
ಮುಂಡಗೋಡ: ಶಿರಸಿ ಮಾರ್ಗದಲ್ಲಿ ಬಸ್ ಹೋಗುವುದಿಲ್ಲ ಎಂದು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿದ ನಿರ್ವಾಹಕ, ಪುನಃ ಅದೇ ಮಾರ್ಗದಲ್ಲಿ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿ, ಇಲ್ಲಿನ ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕನನ್ನು ಪ್ರಯಾಣಿಕರು ಗುರುವಾರ ತರಾಟೆಗೆ ತೆಗೆದುಕೊಂಡರು.
ಹುಬ್ಬಳ್ಳಿ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ನಲ್ಲಿ ಮುಂಡಗೋಡ ಹಾಗೂ ಶಿರಸಿ ಕಡೆ ಹೋಗುವ ಪ್ರಯಾಣಿಕರು ಹತ್ತಿದ್ದಾರೆ. ಆದರೆ, ನಿರ್ವಾಹಕ ಬಸ್ ಅಂಕೋಲಾ ಮಾರ್ಗದಲ್ಲಿ ಸಂಚರಿಸುತ್ತದೆ ಎಂದು ಹೇಳಿದ್ದರಿಂದ ಪ್ರಯಾಣಿಕರು ಇಳಿದು, ಬೇರೆ ಬಸ್ ಹತ್ತಿದ್ದಾರೆ. ಆದರೆ, ಕೆಲವೇ ನಿಮಿಷಗಳ ಅಂತರದಲ್ಲಿ, ಅದೇ ಬಸ್ ಮುಂಡಗೋಡ ಮಾರ್ಗದಲ್ಲಿಯೇ ಹಿಂದಿನಿಂದ ಬಂದಿದೆ.
ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗಡದುಕೊಂಡು ಮರಳಿ ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ಅಂಕೋಲಾ ಮಾರ್ಗದಲ್ಲಿಯೇ ಪ್ರಯಾಣ ಮುಂದುವರಿಸಿ ಎಂದು ತಾಕೀತು ಮಾಡಿದರು. ಇದರಿಂದ ಕೆಲ ಕಾಲ ವಾಗ್ವಾದ ನಡೆಯಿತು.
ಸಿಪಿಐ ರಂಗನಾಥ ನೀಲಮ್ಮನವರ ಸ್ಥಳಕ್ಕೆ ಭೇಟಿ ನೀಡಿ, ಚಾಲಕ, ನಿರ್ವಾಹಕರೊಂದಿಗೆ ಚರ್ಚಿಸಿದರು.
ʼಮೊದಲಿಗೆ ಅಂಕೋಲಾ ಮಾರ್ಗದಲ್ಲಿ ಹೋಗು ಎಂದು ತಿಳಿಸಿದ್ದ ನಿಲ್ದಾಣಧಿಕಾರಿ, ನಂತರ ಶಿರಸಿ ಮಾರ್ಗದಲ್ಲಿಯೇ ಹೋಗುವಂತೆ ಎಂದು ತಿಳಿಸಿದ್ದರು ಎಂದು ನಿರ್ವಾಹಕ ವಿವರಿಸಿದರು.
ಬಂಕಾಪುರದಿಂದ ಮುಂಡಗೋಡಕ್ಕೆ ಸಂಜೆ 5ಕ್ಕೆ ಹೊರಡಬೇಕಿದ್ದ ಬಸ್ ಎರಡು ಗಂಟೆ ತಡವಾಗಿ ಬಿಟ್ಟಿದೆ. ಈ ಕುರಿತು ಚಾಲಕನಿಗೆ ಕೇಳಿದರೆ, ರಸ್ತೆಯಲ್ಲಿ ಕಬ್ಬಿನ ಗಾಡಿ ಬಿದ್ದಿದೆ. ಅದಕ್ಕಾಗಿ ತಡವಾಗಿ ಬಿಡುತ್ತೇನೆ ಎಂದರು. ಆದರೆ, ಮಾರ್ಗದಲ್ಲಿ ಯಾವುದೇ ಕಬ್ಬಿನ ಗಾಡಿ ಬಿದ್ದಿರುವ ಕುರುಹು ಅಥವಾ ಮಾಹಿತಿ ಸಿಗಲಿಲ್ಲ.
ಬೇಕಂತಲೇ ತಡ ಮಾಡಿದ್ದಾರೆ ಎಂದು ಪ್ರಯಾಣಿಕರು ಇಲ್ಲಿನ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿಯೇ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ನಂತರ ಪೊಲೀಸರು ಬಂದು ಬಸ್ ಹೋಗಲು ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.