ADVERTISEMENT

ಯಲ್ಲಾಪುರ: ಕೃಷಿ ಭೂಮಿಗೆ ತಂಪೆರೆಯುವ ಉಮ್ಮಚಗಿ ಕೆರೆಗೆ ಒತ್ತುವರಿ ಕಂಟಕ!

ಪಕ್ಷಿಗಳಿಗೆ ಆಸರೆ, ಕೃಷಿ ಭೂಮಿಗೆ ತಂಪೆರೆಯುವ ಜಲಮೂಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 7:25 IST
Last Updated 26 ಏಪ್ರಿಲ್ 2024, 7:25 IST
ಯಲ್ಲಾಪುರ ತಾಲ್ಲೂಕು ಉಮ್ಮಚಗಿ ಕೆರೆಯಲ್ಲಿ ಹಕ್ಕಿಗಳು ವಿಹರಿಸುತ್ತಿರುವುದು
ಯಲ್ಲಾಪುರ ತಾಲ್ಲೂಕು ಉಮ್ಮಚಗಿ ಕೆರೆಯಲ್ಲಿ ಹಕ್ಕಿಗಳು ವಿಹರಿಸುತ್ತಿರುವುದು   

ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮ್ಮಚಗಿಯಿಂದ ಭರತನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆರೆ ಒತ್ತುವರಿಗೆ ಸಿಲುಕಿ, ಹೂಳು ತುಂಬಿ ದಿನದಿಂದ ದಿನಕ್ಕೆ ಕಿರಿದಾಗುತ್ತ ಸಾಗಿದೆ ಎಂಬ ದೂರು ಸ್ಥಳೀಯರಿಂದ ಕೇಳಿಬರತೊಡಗಿದೆ.

ಗ್ರಾಮಕ್ಕೆ ನೀರಾವರಿ ಸೌಲಭ್ಯಕ್ಕೆ ಅನುಕೂಲವಾಗಿರುವ ಕೆರೆ ಸೂಕ್ತ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಜತೆಗೆ ಕೆಲ ರೈತರು ಕೆರೆ ಜಾಗ ಒತ್ತುವರಿ ಮಾಡಿ ತೋಟ ವಿಸ್ತರಿಸುತ್ತಿದ್ದಾರೆ. ಇದರಿಂದ ಕೆರೆ ಕಿರಿದಾಗುವ ಆತಂಕವಿದೆ ಎಂಬುದು ಜನರ ಆರೋಪ.

‘ಉಮ್ಮಚಗಿ ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿರುವ ಈ ಕೆರೆಯಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಸುಮಾರು ಏಳು ಅಡಿಗಳಷ್ಟು ನೀರಿನ ಸಂಗ್ರಹ ಇರುತ್ತದೆ. ಎಂತ ಬರಗಾಲದಲ್ಲೂ ಕೆರೆಯಲ್ಲಿ ನೀರು ಬತ್ತಿದ ಉದಾಹರಣೆ ಇಲ್ಲ. ಆದರೆ ಈಚೆಗೆ ಅತಿಯಾದ ಹೂಳು ತುಂಬಿದ ಕಾರಣ ಹೆಚ್ಚಿನ ನೀರಿನ ಸಂಗ್ರಹ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಗ.ರಾ.ಭಟ್ಟ ಬಾಳೆಗದ್ದೆ.

ADVERTISEMENT

‘ಕೆರೆಯ ನೀರು ಪಕ್ಷಿ-ಪ್ರಾಣಿಗಳಿಗೆ ನೀರಿನ ಆಸರೆಯಾಗಿದೆ. ನೀರನ್ನು ಅರಸಿ ಬೆಳ್ಳಕ್ಕಿಗಳೂ ಸೇರಿದಂತೆ ವಿವಿಧ ಪ್ರಬೇಧದ ವಿದೇಶಿ ಪಕ್ಷಿಗಳು ಆಗಮಿಸುತ್ತವೆ. ಕೆರೆ ಅಕ್ಕಪಕ್ಕದ ರೈತರ ಕೃಷಿ ಭೂಮಿಗೆ ತಂಪು ನೀಡುತ್ತಿದೆ. ವರ್ಷಪೂರ್ತಿ ನೀರಿರುವ ಈ ಕೆರೆಯ ಹೂಳನ್ನು ತೆಗೆದು ಕಾಯಕಲ್ಪ ನೀಡಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಸ್ಥಳೀಯ ರೈತರಾದ ಅನಂತ ಹೆಗಡೆ.

‘ಉದ್ಯೋಗ ಖಾತ್ರಿ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₹6 ರಿಂದ 7 ಲಕ್ಷ ವಿನಿಯೋಗಿಸಿ ಕೆರೆಯ ಹೂಳು ತೆಗೆಯಲು ಕ್ರಮ ಕೈಗೊಂಡಿತ್ತು. ಕೆರೆಯ ಸಂಪೂರ್ಣ ಹೂಳು ತೆಗೆದು, ಅಪಾರ ಪ್ರಮಾಣದ ನೀರಿನ ಸಂಗ್ರಹ ಏರ್ಪಟ್ಟು, ನೀರು ನಳನಳಿಸುವಂತೆ ಮಾಡಲು ಕೋಟ್ಯಂತರ ಮೊತ್ತ ಅಗತ್ಯವಿದೆ. ಕೆರೆ ಹೂಳೆತ್ತುವ ಸಮಯದಲ್ಲಿ ಕೆರೆಯಂಚಿಗೆ ಹಾದು ಹೋಗಿರುವ ರಸ್ತೆಯ ಬದಿಗೆ ಅಗತ್ಯವಿದ್ದ ಪಿಚ್ಚಿಂಗ್ ಕೆಲಸವನ್ನೂ ಮಾಡಲಾಗಿದೆ. 2008–09ರಲ್ಲಿ ಒಮ್ಮೆ ಒತ್ತುವರಿಯನ್ನು ಸಹ ತೆರವು ಗೊಳಿಸಲಾಗಿತ್ತು’ ಎನ್ನುತ್ತಾರೆ ಉಮ್ಮಚಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ.

ಕೆರೆಯಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವ ಪಕ್ಷಿ.
ಕೆರೆಯನ್ನು ಪ್ರವಾಸಿತಾಣದ ರೂಪದಲ್ಲಿ ಅಭಿವೃದ್ಧಿ ಪಡಿಸಬೇಕೆನ್ನುವುದು ನಮ್ಮ ಕನಸು. ಆದರೆ ಅನುದಾನದ ಸಮಸ್ಯೆ ಇದೆ
ಕುಪ್ಪಯ್ಯ ಪೂಜಾರಿ ಉಮ್ಮಚಗಿ ಗ್ರಾ.ಪಂ ಅಧ್ಯಕ್ಷ
ಕೆರೆ ಅತಿಕ್ರಮಣವಾಗಿರುವುದನ್ನು ಈ ಹಿಂದೆ ಒಮ್ಮೆ ತೆರವುಗೊಳಿಸಲಾಗಿದೆ. ಪುನಃ ಅತಿಕ್ರಮಣವಾಗಿರುವ ಬಗ್ಗೆ ಪರಿಶೀಲಿಸಲಾಗುವುದು
ನಸ್ರಿನ್ ಫ.ಯಕ್ಕುಂಡಿ ಗ್ರಾ.ಪಂ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.