ADVERTISEMENT

ಕುಮಟಾ: ಬೇಸಿಗೆಗೆ ‘ಬಹು ಗ್ರಾಮ’ಕ್ಕೆ ಹರಿಯಲಿದೆ ನೀರು

ಎಂ.ಜಿ ನಾಯ್ಕ
Published 1 ಅಕ್ಟೋಬರ್ 2025, 6:06 IST
Last Updated 1 ಅಕ್ಟೋಬರ್ 2025, 6:06 IST
<div class="paragraphs"><p>ಕುಮಟಾ ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸಲು ಕವಲೋಡಿ ಬಳಿ ಅಘನಾಶಿನಿ ನದಿಗೆ ಜಾಕೆಲ್ ನಿರ್ಮಿಸಿರುವ ಪ್ರದೇಶ</p></div>

ಕುಮಟಾ ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸಲು ಕವಲೋಡಿ ಬಳಿ ಅಘನಾಶಿನಿ ನದಿಗೆ ಜಾಕೆಲ್ ನಿರ್ಮಿಸಿರುವ ಪ್ರದೇಶ

   

ಕುಮಟಾ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಹದಿನೈದು ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಸುವ ಸುಮಾರು ₹169 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 2026ರ ಬೇಸಿಗೆಯಲ್ಲಿ ಸಾರ್ವಜನಿಕರ ಬಳಕೆಗೆ ಸಿಗುವ ಬಗ್ಗೆ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೆ ಅಘನಾಶಿನಿ ನದಿಯ ಮರಾಕಲ್ ಯೋಜನೆಯ ಕುಡಿಯುವ ನೀರು ಕುಮಟಾ-ಹೊನ್ನಾವರ ಅವಳಿ ಪಟ್ಟಣಗಳಿಗೆ ಬಳಕೆಯಾಗುತ್ತಿತ್ತು. ಹೊನ್ನಾವರದಲ್ಲಿ ಶರಾವತಿ ಯೋಜನೆ ಅನುಷ್ಠಾನಕ್ಕೆ ಬಂದ ಮೇಲೆ ಕುಮಟಾದಿಂದ ಹೊನ್ನಾವರಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ADVERTISEMENT

‘ಹೊಸ ಯೋಜನೆಯನ್ನು ಮಂಗಳೂರಿನ ಸುಪ್ರದಾ ಕನಸ್ಟ್ರಕ್ಷನ್ ಕಂಪನಿ ನಿರ್ವಹಿಸುತ್ತಿದೆ. ಯೋಜನೆ ಪ್ರಕಾರ ಅಘನಾಶಿನಿ ನದಿಯ ಕವಲೋಡಿ ಎಂಬಲ್ಲಿ ನಿರ್ಮಿಸಿರುವ ಜಾಕ್ವಲ್‌ನಿಂದ ನಿತ್ಯ ಸುಮಾರು 60 ಲಕ್ಷ ಲೀಟರ್ ನೀರನ್ನು 110 ಅಶ್ವ ಸಾಮರ್ಥ್ಯದ (ಎಚ್‌ಪಿ) ಪಂಪ್ ಮೂಲಕ ಎತ್ತಿ ಐದು ಕಿ.ಮೀ ದೂರದಲ್ಲಿರುವ ಮರಾಕಲ್‌ನ ಶುದ್ಧೀಕರಣ ಕೇಂದ್ರಕ್ಕೆ ಕಳಿಸಲಾಗುತ್ತದೆ. ಬಳಕೆಗೆ ಯೋಗ್ಯವಾದ ನೀರನ್ನು ಅಲ್ಲಿಂದ ಸುಮಾರು 250 ಎಚ್‍ಪಿ ಪಂಪ್ ಮೂಲಕ ತಾಲ್ಲೂಕಿನ ನಾಲ್ಕು ಕಡೆ ನಿರ್ಮಿಸಿರುವ ಬೃಹತ್ ಟ್ಯಾಂಕ್‌ಗಳ ಮೂಲಕ ಆಯಾ ಗ್ರಾಮ ಪಂಚಾಯಿತಿಗೆ ಪೂರೈಕೆ ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ರಾಘವೇಂದ್ರ ನಾಯ್ಕ ತಿಳಿಸಿದರು.

‘15 ಗ್ರಾಮ ಪಂಚಾಯಿತಿಗಳಿಗೆ ಪೈಪ್‍ಲೈನ್ ಅಳವಡಿಸುವ ಕಾರ್ಯ ಮುಗಿಯುತ್ತಿದೆ. ಮೂರೂರು- ಕಲ್ಲಬ್ಬೆ, ವಾಲಗಳ್ಳಿ, ಕಲ್ಗುಡ್ಡ ಹಾಗೂ ದೀವಗಿ ಬಳಿ ನೀರು ಸಂಗ್ರಹಿಸುವ 4 ಬೃಹತ್ ಟ್ಯಾಂಕ್‌ಗಳು ಅರಣ್ಯ ಇಲಾಖೆ ಜಾಗದಲ್ಲಿ ಬರುತ್ತಿವೆ. ಜಾಗ ಬಳಕೆಗೆ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ 26 ಸಣ್ಣ ಟ್ಯಾಂಕ್ ಗಳ ನಿರ್ಮಾಣ ಕಾಮಗಾರಿ ಕೂಡ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ಡಿಸಿಎಫ್ ಜೊತೆ ಚರ್ಚೆ
‘ನಾಲ್ಕು ಬೃಹತ್ ಟ್ಯಾಂಕ್‌ಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಜಾಗ ಮಂಜೂರು ಪ್ರಕ್ರಿಯೆಗೆ ಪ್ರಯತ್ನಿಸುತ್ತಿದ್ದು, ಡಿಸಿಎಫ್ ಜೊತೆ ಈ ಬಗ್ಗೆ ಸಭೆ ನಡೆಸಿದ್ದೇನೆ. ಕಾಮಗಾರಿಗಳು ಸರಿಯಾಗಿ ನಡೆದರೆ ಬರುವ ಬೇಸಿಗೆಯಲ್ಲಿ ಜನರ ಬಳಕೆಗೆ ನೀರು ಸಿಗಲಿದೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.