ADVERTISEMENT

ಉತ್ತರ ಕನ್ನಡ | ಪ್ರವಾಸಿಗರಿಗೆ ಸೌಕರ್ಯ‌ ಕೊರತೆ; ದುಬಾರಿ ದರ

ಗಣಪತಿ ಹೆಗಡೆ
Published 30 ಡಿಸೆಂಬರ್ 2024, 5:03 IST
Last Updated 30 ಡಿಸೆಂಬರ್ 2024, 5:03 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ಮೋಜಿನಲ್ಲಿ ತೊಡಗಿದ್ದರು
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ಮೋಜಿನಲ್ಲಿ ತೊಡಗಿದ್ದರು   

ಕಾರವಾರ: ಕ್ರಿಸ್‍ಮಸ್ ರಜೆ ಕಳೆಯಲು, ವರ್ಷಾಂತ್ಯದ ಆಚರಣೆಗಾಗಿ ಜಿಲ್ಲೆಯ ವಿವಿಧ ತಾಣಗಳಿಗೆ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಪ್ರವಾಸಿ ತಾಣಗಳಲ್ಲಿ ಸೌಕರ್ಯಗಳ ಕೊರತೆ ಒಂದೆಡೆಯಾದರೆ ಆತಿಥ್ಯ ವಲಯ ದುಬಾರಿಯಾಗಿರುವುದು ಪ್ರವಾಸಿಗರನ್ನು ಕಂಗೆಡಿಸಿದೆ.

ಕರಾವಳಿ ಭಾಗದಲ್ಲಿ ಕಡಲತೀರಗಳು, ಮಲೆನಾಡಿನಲ್ಲಿ ಪ್ರಕೃತಿ ಸೌಂದರ್ಯ ಪ್ರವಾಸಿಗರ ಆಕರ್ಷಣೆ. ಜೊತೆಗೆ ಧಾರ್ಮಿಕ ತಾಣಗಳಿಗೂ ಪ್ರವಾಸಿಗರ ಬರವಿಲ್ಲ. ಆದರೆ, ಈ ಸ್ಥಳಗಳಲ್ಲಿ ನೀರು, ಶೌಚಾಲಯ, ವಾಹನ ನಿಲುಗಡೆಯ ಸಮಸ್ಯೆ ಜ್ವಲಂತವಾಗಿದೆ. ಗೋಕರ್ಣ, ಮುರುಡೇಶ್ವರದಂತ ತಾಣಗಳೂ ಸೇರಿ ಬಹುತೇಕ ಕಡೆಗಳಲ್ಲಿ ಹೊಟೆಲ್, ರೆಸಾರ್ಟ್, ಹೋಮ್ ಸ್ಟೇಗಳ ದರ ದುಪ್ಪಟ್ಟಾಗಿದೆ. ಸಾಮಾನ್ಯ ದಿನಗಳಲ್ಲಿ ಸರಾಸರಿ ₹2,500– ರಿಂದ ₹4 ಸಾವಿರ ಇದ್ದ ಕೊಠಡಿಗಳ ದರವು ಈಗ ₹6 ಸಾವಿರ–₹10 ಸಾವಿರದವರೆಗೂ ಏರಿಕೆಯಾಗುತ್ತಿದೆ.

ನೆರೆಯ ಗೋವಾಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಅಲ್ಲಿನ ದುಬಾರಿ ದರದ ಕಾರಣಕ್ಕೆ ಕಾರವಾರದಲ್ಲಿ ಕೊಠಡಿ ಬಾಡಿಗೆ ಪಡೆದು ಉಳಿಯುತ್ತಿದ್ದಾರೆ. ಇಲ್ಲಿರುವ ಟುಪಲೇವ್ ವಿಮಾನ ವಸ್ತುಸಂಗ್ರಹಾಲಯ ಬಾಗಿಲು ಮುಚ್ಚಿದ್ದರೆ, ಉಳಿದ ತಾಣಗಳು ನಿರ್ವಹಣೆಯ ಕೊರತೆಯಿಂದ ಸೊರಗಿದ್ದರಿಂದ ಪ್ರವಾಸಿಗರಲ್ಲಿ ಬೇಸರ ತರಿಸಿದೆ.

