ಕಾರವಾರ: ಜಿಲ್ಲೆಯ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಸುರಕ್ಷತೆ ನಿಗಾ ಮತ್ತು ಸಂಚಾರ ವ್ಯವಸ್ಥೆ ಮೇಲೆ ಕಣ್ಣಿಡಲು ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳು ‘ದೃಷ್ಟಿ’ ಕಳೆದುಕೊಳ್ಳುತ್ತಿವೆ. ನಿರ್ವಹಣೆಯ ಕೊರತೆ ಮತ್ತು ನಗರ ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ನಡುವಿನ ಸಂವಹನ ಕೊರತೆ ಇದಕ್ಕೆ ಪ್ರಮುಖ ಕಾರಣ ಎಂಬುದು ಸಾರ್ವಜನಿಕ ವಲಯದ ದೂರು.
ಜಿಲ್ಲಾಕೇಂದ್ರ ಕಾರವಾರ ಸೇರಿದಂತೆ ಬಹುತೇಕ ಎಲ್ಲ ಕಡೆಯಲ್ಲೂ ಈ ಸಮಸ್ಯೆ ಇದೆ. ಕಳವು, ಗಲಾಟೆ, ಅಪಘಾತ, ಹಲ್ಲೆ, ಹೀಗೆ ಅಪರಾಧ ಪ್ರಕರಣಗಳು ನಡೆದ ವೇಳೆ ಪುರಾವೆ ಒದಗಿಸಲು ಅನುಕೂಲವಾಗಬೇಕಿದ್ದ ಸಿಸಿಟಿವಿಗಳು ಪ್ರಮುಖ ವೃತ್ತಗಳಲ್ಲಿ ಪಾಚಿಗಟ್ಟಿದ, ಮುರಿದು ಬಿದ್ದ ಸ್ಥಿತಿಯಲ್ಲಿ ಕಾಣಸಿಗುತ್ತಿವೆ.
ಜನರ ತೆರಿಗೆ ಹಣದಲ್ಲೇ ಲಕ್ಷಾಂತರ ವ್ಯಯಿಸಿ ಅಳವಡಿಸಲಾದ ಕ್ಯಾಮೆರಾಗಳ ಸ್ಥಿತಿಗತಿಯತ್ತ ಕಣ್ಣೆತ್ತಿಯೂ ನಗರ ಸ್ಥಳೀಯ ಸಂಸ್ಥೆಯಾಗಲಿ, ಪೊಲೀಸ್ ಇಲಾಖೆಯಾಗಲಿ ನೋಡದ ಪರಿಣಾಮ ಅವು ಇದ್ದೂ ಇಲ್ಲದಂತಾಗುತ್ತಿದೆ. ಅಪರಾಧ ಪ್ರಕರಣಗಳು ಘಟಿಸಿದರೆ ಪುರಾವೆಗೆ ಪೊಲೀಸರು ಖಾಸಗಿ ಕಚೇರಿ, ಅಂಗಡಿಗಳ ಎದುರಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುವ ಕೆಲಸ ನಡೆಯುತ್ತಿದೆ.
ಕಾರವಾರ ನಗರದಲ್ಲೇ 18 ಕಡೆಯಲ್ಲಿ ನಗರಸಭೆ ಅಳವಡಿಸಿದ್ದ ಸಿಸಿಟಿವಿಗಳು ಈಗ ನಿಷ್ಪ್ರಯೋಜಕ ಎನಿಸುವ ಸ್ಥಿತಿಗೆ ತಲುಪಿವೆ. ಪೊಲೀಸ್ ಇಲಾಖೆಯಿಂದ ಅಳವಡಿಸಿದ್ದ ಕೆಲ ಕ್ಯಾಮೆರಾಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಸಂಚಾರ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸ್ ಠಾಣೆ ಈ ಕ್ಯಾಮೆರಾ ನಿರ್ವಹಿಸುತ್ತಿದೆ.
ಶಿರಸಿ ನಗರದಲ್ಲಿ ಈ ಹಿಂದೆ ಅಳವಡಿಸಿದ್ದ 30ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿವೆ. ನಗರಸಭೆಯು 2015-16ನೇ ಸಾಲಿನಲ್ಲಿ ನಗರದ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿತ್ತು.
ಹೊನ್ನಾವರ ಪಟ್ಟಣದ 6 ಜಾಗಗಳಲ್ಲಿ 20 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ ಒಂದೂ ಕಾರ್ಯ ನಿರ್ವಹಿಸುತ್ತಿಲ್ಲ. ಪರೇಶ ಮೇಸ್ತ ಸಾವಿನ ನಂತರ ನಡೆದ ಗಲಾಟೆಯ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಅಳವಡಿಸಿದ್ದ ಕ್ಯಾಮೆರಾಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ.
