ಕಾರವಾರ: ನಗರ, ಗ್ರಾಮೀಣ ಭಾಗದಲ್ಲಿರುವ ಕೆರೆಗಳ ನಿರ್ವಹಣೆಯ ವಿಚಾರದಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪ ಆಗಾಗ ಜನರಿಂದ ಕೇಳಿಬರುವುದು ಹೆಚ್ಚು. ಜಿಲ್ಲೆಯ ವಿವಿಧೆಡೆಯಲ್ಲಿನ ಕೆರೆಗಳ ದುಸ್ಥಿತಿಯು ಈ ಆರೋಪ ಪುಷ್ಟೀಕರಿಸುತ್ತಿದೆ.
ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡಬೇಕಿದ್ದ ಕೆರೆಗಳೇ ಬಹುಪಾಲು ದುಸ್ಥಿತಿಯಲ್ಲಿವೆ. ಕಸ–ಕಡ್ಡಿಗಳನ್ನು ಎಸೆಯುವ ಮೂಲಕ ಕೆರೆಗಳನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಲಾಗುತ್ತಿದೆ. ಹಳಿಯಾಳ, ಮುಂಡಗೋಡ ಭಾಗದಲ್ಲಿ ಹತ್ತಾರು ಕೆರೆಗಳಿದ್ದರೂ ನಿರ್ವಹಣೆ ಇಲ್ಲದ ಪರಿಣಾಮ ಆ ಭಾಗದಲ್ಲಿ ಬೇಸಿಗೆಯಲ್ಲಿ ನೀರಿಗೆ ಬರ ಉಂಟಾಗಿದೆ.
ಕಾರವಾರದ ಮಾಜಾಳಿ ಸಮೀಪದ ದೇವತಿಶಿಟ್ಟಾ ಕೆರೆ, ಸದಾಶಿವಗಡದ ಕಾಕರತಳೆ ಕೆರೆಗಳು ನಿರ್ವಹಣೆ ಕಾಣದೆ ಉಪಯೋಗಕ್ಕೆ ಬಾರದಂತಿದೆ ಎಂಬುದು ಸ್ಥಳೀಯರ ದೂರು.
‘ಜಿಲ್ಲೆಯಲ್ಲಿನ ಕೆರೆಗಳನ್ನು ಸರಿಯಾಗಿ ಹೂಳೆತ್ತಿ, ನಿರ್ವಹಣೆ ಮಾಡಿದರೆ ಅಂತರ್ಜಲ ವೃದ್ಧಿಗೆ ಅನುಕೂಲವಾಗಲಿದೆ. ಇದರಿಂದ ಕೆರೆಯ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿಯೂ ಬೇಸಿಗೆಯಲ್ಲೀ ನೀರಿನ ಬವಣೆ ತಪ್ಪಿಸಬಹುದು’ ಎಂಬುದು ತಜ್ಞರ ಅಭಿಪ್ರಾಯ.
ಶಿರಸಿ ತಾಲ್ಲೂಕಿನ ಕಲಕರಡಿ, ಅಂಡಗಿ, ದಾಸನಕೊಪ್ಪ, ಬನವಾಸಿ, ಬೆಂಗಳೆ, ಉಂಚಳ್ಳಿ, ಕೆರೆಕೊಪ್ಪ, ಎಕ್ಕಂಬಿ ಭಾಗದಲ್ಲಿನ ಕೆರೆ ಹೂಳಿನಿಂದ ಕೂಡಿವೆ. ನಗರದ ಹಾಲುಹೊಂಡ ಕೆರೆ, ಕಲ್ಕುಣಿ ಕೆರೆಗಳು ತ್ಯಾಜ್ಯದಿಂದ ಕೂಡಿದೆ. ಕೋಟೆಕೆರೆಗೆ ಸಮೀಪದ ತೆರೆದ ಚರಂಡಿ ನೀರು ಸೇರುತ್ತಿದೆ.
