ADVERTISEMENT

ಕಾರ್ಮಿಕರಿಗೆ ಬಾರದ ಸೌಲಭ್ಯ

ಮೂರು ವರ್ಷಗಳಿಂದ ಬಾಕಿ ಇರುವ ಅರ್ಜಿಗಳು, ನೋಂದಣಿಗೂ ಅಡೆತಡೆ

ಸಂಧ್ಯಾ ಹೆಗಡೆ
Published 5 ನವೆಂಬರ್ 2019, 19:45 IST
Last Updated 5 ನವೆಂಬರ್ 2019, 19:45 IST
ಶಿರಸಿಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿ
ಶಿರಸಿಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿ   

ಶಿರಸಿ: ದೈನಂದಿನ ದುಡಿಮೆಯನ್ನೇ ಅವಲಂಬಿಸಿ ಬದುಕುವ ಕಾರ್ಮಿಕರು ಹಲವಾರು ತಿಂಗಳುಗಳಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇ–ಆಸ್ತಿ ಸಮಸ್ಯೆಯಿಂದ ಕೆಲಸವಿಲ್ಲದೇ ಕಂಗಾಲಾಗಿರುವ ಕಾರ್ಮಿಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾರ್ಮಿಕ ಇಲಾಖೆ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೀಡುವ ಪಿಂಚಣಿ, ಮನೆ ಕಟ್ಟಲು ಸಹಾಯಧನ, ಹೆರಿಗೆಯಾದ ಮಹಿಳೆಗೆ ಲಕ್ಷ್ಮಿ ಬಾಂಡ್, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ದೊರೆಯುತ್ತದೆ. ಕಟ್ಟಡ ನಿರ್ಮಾಣದ ವೇಳೆ ಮೃತಪಟ್ಟರೆ, ಅಂಗವಿಕಲರಾದರೆ ಅದಕ್ಕೆ ಸಹ ಸರ್ಕಾರ ನೆರವು ನೀಡುತ್ತದೆ. ಆದರೆ, ತಾಲ್ಲೂಕಿನ ಕಾರ್ಮಿಕರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

‘ಮೊಬೈಲ್ ಸಂಖ್ಯೆ ಮತ್ತು ಆಧಾರ್ ನಂಬರ್ ಜೋಡಿಸಿ, ಮೊಬೈಲ್‌ಗೆ ಒಟಿಪಿ (OTP) ಕಳುಹಿಸುವ ಮೂಲಕ ಕಾರ್ಮಿಕರ ನೋಂದಣಿ ಮಾಡಲಾಗುತ್ತಿದೆ. ಆದರೆ, ಹೊಸ ನೋಂದಣಿ ಮತ್ತು ಹಳೆಯ ಸದಸ್ಯತ್ವ ನವೀಕರಿಸಲು ಪ್ರಯತ್ನಿಸಿದ ಹಲವರ ಮೊಬೈಲ್‌ಗೆ ಒಟಿಪಿ ಬಂದಿಲ್ಲ. ಒಂದೊಮ್ಮೆ ಬಂದಿದ್ದರೂ, ಇದರ ಮುಂದಿನ ಹಂತ ಕಾರ್ಮಿಕ ಇಲಾಖೆಯ ಮೂಲಕ ಆಗಬೇಕಾಗುತ್ತದೆ. ಎಲ್ಲಿಯ ದೋಷವೋ ಗೊತ್ತಿಲ್ಲ. ಕಳೆದ ಆರು ತಿಂಗಳುಗಳಿಂದ ಕಾರ್ಮಿಕರ ನೋಂದಣಿ ಕೂಡ ಆಗುತ್ತಿಲ್ಲ’ ಎನ್ನುತ್ತಾರೆ ಬಾರ್ ಬೆಂಡಿಂಗ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ನಾಯ್ಕ.

ADVERTISEMENT

‘ಕಾರ್ಮಿಕರ ಮಕ್ಕಳಿಗೆ ನ್ಯಾಯಯುತವಾಗಿ ಸಿಗಬೇಕಾದ ಶೈಕ್ಷಣಿಕ ಸಹಾಯಧನ ಎರಡು ವರ್ಷಗಳಿಂದ ಬಂದಿಲ್ಲ. ಇದೇ ರೀತಿಯಾದರೆ ಹೋರಾಟ ಅಭಿಯಾನ ನಡೆಸುವುದು ಅನಿವಾರ್ಯ. ಪಕ್ಕದ ಹಾವೇರಿ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಯಾಕೆ ಹೀಗಾಗುತ್ತಿದೆ ತಿಳಿಯುತ್ತಿಲ್ಲ’ ಎಂದು ಅಸೋಷಿಯೇಷನ್ ಕಾರ್ಯದರ್ಶಿ ಪ್ರಕಾಶ ಸಾಲೇರ ದೂರಿದರು.

‘ವ್ಯವಸ್ಥೆ ಸರಿಪಡಿಸಲು ಮೂರು ತಿಂಗಳ ಗಡುವು ನೀಡಿದ್ದೇವೆ. ಇದಾಗದಿದ್ದಲ್ಲಿ ಕಾರ್ಮಿಕ ಇಲಾಖೆಯ ಕಚೇರಿಗೆ ಬೀಗ ಹಾಕಲು ನಿರ್ಧರಿಸಲಾಗಿದೆ’ ಎಂದು ಗೃಹ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮಹೇಶ ನಾಯ್ಕ ಪ್ರತಿಕ್ರಿಯಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ, ಕಾರ್ಮಿಕರು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಮತ್ತು ತಾಲ್ಲೂಕಿನಲ್ಲಿ ಮಾತ್ರ ಈ ಸಮಸ್ಯೆ ಆಗುತ್ತಿರುವುದಕ್ಕೆ ಅಧಿಕಾರಿಯೇ ಹೊಣೆ ಎಂದು ದೂರಿದರು ಎಂಬ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.