ADVERTISEMENT

ಶಿರಸಿ ತಾಲ್ಲೂಕಿನ ಬನವಾಸಿ, ಸಹಸ್ರಲಿಂಗ ಸೇರಿ ಈಗಾಗಲೇ ಸೌಲಭ್ಯ ಕೊರತೆಯಿಂದ ಬಳಲುತ್ತಿರುವ ವಿವಿಧ ಜಲಪಾತಗಳಿಗೆ ನಿತ್ಯವೂ ಪ್ರವಾಸಿಗರ ದಂಡು ಬರುತ್ತಿದ್ದು, ವಾಹನ ನಿಲುಗಡೆ ಸಮಸ್ಯೆಯಾಗಿದೆ.

‘ಎಲ್ಲೆಂದರಲ್ಲಿ ಬಯಲು ಶೌಚದ ಹಾವಳಿ ಹೆಚ್ಚಿದೆ. ಪ್ರವಾಸಿಗರು ತಾವು ತಿಂದ ತಿನಿಸು ಪೊಟ್ಟಣ, ನೀರು ಬಾಟಲಿ ಸೇರಿ ತ್ಯಾಜ್ಯವನ್ನು ಬೀಸಾಡುತ್ತಿರುವುದರಿಂದ ಸ್ಥಳೀಯರು ತೊಂದ್ರೆ ಅನುಭವಿಸುತ್ತಿದ್ದೇವೆ’ ಎಂದು ಬನವಾಸಿಯ ದ್ಯಾವಪ್ಪ ಗೌಡ ಹೇಳುತ್ತಾರೆ.

ಯಲ್ಲಾಪುರ ತಾಲ್ಲೂಕಿನ ಹೆಚ್ಚಿನ ಪ್ರವಾಸಿ ತಾಣಗಳಿಗೆ ಸಮರ್ಪಕ ರಸ್ತೆ ಇಲ್ಲ. ಸಾತೊಡ್ಡಿ ಜಲಪಾತಕ್ಕೆ ಸಂಪರ್ಕಿಸುವ ರಸ್ತೆ ಸರಿಯಾಗಿಲ್ಲ. ಶಿರ್ಲೆ ಜಲಪಾತ, ಕುಳಿಮಾಗೋಡು ಜಲಪಾತಕ್ಕೆ ನಡೆದು ಸಾಗಬೇಕು. ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಊಟೋಪಹಾರ, ವಸತಿ ವ್ಯವಸ್ಥೆ ಇಲ್ಲ.

ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮ, ಟಿಬೇಟಿಯನ್‌ ಕ್ಯಾಂಪ್‌ಗಳಿಗೆ ಪ್ರವಾಸಿಗರು ಆಗಮಿಸುತ್ತಾರೆ. ಪಟ್ಟಣದಿಂದ ಸುಮಾರು 18 ಕಿಮೀ ದೂರವಿರುವ ಅತ್ತಿವೇರಿ ಪಕ್ಷಿಧಾಮಕ್ಕೆ ಹೋಗಲು ಸಾರಿಗೆ ವ್ಯವಸ್ಥೆಯಿಲ್ಲ. ದುಬಾರಿ ಪ್ರವೇಶ ದರ, ಹಗಲಿನಲ್ಲಿ ಕಾಣದ ವಲಸೆ ಹಕ್ಕಿಗಳು ಪ್ರವಾಸಿಗರಲ್ಲಿ ನಿರಾಸೆ ಮೂಡಿಸುತ್ತದೆ.

ಜೊಯಿಡಾ ತಾಲ್ಲೂಕಿನ ರೆಸಾರ್ಟ್, ಹೋಂ ಸ್ಟೇಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಹೋಮ ಸ್ಟೇಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೆ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಇಳವಾದಲ್ಲಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿರುವ ದೂರುಗಳಿವೆ.

ರೆಸಾರ್ಟ್ ಹೋಂ ಸ್ಟೇ ಗಳಲ್ಲಿ ಸಾಮಾನ್ಯ ಕೊಠಡಿಯ ₹2,200 ಇದ್ದ ದರವನ್ನು 3,200 ಮತ್ತು ವಿಶೇಷ ಕೊಠಡಿಗಳ ದರವನ್ನು 2,700 ರಿಂದ ₹3,700 ಕ್ಕೆ ಹೆಚ್ಚಿಸಿದೆ. ಉಳಿದ ದಿನಗಳಲ್ಲಿ 1 ಕಿಮೀ ದೂರದ ರ‍್ಯಾಫ್ಟಿಂಗ್ ದರ ₹ 400 ಇದ್ದದ್ದು ₹600 ಕ್ಕೆ ಹೆಚ್ಚಿಸಲಾಗಿದೆ.