ಯಲ್ಲಾಪುರ ಪಟ್ಟಣದಲ್ಲಿನ ಹೆಚ್ಚಿನ ಕೆರೆಗಳು ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ರವೀಂದ್ರ ನಗರದ ಕೆರೆ ಹಾಗೂ ಚಮಗಾರ ಕೆರೆಯ ಅತಿಕ್ರಮಣಕ್ಕೆ ತುತ್ತಾಗಿ ಕೆರೆಯ ಪ್ರದೇಶ ಕಡಿಮೆಯಾಗುತ್ತಿದೆ ಎಂಬುದು ಸ್ಥಳೀಯರ ದೂರು.
ಜೊಯಿಡಾ ತಾಲ್ಲೂಕು ಕೇಂದ್ರದಲ್ಲಿ ಸಿದ್ದೇಶ್ವರ ಮತ್ತು ಗಾವಡೆವಾಡಾ ಎರಡು ಕೆರೆಗಳು ಇದ್ದು ಎರಡೂ ಕೆರೆಗಳು ಹೂಳೆತ್ತದೆ ಪಾಳು ಬಿದ್ದಿವೆ. ಪ್ರದಾನಿಯಲ್ಲಿರುವ ಕೆರೆಯ ನೀರು ಜಾನುವಾರುಗಳ ಮೈ, ಜನರು ಬಟ್ಟೆ ತೊಳೆಯಲು ಮಾತ್ರ ಬಳಕೆ ಆಗುತ್ತಿದೆ.
‘ಅಮೃತ ಸರೋವರ ಯೋಜನೆಯಡಿ ಗಾವಡೆವಾಡ ಕೆರೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತು ಆದರೆ ಸ್ಥಳೀಯರ ವಿರೋಧದಿಂದಾಗಿ ಅದು ಸಾಧ್ಯವಾಗಲಿಲ್ಲ’ ಎಂದು ಜೊಯಿಡಾ ಗ್ರಾಮ ಪಂಚಾಯಿತಿ ಪಿಡಿಒ ಮೋಹನ ಡೋಂಬರ ಹೇಳುತ್ತಾರೆ.
ದಶಕಗಳಿಂದ ತ್ಯಾಜ್ಯದ ತೊಟ್ಟಿಯಂತಾಗಿದ್ದ ಗೋಕರ್ಣದ ಗಾಯತ್ರಿ ತೀರ್ಥ, ಸ್ಥಳೀಯ ಯಂಗಸ್ಟಾರ್ ಕ್ಲಬ್ ಮತ್ತು ಗ್ರಾಮಸ್ಥರ ಶ್ರಮದಾನದಿಂದ ನೀರಿನ ಸೆಲೆಯಾಗಿ ಪರಿವರ್ತನೆಯಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಸುಂದರ ಕೆರೆ ನಿರ್ಮಾಣವಾಗಿದೆ. ಇದರಿಂದ ಸುತ್ತಮುತ್ತಲಿನ ಸುಮಾರು 50 ಕ್ಕೂ ಹೆಚ್ಚು ಬಾವಿಯಲ್ಲಿ ಅಂತರ್ಜಲ ಹೆಚ್ಚಾಗಿದೆ. ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಕೊರತೆ ಶಮನವಾಗಿದೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.
ಹಳಿಯಾಳ ಪಟ್ಟಣದ ವ್ಯಾಪ್ತಿಯಲ್ಲಿರುವ 11 ಕೆರೆಗಳ ಪೈಕಿ ಬಹುತೇಕ ಪುರಸಭೆಯಿಂದ ನಿರ್ವಹಣೆಯಾಗುತ್ತಿದ್ದರೆ, ಗೌಳಿಗಲ್ಲಿಯ ಕೆರೆ ಮಾತ್ರ ಕಲುಷಿತ ಸ್ಥಿತಿಯಲ್ಲಿದೆ. ಡೌವಗೇರಿ ಕೆರೆ ತೀರಾ ಕೆಸರಿನಿಂದ ಕೂಡಿದೆ. ಗೌಳಿಗಲ್ಲಿಯ ಕೆರೆಯಲ್ಲಿ ತ್ಯಾಜ್ಯಗಳನ್ನು ಎಸೆದಿದ್ದವರನ್ನು ಸಿಸಿಟಿವಿ ದೃಶರ್ಯಾವಳಿ ಆಧರಿಸಿ ಪತ್ತೆ ಹಚ್ಚಿ, ದಂಡ ವಿಧಿಸಲಾಗಿತ್ತು. ಆದರೂ ಕಸ ಎಸೆಯುವುದು ಮುಂದುವರಿದಿದೆ.
