ADVERTISEMENT

ಕೋವಿಡ್ ಯೋಧರಿಗೆ ಕಿಟ್ ವಿತರಣೆ

ಕಾಂಗ್ರೆಸ್ ಘಟಕದಿಂದ ಜಿಲ್ಲೆಯಾದ್ಯಂತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:32 IST
Last Updated 4 ಏಪ್ರಿಲ್ 2020, 13:32 IST
ಶಿರಸಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ ಅವರಿಗೆ ಕಿಟ್ ಹಸ್ತಾಂತರಿಸಿದರು
ಶಿರಸಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ ಅವರಿಗೆ ಕಿಟ್ ಹಸ್ತಾಂತರಿಸಿದರು   

ಶಿರಸಿ: ಕೊರೊನಾ ವೈರಸ್‌ ಹರಡುವುದನ್ನು ನಿಯಂತ್ರಿಸುವ ಹಾಗೂ ಲಾಕ್‌ಡೌನ್‌ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರು, ಹಣ್ಣು, ಬಿಸ್ಕೆಟ್ ಪ್ಯಾಕ್ ಒಳಗೊಂಡ ಕಿಟ್‌ಗಳನ್ನು ಕಾಂಗ್ರೆಸ್ ಜಿಲ್ಲಾ ಘಟಕ ವಿತರಿಸುತ್ತಿದೆ.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರು ಶನಿವಾರ ಇಲ್ಲಿ ಕಿಟ್ ವಿತರಿಸಿದ ನಂತರ ಮಾತನಾಡಿ, ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಪಕ್ಷದ ಕಾರ್ಯಕರ್ತರು ಕಿಟ್ ವಿತರಣೆ ಆರಂಭಿಸಿದ್ದಾರೆ. ಸುಮಾರು 1500ರಷ್ಟು ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಯೋಧರಂತೆ ಕೆಲಸ ಮಾಡುತ್ತಿರುವ ಸರ್ಕಾರದ ಇಲಾಖೆಗಳ ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಲು, ಅವರಿಗೆ ಸಹಕರಿಸಲು ಕಾಂಗ್ರೆಸ್ ಸಿದ್ಧವಿದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ, ಪಕ್ಷದ ಜಿಲ್ಲಾ ಮಟ್ಟದ ಕಾರ್ಯಪಡೆಯ ಅಧ್ಯಕ್ಷರಾಗಿ ಸತೀಶ ಸೈಲ್ ಅವರನ್ನು ನೇಮಿಸಲಾಗಿದೆ. ಪ್ರತಿ ಬ್ಲಾಕ್ ಮಟ್ಟದಲ್ಲಿ ಕಾರ್ಯಪಡೆ ರಚಿಸಿ, ವಿಪತ್ತಿನ ಸಂದರ್ಭದಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.

ADVERTISEMENT

ಲಾಕ್‌ಡೌನ್‌ನಿಂದ ಜಿಲ್ಲೆಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಬಾಳೆ, ಕಲ್ಲಂಗಡಿ, ಅನಾನಸ್ ಹಣ್ಣುಗಳು ಖರೀದಿಸುವವರಿಲ್ಲದೇ ಕೊಳೆಯುತ್ತಿವೆ. ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವ ಮೂಲಕ ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕು. ಸಾಲ ಮಾಡಿ ಬೆಳೆ ಬೆಳೆದಿರುವ ರೈತ ಸಂಕಷ್ಟದಲ್ಲಿದ್ದಾನೆ. ಅವರ ಕಷ್ಟ ಪರಿಹರಿಸುವಲ್ಲಿ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ಪ್ರಮುಖರಾದ ಜಗದೀಶ ಗೌಡ, ದೀಪಕ ದೊಡ್ಡೂರು, ಸಂತೋಷ ಶೆಟ್ಟಿ, ಪ್ರಸನ್ನ ಶೆಟ್ಟಿ, ಶೈಲೇಶ ಜೋಗಳೇಕರ, ಬಸವರಾಜ ದೊಡ್ಮನಿ, ಎಚ್‌.ಯು.ಪಠಾಣ, ಶೈಲೇಶ ಜೋಗಳೇಕರ, ಸತೀಶ ನಾಯ್ಕ ಮಧುರವಳ್ಳಿ, ಶ್ರೀನಿವಾಸ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.