ಹೊನ್ನಾವರ ಶರಾವತಿ ಬೋಟಿಂಗ್, ಅಪ್ಸರಕೊಂಡ, ಕಾಸರಕೋಡ ಬೀಚ್ ಸೇರಿದಂತೆ ವಿವಿಧ ತಾಣಗಳಿಗೆ ಪ್ರವಾಸಿಗರ ಭೇಟಿ ಪ್ರಮಾಣ ಹೆಚ್ಚಿದೆ. ಶಿರಸಿ-ಕುಮಟಾ ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರ–69ರಲ್ಲಿ ವಾಹನಗಳ ಓಡಾಟ ವಿಪರೀತವಾಗಿದೆ. ಜನರ ಭೇಟಿ ಹೆಚ್ಚಿದಂತೆ ತಾಲ್ಲೂಕಿನೆಲ್ಲೆಡೆ ಸ್ವಚ್ಛತೆ ಸವಾಲಾಗಿದೆ.

ಕುಮಟಾ ಪಟ್ಟಣ, ಗ್ರಾಮೀಣ ಭಾಗದಲ್ಲಿರುವ ಹೊಟೆಲ್, ರೆಸಾರ್ಟ್‍ಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ‘ಡಿಸೆಂಬರ್ ಮೊದಲ ವಾರದಲ್ಲೇ ಹೊಟೇಲ್ ಕೊಠಡಿ ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ. ವರ್ಷಾಂತ್ಯ ಆಚರಣೆಗೆ ಹೊರ ಊರಿನಿಂದ ಬರುವವರಿಗೆ ಕೋಣೆಗಳನ್ನು ವಿಶೇಷ ದರಗಳ ಅಡಿಯಲ್ಲಿ ಕಾಯ್ದಿಡುತ್ತೇವೆ’ ಎಂದು ಪಟ್ಟಣದ ಹೊಟೇಲ್‍ವೊಂದರ ಮಾಲೀಕರು ತಿಳಿಸಿದರು.

ದಾಂಡೇಲಿ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ರೆಸಾರ್ಟ್, ಹೋಮ್ ಸ್ಟೇಗಳಿದ್ದು, ಎಲ್ಲವೂ ಪ್ರವಾಸಿಗರಿಂದ ಭರ್ತಿಯಾಗಿವೆ. ರಜೆ ಕಾರಣಕ್ಕೆ 15 ದಿನ ಮುಂಚೆ ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದು, ಬಾಡಿಗೆ ನಿಗದಿತ ದರಕ್ಕಿಂತ ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ. ತುರ್ತು ಸಮಯದಲ್ಲಿ ಟೆಂಟ್‍ಗಳಿಗೂ ₹2,500 ರಷ್ಟು ದರ ಏರಿಕೆ ಮಾಡಲಾಗಿದೆ ಎಂಬುದಾಗಿ ಪ್ರವಾಸಿಗರು ಹೇಳುತ್ತಿದ್ದಾರೆ.

ಗೋಕರ್ಣದ ರಥಬೀದಿಯಲ್ಲಿ ಪ್ರವಾಸಿಗರ ವಾಹನಗಳ ಓಡಾಟದಿಂದ ಸಂಚಾರ ದಟ್ಟಣೆ ಉಂಟಾಗಿರುವುದು

‘ದಾಂಡೇಲಿ ಕೆಲವು ರೆಸಾರ್ಟ್‍ಗಳಲ್ಲಿ ಸೌಲಭ್ಯ ಸರಿಯಾಗಿ ನೀಡುವುದಿಲ್ಲ. ಶುಚಿತ್ವ ಸೇರಿದಂತೆ ಊಟದ ವಿಷಯದಲ್ಲಿ ತಕರಾರುಗಳಿವೆ’ ಎನ್ನುತ್ತಾರೆ ಪ್ರವಾಸಿಗ ಶಿವಾನಂದ ಪರಗಿ.

‘ಹದಗೆಟ್ಟ ರಸ್ತೆ ಹಾಗೂ ಸರಿಯಾದ ಮಾರ್ಗ ಸೂಚಿಸಲು ಫಲಕಗಳಿಲ್ಲ. ಪ್ರವಾಸಿ ನಿರ್ವಚನಾ ಕೇಂದ್ರ ಇಲ್ಲದಿರುವುದು ಬೇಸರ ತಂದಿದೆ’ ಎನ್ನುತ್ತಾರೆ ಬೈಲಹೊಂಗಲದ ಸುರೇಶ ಚಿಕ್ಕಾಡಿ.

