ಮುಂಡಗೋಡ: ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಯ ಮುಷ್ಕರದಿಂದ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸಂಚರಿಸುವ ಬಸ್‌ಗಳ ಮಾರ್ಗದಲ್ಲಿ ಹೆಚ್ಚು ವ್ಯತ್ಯಯವಾಗಲಿಲ್ಲ. ಆದರೆ, ದೂರದ ಊರುಗಳಿಗೆ ಹೋಗುವ ಬಸ್‌ಗಳು ಮಾತ್ರ ಗಂಟೆಗೊಂದರಂತೆ ನಿಲ್ದಾಣಕ್ಕೆ ಬಂದಿದ್ದರಿಂದ ಶಿರಸಿ, ಹುಬ್ಬಳ್ಳಿ ಸೇರಿದಂತೆ ಇನ್ನಿತರ ದೂರದ ಊರಿಗೆ ಹೋಗುವ ಪ್ರಯಾಣಿಕರು ಪರದಾಡಿದರು.
ಕಲಘಟಗಿ, ಬಂಕಾಪುರ, ಯಲ್ಲಾಪುರ ಮಾರ್ಗಗಳಲ್ಲಿ ಬಸ್ ಸಂಚಾರ ಇತ್ತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿ ಮಂಗಳವಾರ ನಡೆಸಿದ ಮುಷ್ಕರದಿಂದ, ನಿತ್ಯ ಕೆಲಸಕ್ಕೆ ಹೋಗುವ ನೌಕರರು, ಸಾರ್ವಜನಿಕರು ಹೆಚ್ಚು ತೊಂದರೆ ಅನುಭವಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಕೆಲಸ ಮಾಡಲು, ದೂರದ ಶಿರಸಿ, ಹುಬ್ಬಳ್ಳಿಯಿಂದ ಬರುವ ಶಿಕ್ಷಕರು, ಬಸ್ ಸಮಸ್ಯೆಯಿಂದ ತಡವಾಗಿ ಶಾಲೆಗೆ ಬಂದರು. ಬಸ್ ಸಿಗದೇ, ಕೆಲವರು ಕೆಲಸಕ್ಕೆ ಹೋಗಲಾಗದೇ ಮನೆಗೆ ಮರಳಿದರು. ಕೆಲವು ಖಾಸಗಿ ವಾಹನಗಳು ಪರಿಸ್ಥಿತಿಯ ಲಾಭ ಪಡೆಯಲು ದರ ಹೆಚ್ಚಿಸಿದ್ದರಿಂದ, ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಸಂಚರಿಸಲಿಲ್ಲ. ಪಟ್ಟಣದ ಕೆಲವು ಶಾಲೆಗಳು ಮಧ್ಯಾಹ್ನದ ವೇಳೆಗೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟರು. ಸಂಜೆಯ ವೇಳೆಗೆ ಬಸ್ ಸಮಸ್ಯೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಪರದಾಡಬಾರದು ಎಂದು ಕೆಲವು ಗಂಟೆಗಳ ಮೊದಲೇ ವಿದ್ಯಾರ್ಥಿಗಳನ್ನು ಕಳಿಸಲಾಯಿತು.
ಶೇ 50ರಷ್ಟು ಬಸ್ ಸಂಚಾರ
‘ಸಾರಿಗೆ ಸಿಬ್ಬಂದಿ ಮುಷ್ಕರದಿಂದ ವೇಗದೂತ ಬಸ್‌ಗಳು ಬೆರಳೆಣಿಕೆಯಷ್ಟು ಸಂಚರಿಸಿದವು. ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಓಡಾಟಕ್ಕೆ ತೊಂದರೆಯಾಗಿಲ್ಲ. ಮಧ್ಯಾಹ್ನದ ವೇಳೆಗೆ ಶೇ 50ರಷ್ಟು ಬಸ್‌ಗಳು ಮಾತ್ರ ಸಂಚರಿಸಿವೆ. ಶಿರಸಿ-ಹುಬ್ಬಳ್ಳಿ ಬಸ್‌ಗಳ ಓಡಾಟದಲ್ಲಿಯೂ ವ್ಯತ್ಯಯವಾಗಿದೆʼ ಎಂದು ನಿಲ್ದಾಣಾಧಿಕಾರಿ ಫಕ್ರುಸಾಬ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.