ADVERTISEMENT

ಕೊಂಕಣ ರೈಲ್ವೆ: ಮುಂಗಾರು ವೇಳಾಪಟ್ಟಿ 10ರಿಂದ ಅನ್ವಯ

ಮಳೆಗಾಲಕ್ಕೆ ವಿವಿಧ ಸುರಕ್ಷತಾ ಕ್ರಮಗಳ ಜಾರಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 15:53 IST
Last Updated 2 ಜೂನ್ 2022, 15:53 IST
ಕೊಂಕಣ ರೈಲು ಮಾರ್ಗದಲ್ಲಿ ನಿಗಮದ ಕಾರ್ಮಿಕರು ಮುಂಗಾರು ಸಿದ್ಧತೆಯ ಕೆಲಸದಲ್ಲಿ ನಿರತರಾಗಿರುವುದು
ಕೊಂಕಣ ರೈಲು ಮಾರ್ಗದಲ್ಲಿ ನಿಗಮದ ಕಾರ್ಮಿಕರು ಮುಂಗಾರು ಸಿದ್ಧತೆಯ ಕೆಲಸದಲ್ಲಿ ನಿರತರಾಗಿರುವುದು   

ಕಾರವಾರ: ಕೊಂಕಣ ರೈಲ್ವೆಯ ಮುಂಗಾರು ಅವಧಿಯ ವೇಳಾಪಟ್ಟಿಯು ಜೂನ್ 10ರಂದು ಜಾರಿಯಾಗಲಿದ್ದು, ಅ.31ರವರೆಗೆ ಅನ್ವಯವಾಗಲಿದೆ. ಮುಂಗಾರಿನಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕೊಂಕಣ ರೈಲ್ವೆಯ 740 ಕಿ.ಮೀ ಉದ್ದದ ಮಾರ್ಗವು ಮುಂಗಾರಿನಲ್ಲಿ ಹೆಚ್ಚು ಮಳೆ ಬೀಳುವ ಕೊಂಕಣ ತೀರದಲ್ಲೇ ಸಾಗುತ್ತದೆ. ಹಾಗಾಗಿ, ಬೇಲಾಪುರ, ರತ್ನಗಿರಿ ಮತ್ತು ಮಡಗಾಂವ್‌ನ ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸಲಿವೆ.

ಸ್ವಯಂ ಚಾಲಿತ ಮಳೆ ಮಾಪಕ:

ADVERTISEMENT

ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೆ ಗಮನಿಸಲು ಕಾರವಾರ, ಭಟ್ಕಳ, ಉಡುಪಿ ಸೇರಿದಂತೆ ಒಂಬತ್ತು ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಮಳೆ ಮಾಪಕಗಳನ್ನು ಇಡಲಾಗಿದೆ. ಕಾಳಿ, ಸಾವಿತ್ರಿ ಹಾಗೂ ವಸಿಷ್ಠಿ ನದಿಗಳ ರೈಲ್ವೆ ಸೇತುವೆಗಳಿಗೆ ನೆರೆ ಮುನ್ಸೂಚಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಗಾಳಿಯ ವೇಗ ಅಳೆಯುವ ಮಾಪಕಗಳು ಪನ್ವೆಲ್, ಮಾಂಡೋವಿ ಸೇತುವೆ, ಜುವಾರಿ ಸೇತುವೆ ಮತ್ತು ಶರಾವತಿ ಸೇತುವೆಗಳಲ್ಲಿವೆ ಎಂದು ಕೊಂಕಣ ರೈಲ್ವೆಯ ಉಪ ಪ್ರಧಾನ ನಿರ್ದೇಶಕ ಗಿರೀಶ ಆರ್.ಕರಂಡಿಕರ್ ತಿಳಿಸಿದ್ದಾರೆ.