‘ಗೌಳಿಗಲ್ಲಿ ಕೆರೆಯ ಬಹುಭಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿದ್ದರೂ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ’ ಎಂದು ಪುರಸಭೆ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು.
ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲೊಂದು ಕಳೆದ ಎರಡು ವರ್ಷದ ಹಿಂದೆ ಅಚ್ಚುಕಟ್ಟಾದ ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ ಸೂಕ್ತ ನಿರ್ವಹಣೆ ಮಾಡಿದರೆ ಆ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು ಕಾಣಬಹುದು ಎನ್ನುತ್ತಾರೆ ಸ್ಥಳೀಯರು.
ಕುಮಟಾ ತಾಲ್ಲೂಕಿನ ಬಾಡ, ಕಾಗಾಲ, ನಾಡಮಾಸ್ಕೇರಿ ಹಾಗೂ ವಾಲಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆಯ ಹೂಳೆತ್ತುವ ಕಾರ್ಯವನ್ನು ಉದ್ಯೋಗ ಖಾತರಿ ಯೋಜನೆಯಡಿ ಕೈಕೊಳ್ಳಲಾಗಿದೆ.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆಗಳ ನೀರು ಕುಡಿಯಲು ನೇರವಾಗಿ ಬಳಕೆ ಮಾಡುವುದಿಲ್ಲ. ಆದರೆ ಕೆರೆಗಳ ಹೂಳೆತ್ತಿದರೆ ಸುತ್ತಲಿನ ಕುಡಿಯುವ ನೀರಿನ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್.ಎಲ್.ಭಟ್ಟ ತಿಳಿಸಿದರು.
ಹೊನ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಕೆರೆಗಳಲ್ಲಿ ಗಿಡಗಂಟಿಗಳು ಮನೆ ಮಾಡಿದ್ದು ಸುತ್ತಮುತ್ತಲ ಮನೆಗಳ ಕಸದ ತೊಟ್ಟಿಗಳಾಗಿವೆ ಎಂಬ ದೂರುಗಳಿವೆ. ಗ್ರಾಮೀಣ ಭಾಗಗಳಲ್ಲಿ ಕಂದಾಯ ಭೂಮಿಯಲ್ಲಿ ಒಟ್ಟೂ 102 ಕೆರೆಗಳಿದ್ದು ಹೆಚ್ಚಿನ ಕೆರೆಗಳಲ್ಲಿ ಹೂಳು ತುಂಬಿವೆ. ಮಂಕಿ ಗ್ರಾಮದಲ್ಲಿ 11 ಕೆರೆಗಳಿದ್ದರೂ ಗ್ರಾಮದ ಕೆಲವು ಮಜರೆಗಳಲ್ಲಿನ ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿರುವ ಸಂಗತಿ ಅಲ್ಲಿನ ಕೆರೆಗಳ ವಾಸ್ತವಿಕ ಸ್ಥಿತಿ-ಗತಿಯನ್ನು ತೆರೆದಿಡುತ್ತದೆ.
