ADVERTISEMENT

ಕುಮಟಾ | ಸೊರಗಿದ ಕೃಷಿ ಸಂಶೋಧನಾ ಕೇಂದ್ರ

ಬೆಳೆಯುತ್ತಿಲ್ಲ ನಿರೀಕ್ಷಿತ ಪ್ರಮಾಣದ ಭತ್ತ: ಅನುದಾನದ ಕೊರತೆ

ಎಂ.ಜಿ.ನಾಯ್ಕ
Published 1 ಆಗಸ್ಟ್ 2025, 6:18 IST
Last Updated 1 ಆಗಸ್ಟ್ 2025, 6:18 IST
 ಕುಮಟಾದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಗದ್ದೆಯಲ್ಲಿ ಎಂ.ಒ-4 ಭತ್ತ ಬೀಜ ಉತ್ಪಾದನೆಗಾಗಿ ನಾಟಿ ಮಾಡಿರುವುದು
 ಕುಮಟಾದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಗದ್ದೆಯಲ್ಲಿ ಎಂ.ಒ-4 ಭತ್ತ ಬೀಜ ಉತ್ಪಾದನೆಗಾಗಿ ನಾಟಿ ಮಾಡಿರುವುದು   

ಕುಮಟಾ: ಪಟ್ಟಣದಲ್ಲಿರುವ ಜಿಲ್ಲೆಯ ಏಕೈಕ ಕೃಷಿ ಸಂಶೋಧನಾ ಕೇಂದ್ರ ನಿರೀಕ್ಷಿತ ಪ್ರಮಾಣದಲ್ಲಿ ಭತ್ತದ ತಳಿ ಬೆಳೆಸುತ್ತಿಲ್ಲ, ಇರುವ ಭೂಮಿಯ ಪೈಕಿ ಬಹುತೇಕ ಕೃಷಿಗೆ ಬಳಕೆ ಆಗುತ್ತಲೇ ಇಲ್ಲ ಎಂಬ ದೂರು ಹೆಚ್ಚಿದೆ.

ಪಟ್ಟಣದ ಹೃದಯ ಭಾಗದಲ್ಲಿ, ಕೃಷಿ ಇಲಾಖೆಗೆ ಸೇರಿದ ಸುಮಾರು 20 ಎಕರೆ ಪ್ರದೇಶವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿನ ಸಂಶೋಧನಾ ಕೇಂದ್ರಕ್ಕೆ ಲೀಸ್ ಆಧಾರದಲ್ಲಿ ನೀಡಲಾಗಿದೆ. ಇಷ್ಟೊಂದು ಜಾಗವಿದ್ದರೂ ನಿರೀಕ್ಷಿತ ಪ್ರಮಾಣದಷ್ಟು ಭತ್ತ ಉತ್ಪಾದನೆ ನಡೆಯುತ್ತಿಲ್ಲ ಎಂಬುದು ಪ್ರಗತಿಪರ ಕೃಷಿಕರ ದೂರು.

‘ಭತ್ತ ಸಂಶೋಧನಾ ಕೇಂದ್ರ ವಿವಿಧ ತಳಿಯ ಭತ್ತಗಳನ್ನು ಪ್ರಾಯೋಗಿಕವಾಗಿ ಬೆಳೆದು, ರೈತರಿಗೆ ಮಾದರಿ ಪಾಠ ಹೇಳಿಕೊಡಬೇಕು. ಹೊಸ ತಳಿಯ ಬೀಜಗಳ ಉತ್ಪಾದನೆ ನಡೆಸಬೇಕು. ಆದರೆ, ಇಲ್ಲಿಯೇ ಕಡಿಮೆ ಪ್ರಮಾಣದಲ್ಲಿ ಫಸಲು ತೆಗೆದರೆ ರೈತರಿಗೆ ಆತ್ಮವಿಶ್ವಾಸ ಮೂಡುವುದಾದರೂ ಹೇಗೆ?’ ಎಂದು ಭತ್ತ ಬೆಳೆಗಾರರೊಬ್ಬರು ಪ್ರಶ್ನಿಸಿದರು.

ADVERTISEMENT

‘ಸಂಶೋಧನಾ ಕೇಂದ್ರವು ನಿಗದಿತ ತಳಿಯ ಭತ್ತದ ಬೀಜಗಳನ್ನು ಉತ್ಪಾದಿಸಿ, ವಿಶ್ವವಿದ್ಯಾಲಯಕ್ಕೆ ಪೂರೈಸುತ್ತದೆ. 20 ಎಕರೆ ಜಾಗದಲ್ಲಿ ಪ್ರತೀ ವರ್ಷ 150 ಕ್ವಿಂಟಲ್ ಎಂ.ಒ–4 ಭತ್ತದ ಬೀಜ, ಬೇಸಿಗೆಯಲ್ಲಿ 10 ಕ್ವಿಂಟಲ್ ಉದ್ದಿನ ಬೀಜ ಮಾತ್ರ ಉತ್ಪಾದಿಸಲಾಗುತ್ತಿದೆ’ ಎಂದು ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಮಂಜು ಎಂ.ಜೆ. ತಿಳಿಸಿದರು.

