
ಕುಮಟಾ: ‘ಪಶ್ಚಿಮ ಘಟ್ಟದ ಜೊತೆಗೆ ಕರಾವಳಿ ಹಾಗೂ ಅದನ್ನು ಸೇರುವ ಅಘನಾಶಿನಿ, ಬೇಡ್ತಿ, ಶರಾವತಿ ಕಣಿವೆಗಳ ರಕ್ಷಣೆಗೆ ಇನ್ನಷ್ಟು ಜನಾಂದೋಲನ ನಡೆಯುವುದು ಅನಿವಾರ್ಯವಾಗಿದೆ' ಎಂದು ಶಿರಸಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ಮಂಗಳವಾರ ನದಿ ತಿರುವು ಯೋಜನೆಗಳಿಗೆ ಪ್ರಬಲ ವಿರೋಧಕ್ಕೆ ತಾಲೀಮು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಘನಾಶಿನಿ-ಬೇಡ್ತಿ ನದಿ ತಿರುವು ಯೋಜನೆ ಬಗ್ಗೆ ನಡೆಸಿದ ಸಮಾವೇಶ ಸರ್ಕಾರಕ್ಕೆ ಗಟ್ಟಿ ಸಂದೇಶ ರವಾನಿಸಿದೆ. ಅದೇ ರೀತಿ ಕರಾವಳಿ ಭಾಗದಲ್ಲಿ ರೈತರು, ಮೀನುಗಾರರು, ಸಾರ್ವಜನಿಕರು ಈ ಮಾರಕ ಯೋಜನೆಗಳ ಬಗ್ಗೆ ಬೃಹತ್ ಜನಾಂದೋಲನಕ್ಕೆ ಸಜ್ಜಾಗಬೇಕಿದೆ' ಎಂದರು.
ಪರಿಸರವಾದಿ ಅನಂತ ಹೆಗಡೆ ಅಶೀಸರ, ‘ಅಘನಾಶಿನಿ ಹಾಗೂ ಗಂಗಾವಳಿ ನದಿ ದಡದ ಪ್ರದೇಶದ ಜನರು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಾಂದೋಲನಕ್ಕೆ ಜಾಗೃತಿ ನಡೆಸುವ ಅಗತ್ಯವಿದೆ' ಎಂದರು.
ಸಂಘಟಕ ಡಾ.ಸುರೇಶ ಹೆಗಡೆ ` ಕುಮಟಾ ಶಾಸಕರ ನೇತೃತ್ವದಲ್ಲಿ ಆಗಲೇ ಸಭೆ ನಡೆಸಲಗಿದ್ದು, ಫೆ. 9ಕ್ಕೆ ಇಲ್ಲಿ ಪ್ರತಿಭಟನೆ ನಡೆಸಲಾಗುವುದು' ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಎಂ.ಡಿ. ಸುಭಾಶ್ಚಂದ್ರನ್, `ಮಾರ್ಚ್ನಲ್ಲಿ ಅಘನಾಶಿನಿ ಕುರಿತ ವಿಜ್ಞಾನಿಗಳ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ' ಎಂದರು. ಜೀವ ವಿಜ್ಞಾನಿಗಳಾದ ಡಾ. ವಿ.ಎನ್. ನಾಯಕ, ಡಾ. ಮಹಾಬಲೇಶ್ವರ, ಡಾ. ಪ್ರಕಾಶ್, ವಿಕಾಸ್ ತಾಂಡೇಲ, ಮುರಳೀಧರ ಪ್ರಭು, ವಿನೋದ ಪ್ರಭು, ಉಲ್ಲಾಸ ನಾಯ್ಕ, ಎಂ.ಜಿ. ಭಟ್ಟ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.