ADVERTISEMENT

KPS ಮ್ಯಾಗ್ನೆಟ್ ಯೋಜನೆ| ವಿಲೀನ ಪಟ್ಟಿಯಲ್ಲಿ ಉ.ಕ ಜಿಲ್ಲೆಯ 1,655 ಶಾಲೆ: ಶಶಿಕಲಾ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:28 IST
Last Updated 28 ನವೆಂಬರ್ 2025, 4:28 IST
ಕಾರವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿನಯ್ ಚಂದ್ರ, ಜಿಲ್ಲಾ ಸಂಚಾಲಕಿ ಶಶಿಕಲಾ ಮೇಟಿ ಅವರು ಸರ್ಕಾರಿ ಶಾಲೆಗಳ ವಿಲೀನದ ಆದೇಶ ಪ್ರತಿ ಮತ್ತು ಆದೇಶ ವಿರೋಧಿಸಿ ಫಲಕ ಪ್ರದರ್ಶಿಸಿದರು
ಕಾರವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿನಯ್ ಚಂದ್ರ, ಜಿಲ್ಲಾ ಸಂಚಾಲಕಿ ಶಶಿಕಲಾ ಮೇಟಿ ಅವರು ಸರ್ಕಾರಿ ಶಾಲೆಗಳ ವಿಲೀನದ ಆದೇಶ ಪ್ರತಿ ಮತ್ತು ಆದೇಶ ವಿರೋಧಿಸಿ ಫಲಕ ಪ್ರದರ್ಶಿಸಿದರು   

ಕಾರವಾರ: ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವು 40ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘದ (ಎಐಡಿಎಸ್ಒ) ಜಿಲ್ಲಾ ಘಟಕದ ಸಂಚಾಲಕ ಶಶಿಕಲಾ ಮೇಟಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಶಿರಸಿ ಭಾಗದ 828, ಉತ್ತರ ಕನ್ನಡ ವಿಭಾಗದ 827 ಸೇರಿದಂತೆ ಒಟ್ಟು 1,655 ಶಾಲೆಗಳನ್ನು ಮುಚ್ಚಲು ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.

‘ಪೈಲಟ್ ಯೋಜನೆ ಅಡಿ ಜಾರಿಗೊಳಿಸಲು ರಾಮನಗರದ ಚನ್ನಪಟ್ಟಣ ತಾಲ್ಲೂಕಿನಲ್ಲಿ ಕೆಲ ಶಾಲೆಗಳನ್ನು ಸಮೀಪದ ಕೆಪಿಎಸ್‌ಗೆ ತುರ್ತಾಗಿ ವಿಲೀನಗೊಳಿಸಿ ಕ್ರಮಕೈಗೊಳ್ಳಲು ಆದೇಶಿಸಲಾಗಿದೆ. ಇದೇ ಸ್ಥಿತಿ ರಾಜ್ಯದ ಉಳಿದ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೂ ಬರಲಿದೆ. ಶಾಲೆಗಳ ಅಭಿವೃದ್ಧಿಯ ಹೆಸರಲ್ಲಿ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿದುಕೊಳ್ಳುವ ಸರ್ಕಾರದ ಘೋರ ಹುನ್ನಾರ ಇದಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ, ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಕೇವಲ ಶಾಲೆಗಳಷ್ಟೇ ಅಲ್ಲದೆ ರಾಜ್ಯದ ಸಾವಿರಾರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಕೂಡ ಮುಚ್ಚುವ ಅಪಾಯಕ್ಕೆ ಸಿಲುಕಿವೆ’ ಎಂದರು.

‘ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಇತರ ಕೆಲಸಗಳಿಗೆ ವಿನಿಯೋಗಿಸಲು ಸರ್ಕಾರವು ಮುಂದಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟಕ್ಕೆ ಮುಂದಾಗುವಂತೆ ಜನರಿಗೆ ಎಐಡಿಎಸ್‌ಓ ಕರೆ ನೀಡಿದೆ’ ಎಂದರು.

ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿನಯ್ ಚಂದ್ರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.