
ಕುಮಟಾ (ದಿವಂಗತ ಆರ್.ಬಿ. ನಾಯಕ ವೇದಿಕೆ): ‘ಕುಮಟಾದ ಬದುಕಿನ ಬಿತ್ತನೆ, ಹೊಲದ ಗಂಧ, ಸಮುದ್ರದ ನಾದ, ಹಬ್ಬದ ಹರ್ಷ, ದುಡಿಮೆ ಬೆವರು ಇಲ್ಲಿಯ ಜನ– ಜೀವನೋತ್ಸಾಹ ಇಮ್ಮಡಿಸಿದೆ. ಇಲ್ಲಿ ಬಿತ್ತಿ ಬೆಳೆದ ಸಾಹಿತ್ಯ, ಇಲ್ಲಿಯದೆ ಮಣ್ಣಿನ ಕಂಪನ್ನು ಸೂಸುವ ಮೂಲಕ ಕನ್ನಡ ನಾಡಿನ ಗಮನ ಸೆಳೆದಿದೆ’ ಎಂದು ಸಮ್ಮೇಳನಾಧ್ಯಕ್ಷ ಬೀರಣ್ಣ ನಾಯಕ ಹೇಳಿದರು.
ತಾಲ್ಲೂಕಿನ ಹಿರೇಗುತ್ತಿಯಲ್ಲಿ ಭಾನುವಾರ ನಡೆದ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಮುಕುಟದಂತಿರುವ ಕುಮಟಾ, ಸಾಹಿತ್ಯಿಕವಾಗಿ ನಾಡಿಗೆ ಕೊಟ್ಟ ಕೊಡುಗೆ ಅನನ್ಯವಾದುದು. ಆದರೆ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ನಾಲ್ಕು ಬಾರಿ ನಡೆದರೂ ಒಮ್ಮೆಯೂ ಜಿಲ್ಲೆಯ ಸಾಹಿತಿಗಳು ಸಮ್ಮೇಳನದ ಅಧ್ಯಕ್ಷರಾಗಲಿಲ್ಲ. ನಮ್ಮದೇ ಜಿಲ್ಲೆಯ ‘ಪಂಪ ಪ್ರಶಸ್ತಿ’ ನಮ್ಮ ಜಿಲ್ಲೆಯ ಸಾಹಿತಿಗಳಿಗೆ ಇನ್ನೂ ಸಿಗಲಿಲ್ಲ’ ಎಂದರು.
‘ಜಿಲ್ಲೆಗೆ ಯಾವುದೇ ಯೋಜನೆಗಳು ಬಂದರೂ ಅವು ನಮ್ಮ ಮಣ್ಣು, ನೀರು, ಜನಜೀವನಕ್ಕೆ ಧಕ್ಕೆಯಾಗುತ್ತಿವೆಯೇ ಎನ್ನುವುದನ್ನು ಜಿಲ್ಲೆಯ ಜನರು ವಿವೇಕಯುತವಾಗಿ ಯೋಚಿಸುವಂತಾಬೇಕು. ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅಂಕೋಲಾ–ಹುಬ್ಬಳ್ಳಿ ರೈಲು ಇನ್ನು ಕನಸಾಗಿಯೇ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ, ‘ಸರ್ಕಾರದ ಮಟ್ಟದಲ್ಲಿ ಪುಸ್ತಕಗಳ ಖರೀದಿ ಕೆಲಸ ಆಗುತ್ತಿಲ್ಲ’ ಎಂದು ವಿಷಾದಿಸಿದರು.
ಕಾರ್ಯಕ್ರಮವನ್ನು ಸಾಹಿತಿ ನರೇಂದ್ರ ರೈ ದೇರ್ಲ, ಪುಸ್ತಕ ಮಳಿಗೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಹೊನ್ನಪ್ಪ ನಾಯಕ, ಎನ.ಆರ್.ಗಜು, ವಿನಾಯಕ ದೇಶಭಂಡಾರಿ, ಉದ್ದಂಡ ಗಾಂವ್ಕರ್, ಶ್ರೀಪಾದ ಶೆಟ್ಟಿ, ಭಾಸ್ಕರ ಪಟಗಾರ ಮಾತನಾಡಿದರು.
ತಹಶೀಲ್ದಾರ್ ಕೃಷ್ಣ ಕಾಮಕರ್ ಧ್ವಜಾರೋಹಣ ನೆರವೇರಿಸಿದರು. ಗೋಕರ್ಣ ಪಿಎಸ್‌ಐ ಶ್ರೀಧರ ಎಸ್.ಆರ್. ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಂ.ಎಚ್. ನಾಯ್ಕ ಧ್ವಜ ಹಸ್ತಾಂತರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದ ನಾಯ್ಕ, ಇ.ಒ ಆರ್.ಎಲ್. ಭಟ್ಟ, ಪ್ರದೀಪ ನಾಯಕ, ಆನಂದು ಗಾಂವ್ಕರ್, ರವೀಂದ್ರ ಭಟ್ಟ ಸೂರಿ, ಪಿ.ಆರ್. ನಾಯ್ಕ, ಆಕಾಶ ನಾಯಕ, ಶ್ರೀಧರ ಗೌಡ ಉಪ್ಪಿನಗಣಪತಿ, ದೀಪಾ ಹಿರೇಗುತ್ತಿ, ಶ್ರೀದೇವಿ ಕೆರೆಮನೆ, ರಾಜೀವ ನಾಯ್ಕ ಕೋನಳ್ಳಿ, ಮಂಜುನಾಥ ಗಾಂವ್ಕರ್, ಶಾಂತ ನಾಯಕ, ವೆಂಕಮ್ಮ ಹರಿಕಂತ್ರ ಇದ್ದರು.
ನಾವು ಅತಿರೇಕದ ಕಾಲಘಟ್ಟದಲ್ಲಿರುವಾಗ ಸಾಹಿತ್ಯ ಸಮ್ಮೇಳನದಂಥ ಒಗ್ಗೂಡಿವಿಕೆ ಮಹತ್ವದ ಪಾತ್ರ ವಹಿಸುತ್ತಿದೆ. ಸಾಹಿತ್ಯವನ್ನು ಮನೆ ಮನೆಗೆ ಹಂಚಿದ ಹೆಮ್ಮೆ ಹಿರೇಗುತ್ತಿಗೆ ಊರಿಗಿದೆನರೇಂದ್ರ ರೈ ದೇರ್ಲ ಸಾಹಿತಿ
ನಮ್ಮ ಜಿಲ್ಲೆಯ ಗಡಿ ಭಾಗಗಳು ಬೇರೆ ಬೇರೆ ಭಾಷೆಗಳನ್ನು ಅಪ್ಪಿಕೊಂಡು ಪೊರೆಯುವ ಕೆಲಸ ಮಾಡುತ್ತಿರುವುದು ಇಲ್ಲಿಯ ಜನರ ಸಹೃದಯತೆ ಸೌಹಾರ್ದತೆಗೆ ಸಾಕ್ಷಿದಿನಕರ ಶೆಟ್ಟಿ , ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.