
ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನೌಕರರು ಖಾದಿ ಉಡುಪುಗಳ ಖರೀದಿಗೆ ಮುಗಿಬಿದ್ದರು. ಖಾದಿಯ ಅಂಗಿ, ಸೀರೆ ಸೇರಿದಂತೆ ಬಗೆಬಗೆಯ ಧಿರಿಸುಗಳನ್ನು ಖರೀದಿಸಿದರು.
ಪ್ರತಿ ತಿಂಗಳ ಮೊದಲ ಶನಿವಾರ ಸರ್ಕಾರಿ ನೌಕರರು ಖಾದಿ ಉಡುಪು ಧರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶಿಸಿರುವ ಹಿನ್ನೆಲೆಯಲ್ಲಿ ಖಾದಿ ಉಡುಪುಗಳಿಗೆ ಬೇಡಿಕೆ ಹೆಚ್ಚಿದೆ. ಸರ್ಕಾರಿ ನೌಕರರಿಗೆ ನೆರವಾಗುವ ಸಲುವಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹುಬ್ಬಳ್ಳಿಯ ಖಾದಿ ಹುಟ್ಟುವಳಿ ಕೇಂದ್ರ ತಾತ್ಕಾಲಿಕ ಮಳಿಗೆ ತೆರೆದಿತ್ತು.
ಮಳಿಗೆ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಸಾಂಕೇತಿಕವಾಗಿ ಕೆಲ ನೌಕರರಿಗೆ ಖಾದಿ ವಸ್ತ್ರಗಳನ್ನು ನೀಡಿದರು. ಬಳಿಕ ಮಾತನಾಡಿದ ಅವರು, ‘ಖಾದಿ ಉಡುಪುಗಳ ಬಳಕೆ ಹೆಚ್ಚಿಸುವುದರಿಂದ ಸಾಂಪ್ರದಾಯಿಕ ನೇಕಾರರಿಗೆ, ರೈತರಿಗೆ ಅನುಕೂಲವಾಗಲಿದೆ. ಖಾದಿ ಉಡುಪು ಧರಿಸುವುದರಿಂದ ದೇಹಾರೋಗ್ಯವೂ ಉತ್ತಮವಾಗಿರಬಲ್ಲದು’ ಎಂದರು.
‘ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಉಡುಪು ಧರಿಸಲು ಸರ್ಕಾರ ಸೂಚಿಸಿದೆ. ಖಾದಿ ಬಟ್ಟೆಗಳ ಖರೀದಿಗೆ ಜಿಲ್ಲೆಯ ನೌಕರರು ಉತ್ಸಾಹ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನಾಯ್ಕ, ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.