ಅಂಕೋಲಾ ತಾಲ್ಲೂಕಿನ ಹನಿ ಬೀಚ್, ನದಿಬಾಗ ಬೀಚ್ ವೀಕ್ಷಿಸಲು ಹೆಚ್ಚು ಪ್ರವಾಸಿಗರು ಆಗಮಿಸಿದ್ದಾರೆ. ಹನಿ ಬೀಚ್ ಹೊರತು ಪಡಿಸಿ, ಉಳಿದ ಬೀಚ್ ಗಳಲ್ಲಿ ಪ್ರವಾಸಿಗರಿಗೆ ತಂಗಲು ಕೊಠಡಿಯ ವ್ಯವಸ್ಥೆ ಇಲ್ಲ.

ಶಿರಸಿ ತಾಲ್ಲೂಕಿನ ಬನವಾಸಿಗೆ ಬಸ್‍ಗಳ ಮೂಲಕ ಬಂದಿಳಿದಿರುವ ಪ್ರವಾಸಿಗರು

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ದಾಂಡೇಲಿಯ ರೆಸಾರ್ಟ್ ಒಂದರಲ್ಲಿ ಪ್ರವಾಸಿಗರು ಫೈರ್ ಕ್ಯಾಂಪ್ ಹಾಕಿ ಕುಳಿತಿದ್ದರು
ಗೋವಾಕ್ಕೆ ಬರುವ ಪ್ರವಾಸಿಗರು ಅಲ್ಲಿ ಕೊಠಿಗಳು ಸಿಗದೆ ಕಾರವಾರಕ್ಕೆ ಬರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳು ಮತ್ತಷ್ಟು ಅಭಿವೃದ್ಧಿಯಾಗಿದ್ದರೆ ಪ್ರವಾಸಿಗರನ್ನು ಸೆಳೆಯಲು ಅವಕಾಶ ಆಗುತ್ತಿತ್ತು
ವಿನಯ ನಾಯ್ಕ ಕಾರವಾರ ಹೊಟೆಲ್ ಉದ್ಯಮಿ
ಕುಮಟಾ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ರೆಸಾರ್ಟ್ ಹೋಮ್ ಸ್ಟೇಗಳಿದ್ದು ಎಲ್ಲವೂ ಭರ್ತಿಯಾಗಿವೆ. ಪ್ರವಾಸಿಗರು ಕೊಠಡಿಯೇ ಬೇಕೆಂದಿಲ್ಲ ಕಡಲತೀರದಲ್ಲಿ ಪುಟ್ಟ ಟೆಂಟ್ ಆದರೂ ಹಾಕಿಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ
ಸದಾನಂದ ಹರಿಕಂತ್ರ ಕುಮಟಾ ರೆಸಾರ್ಟ್ ಮಾಲೀಕ
ನಿರಾಶ್ರಿತರ ನೆಲೆಯಾದ ಟಿಬೇಟಿಯನ್‌ ಕ್ಯಾಂಪ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಮೊನಾಸ್ಟ್ರಿಗಳ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಆದರೆ ಅನ್ಯಭಾಷಿಕರು ಹಾಗೂ ಕನ್ನಡಿಗರಿಗೆ ಟಿಬೇಟಿಯನ್‌ರ ಜೀವನ ಶೈಲಿ ಕಲೆ ಸಂಸ್ಕೃತಿಯ ಕುರಿತು ತಿಳಿದುಕೊಳ್ಳಲು ಅನುಲಕೂಲವಾಗುತ್ತದೆ
ಕುಮಾರಸ್ವಾಮಿ ಬೆಂಗಳೂರು ಪ್ರವಾಸಿಗ
ಆತಿಥ್ಯ ವಲಯದವರಿಗೆ ಇದೇ ದುಡಿಮೆಯ ಅವಧಿಯಾಗಿದ್ದರಿಂದ ದರ ಹೆಚ್ಚಳ ಸಹಜ. ಸಾಧ್ಯವಾದಷ್ಟುಉತ್ತಮ ಸೌಲಭ್ಯ ನೀಡಿ ಗ್ರಾಹಕರನ್ನು ತೃಪ್ತಿ ಪಡಿಸುವುದು ನಮ್ಮ ಉದ್ದೇಶ
ಅನಿಲ ಪಾಟೇಕರ್ ದಾಂಡೇಲಿ ಪ್ರವಾಸೋದ್ಯಮಿ
ಸೌಕರ್ಯ ಕಾಣದ ಮುರುಡೇಶ್ವರ
ವಿಶ್ವಪ್ರಸಿದ್ದ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ವಾಹನ ನಿಲುಗಡೆಯ ಸ್ಥಳವಕಾಶ ಇಲ್ಲ. ಪ್ರವಾಸಿಗರಿಗೆ ಉಳಿದುಕೊಳ್ಳಲು ಛತ್ರದ ವ್ಯವಸ್ಥೆ ಇರದ ಕಾರಣ ಮಾಲಿಕರು ದುಪ್ಪಟ್ಟು ಬೆಲೆ ಅಕರಿಸುವುದು ಸಾಮಾನ್ಯವಾಗಿದೆ. ಇಲ್ಲಿನ ಲಾಡ್ಜ್ ಗಳಲ್ಲಿ 24 ಘಂಟೆಗಳ ಬದಲಾಗಿ 12 ತಾಸಿಗೆ ಕೊಠಡಿ ನೀಡಲಾಗುತ್ತಿದ್ದು ಅದಕ್ಕೂ ಹೆಚ್ಚಿನ ಬೆಲೆ ಪಡೆಯಲಾಗುತ್ತಿದೆ. ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಸ್ನಾನಗೃಹ ವ್ಯವಸ್ಥೆ ಇಲ್ಲದಿರುವುದು ಅನೈರ್ಮಲಕ್ಕೆ ಕಾರಣವಾಗಿದೆ. ಪ್ರವಾಸಿ ಸೀಸನ್ ಅವಧಿಯಲ್ಲಿ ಕಡಲತೀರಕ್ಕೆ ಪ್ರವೇಶ ನಿರ್ಬಂಧಿಸಿದ್ದಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಉಪ್ಪುನೀರಿನ ಸ್ನಾನ ಅನಿವಾರ್ಯ

