ADVERTISEMENT

ಸಂತ್ರಸ್ತರು ಪರಿಹಾರ ಕೇಂದ್ರದಿಂದ ತೆರಳಿ: ಎ.ಸಿ ಮನವಿ

ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:13 IST
Last Updated 8 ಡಿಸೆಂಬರ್ 2019, 2:13 IST
ಮಾಲ್ದಾರೆ ವ್ಯಾಪ್ತಿಯ ಒತ್ತುವರಿ ತೆರವುಗೊಂಡ ಜಾಗವನ್ನು ಪರಿಶೀಲಿಸಿದರು.
ಮಾಲ್ದಾರೆ ವ್ಯಾಪ್ತಿಯ ಒತ್ತುವರಿ ತೆರವುಗೊಂಡ ಜಾಗವನ್ನು ಪರಿಶೀಲಿಸಿದರು.   

ಸಿದ್ದಾಪುರ: ಸಂತ್ರಸ್ತರು ಪರಿಹಾರ ಕೇಂದ್ರದಿಂದ ತೆರಳಬೇಕೆಂದು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಮನವಿ ಮಾಡಿಕೊಂಡರು.

ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅಭ್ಯತ್ ಮಂಗಲ ಗ್ರಾಮದ ಸ.ನಂ 87/2 ಹಾಗೂ 87/4 ರಲ್ಲಿ ಒಟ್ಟು 7.70 ಏಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಾಗಿದೆ. ಈಗಾಗಲೇ ಜಾಗದಲ್ಲಿದ್ದ ಕಾಫಿ ಗಿಡಗಳನ್ನು ತೆರವುಗೊಳಿಸಲಾಗುತ್ತಿದ್ದು,ತ್ವರಿತ ಗತಿಯಲ್ಲಿ ಜಾಗ ಸಮತಟ್ಟು ಕಾಮಗಾರಿ ನಡೆಯಲಿದೆ. ಶೀಘ್ರದಲ್ಲೇ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಲಾಗುವುದು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಯೋಜನಾ ಅಧಿಕಾರಿಗಳು ಹಾಗೂ ಪುನರ್ವಸತಿ ನಿರ್ಮಾಣವನ್ನು ವಹಿಸಿಕೊಂಡಿರುವ ನಿರ್ಮಿತ ಕೇಂದ್ರದವರು ಪರಿಶೀಲನೆ ನಡೆಸಿದ್ದು, ಬಡಾವಣೆಯ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ತ್ವರಿತ ಗತಿಯಲ್ಲಿ ಪುನರ್ವಸತಿ ಒದಗಿಸಿಕೊಡುವುದರಿಂದ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ರೂಪದಲ್ಲಿ ₹50 ಸಾವಿರವನ್ನು ನೀಡಲಾಗುವುದು. ಕೂಡಲೇ ಪರಿಹಾರ ಕೇಂದ್ರ ಬಿಡಲು ತಿಳಿಸಿದರು. ಬಳಿಕ ಪರಿಹಾರ ಕೇಂದ್ರದ ಸಂತ್ರಸ್ತರು ತುರ್ತು ಸಭೆಯನ್ನು ನಡೆಸಿದ್ದಾರೆ.

ADVERTISEMENT

ಎ.ಸಿ ಭೇಟಿ: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಕೊಡಗು-ಶ್ರೀರಂಗಪಟ್ಟಣ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸುಮಾರು 5 ಎಕರೆ ಜಾಗವನ್ನು ಈ ಹಿಂದೆ ತೆರವುಗೊಳಿಸಲಾಗಿತ್ತು. ಬಳಿಕ ತಹಶೀಲ್ದಾರರಾಗಿದ್ದ ಪುರಂದರ ಅವರು ಜಾಗದಲ್ಲಿ ತೋಡು, ಜಲ ಮೂಲ ಇರುವುದಾಗಿ ವರದಿ ನೀಡಿದ್ದರು. ಹಾಗಾಗಿ ಸಂತ್ರಸ್ತರಿಗೆ ಜಾಗ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಇದೀಗ ಉಪವಿಭಾಗಾಧಿಕಾರಿ ಜವರೇಗೌಡ ಮಾಲ್ದಾರೆ ವ್ಯಾಪ್ತಿಯ ಜಾಗವನ್ನು ವೀಕ್ಷಿಸಿ ಪರಿಶೀಲಿಸಿದ್ದಾರೆ ಮಾಲ್ದಾರೆ ವ್ಯಾಪ್ತಿಯ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎ.ಸಿ. ತಿಳಿಸಿದರು.

ಸಮಸ್ಯೆ: ಅಂದಾಜಿನ ಪ್ರಕಾರ, ಪ್ರವಾಹದಿಂದ ನೆಲೆ ಕಳೆದುಕೊಂಡವರಲ್ಲಿ 56 ಕುಟುಂಬಗಳು 179 ಮಂದಿ ಶಾಲೆ ಉಳಿದಿದ್ದಾರೆ. ಇದಕ್ಕೆ ತಾಗಿಕೊಂಡಂತೇ ಹೊಸ ಶಾಲಾ ಕಟ್ಟಡವಿದ್ದು, ಇದರಿಂದ ನಿತ್ಯದ ಪಾಠ ಪ್ರವಚನ ನಡೆಸಲು ತೊಡಕು ಉಂಟಾಗಿದೆ. ಈ ಕಾರಣದಿಂದ ಉಪವಿಭಾಗಾಧಿಕಾರಿಯವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಹೋಬಳಿ ಉಪ ತಹಸೀಲ್ದಾರ್ ಚಿಣ್ಣಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ನೆಲ್ಯಹುದಿಕೇರಿ ಗ್ರಾಮಲೆಕ್ಕಿಗ ಸಂತೋಷ್, ಪಿ.ಡಿ.ಓ. ಅನಿಲ್ ಕುಮಾರ್, ಸಿದ್ದಾಪುರ ಗ್ರಾಮ ಲೆಕ್ಕಿಗರಾದ ಓಮಪ್ಪಬಣಾಕರ್, ಅನೀಸ್, ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್, ನೆಲ್ಯಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸೆಫಿಯಾ, ಹಾಗೂ ಗ್ರಾ.ಪಂ. ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.