ADVERTISEMENT

ಕುಮಟಾ: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯತಿಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:29 IST
Last Updated 15 ಅಕ್ಟೋಬರ್ 2025, 5:29 IST
ಕುಮಟಾ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಮಾತನಾಡಿದರು
ಕುಮಟಾ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಮಾತನಾಡಿದರು   

ಕುಮಟಾ: ‘ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಾಕಿಯಿರಿಸಿಕೊಂಡಿದ್ದು, ಮಿರ್ಜಾನ ಗ್ರಾಮ ಪಂಚಾಯಿತಿಯೊಂದರಿಂದಲೇ ₹17.50 ಲಕ್ಷ ಬಾಕಿಯಿದೆ’ ಎಂದು ಮಂಗಳವಾರ ನಡೆದ ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇ.ಒ ಆರ್.ಎಲ್. ಭಟ್ಟ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ, ‘ಇಷ್ಟೊಂದು ದೊಡ್ಡ ಮೊತ್ತದ ವಿದ್ಯುತ್ ಬಿಲ್ ಗ್ರಾಮ ಪಂಚಾಯಿತಿಗಳಿಗೆ ತೀವ್ರ ಹೊರೆಯಾಗುತ್ತದೆ. ಎಷ್ಟೋ ಗ್ರಾಮ ಪಂಚಾಯಿತಿಗಳಲ್ಲಿ ಬೆಳಿಗ್ಗೆ 10 ಗಂಟೆಯಾದರೂ ಉರಿಯುತ್ತಿರುವ ಬೀದಿ ದೀಪಗಳನ್ನು ಆರಿಸುವುದಿಲ್ಲ. ಪಿ.ಡಿ.ಒ ಗಳಿಗೆ ನೋಟಿಸ್ ನೀಡಿ’ ಎಂದು ತಿಳಿಸಿದರು.

‘ಆರೋಗ್ಯ ಇಲಾಖೆಯ ಕಟ್ಟಡ ದುರಸ್ತಿ ಸಹಿತ ಯಾವುದೇ ಚಿಕ್ಕ ಮೊತ್ತದ ಅನುದಾನವಿದ್ದರೂ ಅದು ವಾಪಸು ಹೋಗದಂತೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯಂಥ ಸಾಮಾಜಿಕ ಕಾರ್ಯಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಗ್ರಾಮ ಪಂಚಾಯಿತಿ ಕರ ಆಕರಣೆ ನಿಯಮದಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ADVERTISEMENT

ಬೊಗರಿಬೈಲದ ಅಘನಾಶಿನಿ ಸೇತುವೆ ಪಕ್ಕದ ಸರ್ವಿಸ್ ರಸ್ತೆ ಅತಿಕ್ರಮಿಸಿಕೊಂಡಿದ್ದನ್ನು ತೆರವುಗೊಳಿಸಲು ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳಿಗೆ ಸೂಚಿಸಲು ನಿರ್ಣಯಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ, ‘ತಾಲ್ಲೂಕಿನಲ್ಲಿ 45,130 ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಸುಮಾರು 21 ಸಾವಿರ ಜನರ ಸಮೀಕ್ಷೆ ಬಾಕಿ ಇದೆ. ಪಟ್ಟಣ ಹಾಗೂ ಗೋಕರ್ಣ ಭಾಗದಲ್ಲಿ ಕೆಲವರು ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ’ ಎಂದರು.

ತಾಲ್ಲೂಕು ಆಸ್ಪತ್ರೆಯ ಅಧಿಕಾರಿ ನಾಗಶ್ರೀ, ‘ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರಿಲ್ಲದ ಕಾರಣ ಹೆರಿಗೆ ಮಾಡಿಸಲು ಆಗುತ್ತಿಲ್ಲ. ಕುಟುಂಬ ಯೋಜನಾ ಕಾರ್ಯಕ್ರಮಗಳಲ್ಲಿ ಪ್ರಗತಿ ಕಾಣುತ್ತಿಲ್ಲ. ಬೇರೆ ಬೇರೆ ಅನಾರೋಗ್ಯ ಕಾರಣಗಳಿಂದ ಒಂದೂವರೆ ತಿಂಗಳಲ್ಲಿ ಆಸ್ಪತ್ರೆಯಲ್ಲಿ 11 ಜನರು ಮೃತಪಟ್ಟಿದ್ದಾರೆ’ ಎಂದರು.

ಟಿ.ಎಚ್.ಒ ಡಾ. ಆಜ್ಞಾ ನಾಯಕ, ‘ಅತ್ಯಂತ ಕ್ಲಿಷ್ಟಕರ ಆರೋಗ್ಯ ಸ್ಥಿತಿಯಿದ್ದ ಮಗುವೊಂದಕ್ಕೆ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.