‘ಕಚೇರಿಯಲ್ಲಿ ಓರ್ವ ಸಹಾಯಕ, ಓರ್ವ ಡಿ ಗ್ರೂಪ್ ನೌಕರ ಸೇರಿ ಮೂವರು ಸಿಬ್ಬಂದಿ ಇದ್ದೇವೆ. ಕೃಷಿ ಚಟುವಟಿಕೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೂಲಿಗಳನ್ನು ಪಡೆದುಕೊಳ್ಳುತ್ತೇವೆ. ಗದ್ದೆಯಲ್ಲಿ ಎಂ.ಒ.-4 ಭತ್ತ ಬೀಜ ಉತ್ಪಾದಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಕಳಿಸಲಾಗುತ್ತದೆ. ಅದರ ಹೊರತಾಗಿ ಬೇರೆ ಕೃಷಿ ಚಟುವಟಿಕೆ ಇಲ್ಲ’ ಎಂದರು.

‘ಕೃಷಿ ವಿಶ್ವವಿದ್ಯಾಲಯಕ್ಕೆ ಜಾಗವನ್ನು 10 ವರ್ಷಗಳ ಲೀಸ್ ಆಧಾರದ ಮೇಲೆ ನೀಡಲಾಗಿದೆ. ಲೀಸ್ ಅವಧಿಯಲ್ಲಿ ಇಲಾಖೆ ಅಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ. ಖಾಲಿ ಇರುವ ಜಾಗದಲ್ಲಿ ಆಸಕ್ತ ರೈತರಿಗೆ ಗುತ್ತಿಗೆ ಆಧಾರದ ಮೇಲೆ ಮಳೆಗಾಲದಲ್ಲಿ ತರಕಾರಿ ಮುಂತಾದ ಕೃಷಿಗೆ ಅವಕಾಶ ನೀಡಲು ಅವಕಾಶಗಳಿವೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ ಪ್ರತಿಕ್ರಿಯಿಸಿದರು.

ಲೀಸ್‍ಗೆ ಪಡೆದ ಬೇರೆ ಜಾಗದಲ್ಲಿ ಮೊದಲ ಬಾರಿಗೆ ಹೆಚ್ಚುವರಿಯಾಗಿ ಮೂರು ಎಕರೆ ಭತ್ತ ನಾಟಿ ಮಾಡಲಾಗಿದೆ. ಉಳಿದ ಚಟುವಟಿಕೆಳಿಗೆ ಅನುದಾನದ ಕೊರತೆ ಇದೆ
ಮಂಜು ಎಂ.ಜೆ ಭತ್ತ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ

ಮುಚ್ಚಿದ ಡಿಪ್ಲೊಮಾ ಕಾಲೇಜು ಪಟ್ಟಣದ ನೆಲ್ಲಿಕೇರಿ ರಸ್ತೆಯಲ್ಲಿರುವ ಭತ್ತ ಸಂಶೋಧನಾ ಕೇಂದ್ರದ ಜಾಗದಲ್ಲಿ ಉಳಿದ 10 ಎಕರೆಯಲ್ಲಿ ತೆಂಗು ಅಡಿಕೆ ಮರಗಳಿದ್ದರೂ ಅವು ಸರಿಯಾದ ನಿರ್ವಹಣೆ ಇಲ್ಲದೆ ಎಷ್ಟೋ ಮರಗಳು ಸತ್ತು ಹೋಗಿದ್ದು ನಿರೀಕ್ಷಿತ ಆದಾಯ ಬರುತ್ತಿಲ್ಲ. ಕೃಷಿ ವಿಶ್ವ ವಿದ್ಯಾಲಯದ ಭತ್ತ ಸಂಶೋಧನಾ ಕೇಂದ್ರವು ಭತ್ತ ಬೀಜ ಉತ್ಪಾದನೆಗಾಗಿ ಇಲ್ಲಿ ಒಂದು ಕಚೇರಿ ಹೊಂದಿದೆ. ಹಿಂದೆ ಇಲ್ಲಿ ಇದ್ದ ಗ್ರಾಮೀಣ ಯುವಕರ ಕೃಷಿ ತರಬೇತಿ ಕೇಂದ್ರ ಕೃಷಿ ಡಿಪ್ಲೊಮಾ ಕಾಲೇಜುನ್ನು ಮುಚ್ಚಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.