯ ನೆಪದಲ್ಲಿ ಮಾಲಿನ್ಯದ ಕೊಡುಗೆ ನೀಡಿ ಇಲ್ಲಿನ ಜನರ ಜೀವನದ ಜೊತೆ ಚೆಲ್ಲಾಟ ಆಡಲಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.