ಗುಡ್ಡಗಳ ಅಂಚಿನಲ್ಲಿ ಪರಿಶೀಲನೆ ನಡೆಸಿ, ಹಳಿಗಳ ಸಮೀಪದಲ್ಲಿ ಮಳೆ ನೀರು ಹರಿಯುವ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ಭೌಗೋಳಿಕ ಸುರಕ್ಷಾ ಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ಕಾರಣದಿಂದ ಈಚಿನ ವರ್ಷಗಳಲ್ಲಿ ಹಳಿಗಳ ಮೇಲೆ ಬಂಡೆಗಲ್ಲುಗಳು, ಮಣ್ಣು ಬೀಳುವಂಥ ಘಟನೆಗಳು ಗಣನೀಯವಾಗಿ ಇಳಿಕೆಯಾಗಿವೆ. ಹಾಗಾಗಿ ಈ ಮಾರ್ಗದಲ್ಲಿ ಒಂಬತ್ತು ವರ್ಷಗಳಿಂದ ರೈಲುಗಳ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯಗಳು ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ.

ಮುಂಗಾರು ಅವಧಿಯಲ್ಲಿ ‍846 ಸಿಬ್ಬಂದಿ ಕೊಂಕಣ ರೈಲ್ವೆ ಮಾರ್ಗದಲ್ಲಿ ನಿರಂತರ ಪರಿಶೀಲನೆ, ಗಸ್ತಿನಲ್ಲಿ ತೊಡಗಲಿದ್ದಾರೆ. ಗುರುತಿಸಲಾಗಿರುವ ಸೂಕ್ಷ್ಮ ಜಾಗಗಳಲ್ಲಿ ದಿನಪೂರ್ತಿ ನಿಗಾ ಇಡಲಾಗುವುದು. ಇಂಥ ಪ್ರದೇಶಗಳಲ್ಲಿ ರೈಲುಗಳ ವೇಗವನ್ನು ನಿರ್ಬಂಧಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮಣ್ಣು ತೆರವಿನಂಥ ಕಾರ್ಯಾಚರಣೆಗೆಂದು ಯಂತ್ರೋಪಕರಣಗಳನ್ನು ಸಿದ್ಧವಾಗಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರಿ ಮಳೆ ಸುರಿಯುವಾಗ ರೈಲುಗಳು ಗಂಟೆಗೆ 40 ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ಲೋಕೋ ಪೈಲಟ್‌ಗಳಿಗೆ ಸೂಚನೆ ನೀಡಲಾಗಿದೆ. ರತ್ನಗಿರಿ ಮತ್ತು ವೆರ್ನಾದಲ್ಲಿ ಅಪಘಾತ ಪರಿಹಾರ ವೈದ್ಯಕೀಯ ವಾಹನಗಳನ್ನು (ಎ.ಆರ್.ಎಂ.ವಿ) ಸಿದ್ಧವಿಡಲಾಗಿದೆ. ಇದರಲ್ಲಿ ಆಪರೇಷನ್ ಥಿಯೇಟರ್ ಮತ್ತು ತುರ್ತು ಚಿಕಿತ್ಸಾ ಸಲಕರಣೆಗಳಿವೆ. ಅಪಘಾತ ಪರಿಹಾರ ರೈಲನ್ನು ವೆರ್ನಾದಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿಗಮದ ಸುರಕ್ಷಾ ವಿಭಾಗದ ಸಿಬ್ಬಂದಿಗೆ ಮೊಬೈಲ್ ಫೋನ್‌ಗಳು, ಲೋಕೋ ಪೈಲಟ್‌ಗಳು ಮತ್ತು ಗಾರ್ಡ್‌ಗಳಿಗೆ ವಾಕಿ ಟಾಕಿಗಳನ್ನು ನೀಡಲಾಗಿದೆ. ಪ್ರತಿ ಒಂದು ಕಿಲೋಮೀಟರ್‌ಗೆ ಒಂದರಂತೆ ತುರ್ತು ಸಂವಹನ ಸಾಕೆಟ್‌ಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ರೈಲು ನಿಲ್ದಾಣಗಳಿಗೆ ಮಾಹಿತಿ ನೀಡಲು ಇವು ಸಹಕಾರಿಯಾಗಲಿವೆ ಎಂದು
ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.