ADVERTISEMENT

ಕಾರವಾರ ವೈದ್ಯಕೀಯ ಕಾಲೇಜು: 124 ವಿದ್ಯಾರ್ಥಿಗಳು ಉತ್ತೀರ್ಣ

ಎಂ.ಬಿ.ಬಿ.ಎಸ್ ಮೊದಲ ಬ್ಯಾಚ್‌ನ (2016) ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:57 IST
Last Updated 2 ಮೇ 2021, 14:57 IST
ಸಹನಾ ನಾಯಕ
ಸಹನಾ ನಾಯಕ   

ಕಾರವಾರ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಎಂ.ಬಿ.ಬಿ.ಎಸ್ ಮೊದಲ ಬ್ಯಾಚ್‌ನ (2016) ಫಲಿತಾಂಶವನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 135 ವಿದ್ಯಾರ್ಥಿಗಳಲ್ಲಿ 124 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೂವರು ಡಿಸ್ಟಿಂಕ್ಷನ್‌ ಪಡೆದುಕೊಂಡಿದ್ದಾರೆ.

ಅಂಕೋಲಾದ ಸಹನಾ ನಾಯಕ ಶೇ 76.40 ಅಂಕಗಳೊಂದಿಗೆ ಕಾಲೇಜಿಗೆ ಮೊದಲಿಗರಾಗಿದ್ದಾರೆ. ತುಮಕೂರಿನ ಸುಮನಾ.ಎಸ್ ಶೇ 76 ಅಂಕ ದ್ವಿತೀಯ ಸ್ಥಾನ ಹಾಗೂ ಕಾರವಾರದ ಶ್ರೇಯಾ ದೇಸಾಯಿ ಶೇ 75.14 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 61 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು 60 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ಉತ್ತೀರ್ಣರಾದವರ ಪೈಕಿ 67 ವಿದ್ಯಾರ್ಥಿಗಳು ಮತ್ತು 57 ವಿದ್ಯಾರ್ಥಿನಿಯರಿದ್ದಾರೆ.

‘ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳೂ ಮೇ 4ರಿಂದ ಒಂದು ವರ್ಷ ಉತ್ತರ ಕನ್ನಡದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರನ್ನು ಕೋವಿಡ್ ಸಂಬಂಧಿತ ಕರ್ತವ‌್ಯಗಳಿಗೆ ಮುಖ್ಯವಾಗಿ ನಿಯೋಜಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ವೈದ್ಯರ ಕೊರತೆಗೆ ಪರಿಹಾರ ಸಿಕ್ಕಿದಂತಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.