
ಕಾರವಾರ: ಜಿಲ್ಲೆಯ ಅದ್ದೂರಿ ದ್ವೀಪ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಕೂರ್ಮಗಡ ಜಾತ್ರೆಯು ಶನಿವಾರ ಸಂಭ್ರಮದಿಂದ ನಡೆಯಿತು. ನೂರಾರು ಭಕ್ತರು ಅರಬ್ಬಿ ಸಮುದ್ರದಲ್ಲಿ ದೋಣಿ ಮೂಲಕ ಸಾಗಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರು.
ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರಿನಿಂದ 25 ದೋಣಿಗಳು 6 ಕಿ.ಮೀ ದೂರದಲ್ಲಿರುವ ನಡುಗಡ್ಡೆಗೆ ಭಕ್ತರನ್ನು ಕರೆದೊಯ್ದವು. ಸುರಕ್ಷತೆ ದೃಷ್ಟಿಯಿಂದ ದೋಣಿಯಲ್ಲಿ ಸಾಗುವವರು ಕಡ್ಡಾಯವಾಗಿ ಜೀವರಕ್ಷಕ ಜಾಕೆಟ್ ಧರಿಸುವಂತೆ ಎಚ್ಚರಿಕೆ ವಹಿಸಲಾಗಿತ್ತು. ನಿಗದಿಗಿಂತ ಹೆಚ್ಚು ಜನರು ಏಕಕಾಲಕ್ಕೆ ದೋಣಿಯಲ್ಲಿ ಸಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಆದರೂ, ಕೆಲ ದೋಣಿಗಳಲ್ಲಿ ಜನಜಂಗುಳಿ ಉಂಟಾಗಿದ್ದು ಕಂಡುಬಂತು.
ಕಡವಾಡ ಗ್ರಾಮದಿಂದ ನರಸಿಂಹ ದೇವರ ಮೂರ್ತಿಯನ್ನು ನಸುಕಿನ ಜಾವ ಸಾಂಪ್ರದಾಯಿಕ ದೋಣಿಯಲ್ಲಿ ಕೂರ್ಮಗಡ ದ್ವೀಪಕ್ಕೆ ಸಾಂಪ್ರದಾಯಿಕ ಆಚರಣೆ ಮೂಲಕ ಕರೆದೊಯ್ಯಲಾಯಿತು. ದ್ವೀಪದಲ್ಲಿರುವ ಜಾತ್ರೆ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಪ್ರಕ್ರಿಯೆ ನೆರವೇರಿದ ಬಳಿಕ ಕಡವಾಡದ ಸಪ್ರೆ ಕುಟುಂಬದವರು ಪೂಜೆ ಸಲ್ಲಿಸಿದರು. ಆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಜಾತ್ರೆ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಜನರು ಬಂದಿದ್ದರು. ಬಾಳೆಗೊನೆ, ಹಣ್ಣುಕಾಯಿ ಸೇರಿದಂತೆ ಹರಕೆಗಳನ್ನು ಅರ್ಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ದ್ವೀಪದ ಜಾತ್ರಾ ಗದ್ದುಗೆಯಿಂದ ಭಾನುವಾರ ಬೆಳಿಗ್ಗೆ ದೇವರ ಮೂರ್ತಿಯನ್ನು ಕೋಡಿಬಾಗದಲ್ಲಿರುವ ಮಂಟಪಕ್ಕೆ ತರಲಾಗುತ್ತದೆ. ಅಲ್ಲಿಂದ ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಕಡವಾಡಕ್ಕೆ ಕರೆತರಲಾಗುತ್ತದೆ.
‘ಕೂರ್ಮಗಡ ದ್ವೀಪದಲ್ಲಿ ದೋಣಿಗಳ ಸುರಕ್ಷಿತ ನಿಲುಗಡೆಗೆ ಶಾಶ್ವತ ಜಟ್ಟಿ ಕಲ್ಪಿಸದ ಕಾರಣದಿಂದ ಜಾತ್ರೆ ವೇಳೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ. ಟ್ರಾಲರ್ ಪರ್ಸಿನ್ ದೋಣಿಗಳಲ್ಲಿ ಬಂದರೂ ಆ ದೋಣಿಯನ್ನು ದ್ವೀಪದಿಂದ ದೂರದಲ್ಲೇ ಇಳಿದು ಡಿಂಗಿ (ಸಣ್ಣ ದೋಣಿ) ಏರಿ ಬರಬೇಕು. ಇದರಿಂದ ಮಹಿಳೆಯರು ಅಶಕ್ತರಿಗೆ ಸಮಸ್ಯೆಯಾಗುತ್ತಿದೆ’ ಎಂದು ಭಕ್ತರು ದೂರಿದರು. ಕೂರ್ಮಗಡ ದ್ವೀಪದಲ್ಲಿ ಜಟ್ಟಿ ನಿರ್ಮಿಸಲು ಸಾಗರಮಾಲಾ ಯೋಜನೆಯಡಿ ಈ ಹಿಂದೆ ಅನುದಾನ ಮಂಜೂರಾಗಿದ್ದರೂ ಈವರೆಗೆ ಜಟ್ಟಿ ನಿರ್ಮಾಣ ಕೆಲಸ ನಡೆದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಬಂದಿದ್ದರಿಂದ ಸಮುದ್ರದ ಮಾರ್ಗದುದ್ದಕ್ಕೂ ಕರಾವಳಿ ಕಾವಲು ಪಡೆ ಕಸ್ಟಮ್ ಇಲಾಖೆಯ ದೋಣಿಗಳ ಮೂಲಕ ಗಸ್ತು ತಿರುಗುತ್ತ ಪೊಲೀಸರು ನಿಗಾ ಇಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.