ಅಂಕೋಲಾ ಪಟ್ಟಣದಲ್ಲಿ ಅಳವಡಿಸಿದ 14 ಸಿಸಿಟಿವಿ ಕ್ಯಾಮೆರಾಗಳು ಚಾಲನೆಯಲ್ಲಿ ಇಲ್ಲ. ಭಟ್ಕಳ ಜಿಲ್ಲೆಯಲ್ಲಿಯೇ ಅತೀ ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿದೆ. ಇಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿ ಮೂರು ವರ್ಷಗಳೇ ಕಳೆದರೂ ಈವರೆಗೆ ದುರಸ್ತಿ ಆಗಿಲ್ಲ. ಅಪರಾಧ ಚಟುವಟಿಕಗಳು ನಡೆದಾಗ ಪೊಲೀಸರು ಖಾಸಗಿಯವರ ಸಿಸಿಟಿವಿ ದೃಶ್ಯಾವಳಿ ಪಡೆಯಬೇಕಾದ ಸ್ಥಿತಿ ಇದೆ.
‘ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ಅನುದಾನ ಇರದ ಕಾರಣ ಸ್ಥಳೀಯ ಪುರಸಭೆಗೆ ಪತ್ರ ಬರೆಯಲಾಗಿದೆ’ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದ ಅಳವಡಿಸಲಾಗಿದೆ. ಅವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಮುಖ್ಯ ರಸ್ತೆಗಳಲ್ಲಿ ಅಪಘಾತ ಘಟನೆಗಳು ನಡೆದರೆ, ಅಲ್ಲಿಯ ಕ್ಯಾಮೆರಾಗಳನ್ನು ಪರಿಶೀಲಿಸಬಹುದು. ಆದರೆ, ವಿವಿಧ ವಾರ್ಡ್‌ನ ಪ್ರಮುಖ ಸ್ಥಳ, ರಸ್ತೆಗಳಲ್ಲಿ ಕಳ್ಳತನ, ಅಪರಾಧ ಘಟನೆಗಳು ನಡೆದರೆ, ಖಾಸಗಿಯವರ ಕ್ಯಾಮೆರಾಗಳನ್ನೇ ಪೊಲೀಸರು ಅವಲಂಬಿಸಬೇಕಾಗಿದೆ.
‘ಪಟ್ಟಣ ಪಂಚಾಯಿತಿ ವತಿಯಿಂದ 24 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮಾಡಿಕೊಂಡರೆ ಅನುಕೂಲವಾಗುತ್ತದೆ’ ಎಂದು ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಹೇಳಿದರು.
ಯಲ್ಲಾಪುರ ಪಟ್ಟಣದ ಕಾಳಮ್ಮ ನಗರದ ತಾಲ್ಲೂಕು ಕ್ರೀಡಾಂಗಣದ ಸಮೀಪ, ಐಬಿ ರಸ್ತೆಯ ಪಾರ್ಕ್ ಸಮೀಪ, ಜೋಡುಕೆರೆ ಸಮೀಪ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಬೇಡಿಕೆ ಇದೆ. ಕುಮಟಾ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ವೀಕ್ಷಿಸಲು ಸ್ಥಳೀಯ ಪುರಸಭೆ ವತಿಯಿಂದ ಅಲ್ಲಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಭಾಗಶಃ ಕೆಲಸ ಮಾಡುತ್ತಿದ್ದು, ಉಳಿದವುಗಳನ್ನು ದುರಸ್ತಿ ಮಾಡಬೇಕಾಗಿದೆ.
ದಾಂಡೇಲಿ ನಗರದಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು ಇಲ್ಲದಂತಾಗಿದೆ. ಸೋಮಾನಿ ರ‍್ಕಲ್, ಜೆ ಎನ್. ರಸ್ತೆ, ಚನ್ನಮ್ಮ ವೃತ್ತದಲ್ಲಿ ಪ್ರವಾಸಿಗರು ಹೆಚ್ಚಾಗಿ ಸೇರುವ ಸ್ಥಳವಾಗಿದ್ದು ಇಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ಕೆಟ್ಟು ನೇತಾಡುತ್ತಿವೆ.
‘ನಗರದ ಆಯಕಟ್ಟಿನ ಜಾಗದಲ್ಲಿ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಕೆಯ ಕುರಿತು ಎಸ್‍ಪಿ ಕಚೇರಿಗೆ ಪತ್ರ ಬರೆದು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ನಗರ ಪೊಲೀಸ್ ಠಾಣೆಯ ಎಸ್‍ಐ ಐ.ಆರ್.ಗಡ್ಡೆಕರ್ ಹೇಳುತ್ತಾರೆ.
ಸಿದ್ದಾಪುರ ಪಟ್ಟಣದ ವ್ಯಾಪ್ತಿಯಲ್ಲಿ 2016ರಲ್ಲಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸ್ ಇಲಾಖೆಗೆ ಒಪ್ಪಿಸಲಾಗಿತ್ತು. ತದನಂತರ ಒಂದು ಬಾರಿ ಹಾಳಾದ ಕ್ಯಾಮೆರಾ ದುರಸ್ತಿ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದ ಮೊದಲ ಹಂತದ ರಸ್ತೆ ವಿಸ್ತರಣೆ ಕಾಮಗಾರಿಯ ವೇಳೆ ಲೊಕೋಪಯೋಗಿ ಇಲಾಖೆಯವರು ಕ್ಯಾಮೆರಾಗಳನ್ನು ತೆಗೆದಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗದೀಶ ನಾಯ್ಕ ಹೇಳಿದರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.
ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಮನಸ್ಥಿತಿಯವರಿಗೆ ಭಯವಿರುತ್ತದೆರಾಮಚಂದ್ರ ಹೆಗಡೆ ಶಿರಸಿ ಸ್ಥಳೀಯ
ಅಂಕೋಲಾದಲ್ಲಿ ಈಚೆಗೆ ಕಳವು ಪ್ರಕರಣ ಹೆಚ್ಚುತ್ತಿವೆ. ಪಟ್ಟಣದಲ್ಲಿ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಚಾಲನೆಯಲ್ಲಿ ಇಲ್ಲದಿರುವುದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆಮಂಜುನಾಥ ನಾಯ್ಕ ಅಂಕೋಲಾ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಹಳಿಯಾಳ ಪಟ್ಟಣದ ಗಡಿಭಾಗವಾದ ಕೆಸರೋಳ್ಳಿ ಮುರ್ಕವಾಡ ಮಾಗವಾಡ ಅರ್ಲವಾಡ ಭಾಗದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಬಹುದುಎಸ್.ಎಲ್.ಸೋಮಣ್ಣವರ ಮುರ್ಕವಾಡ ಗ್ರಾಮ ಪಂಚಾಯಿತಿ ಸದಸ್ಯ
ಸ್ಥಳೀಯರ ದೇಣಿಗೆ ಸಹಾಯದಿಂದ ಕುಮಟಾ ಬಸ್ ನಿಲ್ದಾಣ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆಮಂಜುನಾಥ ಗೌಡರ್ ಕುಮಟಾ ಠಾಣೆ ಪಿಎಸ್‍ಐ
ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಗೋಕರ್ಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖಾಸಗಿಯವರು ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳೇ ಆಧಾರವಾಗಿವೆ. ಪೊಲೀಸ್ ಅಥವಾ ಪ್ರವಾಸೋದ್ಯಮ ಇಲಾಖೆಗಳು ಯಾವುದೇ ಸಿಸಿಟಿವಿ ಕ್ಯಾಮೆರಾ ಅಳವಿಡಿಸಿಲ್ಲ. ಮೇಲಿನಕೇರಿಯಲ್ಲಿ ಎರಡು ಕಡೆ ಖಾಸಗಿಯವರೇ ಕ್ಯಾಮೆರಾ ಅಳವಡಿಸಿದ್ದಾರೆ. ದೇವಸ್ಥಾನದ ಸುತ್ತಮುತ್ತಲೂ ದೇವಾಲಯದ ವತಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅದರ ನಿರ್ವಹಣೆ ದೇವಸ್ಥಾನದವರೇ ಮಾಡುತ್ತಿದ್ದಾರೆ. ತೀರಾ ಅವಶ್ಯಕತೆಯಿರುವ ಬೀಚುಗಳಲ್ಲಿ ಕ್ಯಾಮೆರಾ ಅಳವಡಿಸಿಲ್ಲ. ‘ಮೇಲಿನಕೇರಿಯಲ್ಲಿ ಸ್ವಂತ ಖರ್ಚಿನಿಂದ ಸಾರ್ವಜನಿಕ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇನೆ. ಇದರ ನಿಗಾ ಮಾತ್ರ ಪೊಲೀಸರು ವಹಿಸುತ್ತಿದ್ದಾರೆ’ ಎನ್ನುತ್ತಾರೆ ಖಾಸಗಿ ಆ್ಯಂಬುಲೆನ್ಸ್ ಮಾಲೀಕ ಗಣೇಶ ನಾಯಕ.
ಹಳಿಯಾಳ ಪಟ್ಟಣದಲ್ಲಿ ಈ ಹಿಂದೆ 36 ಸಿಸಿಟಿವಿ ಕ್ಯಾಮೆರಾವನ್ನು ಪುರಸಭೆಯಿಂದ ಅಳವಡಿಸಲಾಗಿದ್ದು 13 ಕ್ಯಾಮೆರಾಗಳು ಹಾಳಾಗಿವೆ. ಪಟ್ಟಣದ ಕೆರೆಗಳನ್ನು ಸ್ವಚ್ಛ ಗೊಳಿಸಲಾಗಿದ್ದು ಕೆರೆಗಳಲ್ಲಿ ಹಾಗೂ ಪಟ್ಟಣದ ರಸ್ತೆ ಅಂಚಿನಲ್ಲಿ ಯಾವುದೇ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದೆಂದು ಸಿಸಿಟಿವಿ ಅಳವಡಿಸಲಾಗಿದೆ. ‘ಅನುದಾನದ ಲಭ್ಯತೆಯ ಆಧಾರದ ಮೇಲೆ ಇನ್ನೂ ಹೆಚ್ಚಿನ ಸಿಸಿಟಿವಿಗಳನ್ನು ಪಟ್ಟಣದಲ್ಲಿ ಅಳವಡಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆನ್ನೆವರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.