‘ರಾಮತೀರ್ಥದ ಸಮೀಪ ಪುರಾತನ ಐತಿಹಾಸಿಕ ಕೆರೆ ಅಭಿವೃದ್ಧಿಪಡಿಸಬೇಕೆಂಬ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿಯ ಹಲವು ಮನವಿಗಳಿಗೆ ಸರ್ಕಾರ ಸ್ಪಂದಿಸಿಲ್ಲ’ ಎಂದು ಸಮಿತಿಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ದೂರದ ನದಿಗಳಿಂದ ನೂರಾರು ಕೋಟಿ ಖರ್ಚು ಮಾಡಿ ನೀರು ತರುವ ಯೋಜನೆಗೆ ಮನ್ನಣೆ ಸಿಗುತ್ತದೆ. ಆದರೆ ಕೆರೆ ಹಾಗೂ ಬಾವಿಗಳ ಹೂಳು ತೆಗೆದು ಸ್ಥಳೀಯವಾಗಿ ನೀರಿನ ಸಂಗ್ರಹ ಹಾಗೂ ಅಂತರ್ಜಲ ಹೆಚ್ಚಿಸುವ ಸುಸ್ಥಿರ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಸಂತೋಷ ಗುಡಿಗಾರ ಅಸಮಾಧಾನ ವ್ಯಕ್ತಪಡಿಸಿದರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಸದಾಶಿವಗಡದ ಕಾಕರತಳೆ ಕೆರೆಗೆ ತ್ಯಾಜ್ಯ ಸರಿದು ಕಲುಷಿತಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಡೆದರೂ ಕ್ರಮವಾಗುತ್ತಿಲ್ಲಗಜೇಂದ್ರ ನಾಯ್ಕ ಕಾರವಾರ ನಿವಾಸಿ
ಜೋಡುಕೆರೆಯ ಹೂಳು ತೆಗೆದು ಉತ್ತಮ ನಿರ್ವಹಣೆ ಮಾಡಿದಲ್ಲಿ ಪ್ರವಾಸಿ ಸ್ಥಳವಾಗಿ ಮಾಡಬಹುದು. ನಾಯಕನಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಅಲ್ಲಿ ಬೋಟಿಂಗ್ ಕಯಾಕಿಂಗ್ ಮಾಡಬಹುದುಸಾಂಬ ಕೋಮಾರ ಯಲ್ಲಾಪುರ ನಿವಾಸಿ
ಜೊಯಿಡಾದಲ್ಲಿರುವ ಸಿದ್ದೇಶ್ವರ ಕೆರೆಯ ದಡವನ್ನು ಶುಚಿಗೊಳಿಸಿ ಅಭಿವೃದ್ಧಿಪಡಿಸಿದರೆ ವಾಯು ವಿಹಾರಕ್ಕೆ ಅನುಕೂಲವಾಗಲಿದೆಉಲ್ಲಾಸ ದೇಸಾಯಿ ಜೊಯಿಡಾ ನಿವಾಸಿ
ಹಳಿಯಾಳ ಪಟ್ಟಣದಲ್ಲಿರುವ ಕೆರೆಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲಬಸವರಾಜ ಬೆಂಡಿಗೇರಿಮಠ ಹಳಿಯಾಳ ನಿವಾಸಿ
ಮುಂಡಗೋಡ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 25ಕ್ಕೂ ಹೆಚ್ಚು ಕೆರೆಗಳಿವೆ. ಮೂರು ದೊಡ್ಡ ಜಲಾಶಯಗಳು ನಾಲ್ಕು ಸಣ್ಣ ಜಲಾಶಯಗಳು ಇದ್ದರೂ ಕೆರೆ ಜಲಾಶಯಗಳ ಹೂಳೆತ್ತುವುದಕ್ಕೆ ಸಾಧ್ಯವಾಗುತ್ತಿಲ್ಲ. ‘ಕೆರೆ ಹೂಳೆತ್ತಲು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರೆ ಅನುದಾನ ಇಲ್ಲ ಎಂಬ ನೆಪ ಹೇಳುತ್ತಾರೆ. ಕೆರೆಗಳ ತೂಬು ಸಹ ದುರಸ್ತಿ ಮಾಡಿಸುವುದಿಲ್ಲ. ಕಾಲುವೆ ಮೇಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ರೈತ ನಿಂಗಪ್ಪ ಕುರುಬರ ದೂರಿದರು. ‘ಅಗಡಿ ಹುನಗುಂದ ಕಲಕೇರಿ ನಾಗನೂರು ರಾಮಾಪುರ ಅಟ್ಟಣಗಿ ಅಜ್ಜಳ್ಳಿ ಮರಗಡಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅನುದಾನದ ಲಭ್ಯತೆ ಮೇಲೆ ಕೆರೆಗಳ ಹೂಳೆತ್ತುವಿಕೆ ಜಲಾಶಯಗಳ ಗೇಟ್‌ಗಳ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಆರ್.ಎಂ.ದಫೆದಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.