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಗೋಕರ್ಣದ ಕಡಲತೀರಗಳಲ್ಲಿ ಸೌಕರ್ಯಗಳ ಕೊರತೆ ಕಾಣುತ್ತಿದೆ. ಇಲ್ಲಿಯ ಮೇನ್ ಬೀಚಿನಲ್ಲಿ ಪ್ರವಾಸೋಧ್ಯಮ ಇಲಾಖೆಯು ನಿರ್ಮಿಸಿದ ಸ್ನಾನ ಗೃಹ ಮತ್ತು ಶೌಚಾಲಯ ಉಪಯೋಗಕ್ಕೆ ಬಾರದಾಗಿದೆ. ಉಪ್ಪುನೀರಿನಲ್ಲೇ ಸ್ನಾನ ಮಾಡುವ ಪರಿಸ್ಥಿತಿ ಪ್ರವಾಸಿಗರದ್ದು. ಓಂ ಮತ್ತು ಕುಡ್ಲೆ ಕಡಲತೀರದಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಾವಣೆಗೂ ಅನುಕೂಲ ಇಲ್ಲ. ಬೀಚಿನ ಖಾಲಿ ಸ್ಥಳ ಬಂಡೆಕಲ್ಲುಗಳನ್ನೇ ಪ್ರವಾಸಿಗರು ಆಶ್ರಯಿಸಬೇಕಾಗುತ್ತಿದೆ. ಪ್ರವಾಸಿಗರಿಂದ ಹೇರಳವಾಗಿ ಆದಾಯ ಬರುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಸ್ವಚ್ಛತೆ ವಿಚಾರದಲ್ಲಿ ಹಿಂದೆಬಿದ್ದಿದೆ. ಕಡಲತೀರದಲ್ಲಿರುವ ಕುಡಿಯುವ ನೀರಿನ ಘಟಕ ಹಾಳಾಗಿದ್ದರೂ ಸರಿಪಡಿಸುತ್ತಿಲ್ಲ ಎಂಬುದು ಜನರ ದೂರು. ‘ಗೋಕರ್ಣದಿಂದ ಕುಡ್ಲೆ ಬೀಚ್ ಓಂ ಬೀಚ್‍ಗೆ ಸಂಪರ್ಕಿಸುವ ರಸ್ತೆ ಎರಡು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದರೂ ದುರಸ್ತಿ ಕೆಲಸ ನಡೆದಿಲ್ಲ’ ಎಂಬುದು ಉದ್ಯಮಿ ನಾಗಕುಮಾರ ಗೋಪಿ ಅವರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.