ADVERTISEMENT

ಉತ್ತರ ಕನ್ನಡ | ಚುನಾವಣೆಗಷ್ಟೇ ಸೀಮಿತವಾದ ಕೆರೆ ತುಂಬಿಸುವ ಯೋಜನೆಗಳು

ಗಣಪತಿ ಹೆಗಡೆ
Published 15 ಜನವರಿ 2024, 4:41 IST
Last Updated 15 ಜನವರಿ 2024, 4:41 IST
ಮುಂಡಗೋಡ ತಾಲ್ಲೂಕಿನ ಯರೇಬೈಲ್‌ ಸನಿಹ ಬೇಡ್ತಿ ಹಳ್ಳದಲ್ಲಿ ಪಂಪ್‌ಹೌಸ್‌ ಹಾಗೂ ನೀರು ಲಿಫ್ಟ್‌ ಮಾಡಲು ಕಾಮಗಾರಿ ಮಾಡಿರುವುದು
ಮುಂಡಗೋಡ ತಾಲ್ಲೂಕಿನ ಯರೇಬೈಲ್‌ ಸನಿಹ ಬೇಡ್ತಿ ಹಳ್ಳದಲ್ಲಿ ಪಂಪ್‌ಹೌಸ್‌ ಹಾಗೂ ನೀರು ಲಿಫ್ಟ್‌ ಮಾಡಲು ಕಾಮಗಾರಿ ಮಾಡಿರುವುದು    

ಕಾರವಾರ: ಜಿಲ್ಲೆಯ ಘಟ್ಟದ ಮೇಲಿನ ನಾಲ್ಕು ತಾಲ್ಲೂಕುಗಳಲ್ಲಿ ಕೆರೆ ತುಂಬಿಸಲು ರಾಜಕೀಯ ನಾಯಕರು ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿದ್ದರೆ ಇಷ್ಟೊತ್ತಿಗೆ ನೂರಾರು ಕೆರೆಗಳು ನೀರಿನಿಂದ ಭರ್ತಿಯಾಗಿ ಬಿರುಬೇಸಿಗೆಯಲ್ಲೂ ಹಸಿರು ಸಿರಿ ಕಂಗೊಳಿಸುವಂತೆ ಮಾಡಬೇಕಿತ್ತು. ಆದರೆ, ಕೆರೆಗೆ ನೀರು ತುಂಬಿಸುವ ಭರವಸೆಯು ‘ಮತ ಬುಟ್ಟಿಗೆ ಮತ ತುಂಬಲು’ ಸೀಮಿತವಾಗಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಒಳಗಾಗಿದೆ.

ಹಳಿಯಾಳ, ಮುಂಡಗೋಡ, ಬನವಾಸಿ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗಳು ಕುಂಟುತ್ತ ಸಾಗಿರುವುದು ಈ ಆರೋಪಕ್ಕೆ ಕಾರಣ. ಕೆರೆ ತುಂಬಿಸುವ ಯೋಜನೆ ವಿಷಯ ಮುಂದಿಟ್ಟು ಜನಪ್ರತಿನಿಧಿಗಳು ಎರಡು ಚುನಾವಣೆ ಎದುರಿಸಿದ್ದೂ ಆಗಿದೆ. ಆದರೆ ಈವರೆಗೂ ನೀರು ಹರಿದಿಲ್ಲ. ಪ್ರಾಯೋಗಿಕವಾಗಿ ಒಂದೆರಡು ಬಾರಿ ನೀರು ಹರಿಸಲಾಯಿತಾದರೂ ಈಗ ಪೈ‍ಪ್‍ಲೈನ್‍ಗಳು, ಕೆರೆಗಳು ನೀರಿಲ್ಲದೆ ಒಣಗಿವೆ.

ಶಿರಸಿ ತಾಲ್ಲೂಕಿನ ಪೂರ್ವ ಭಾಗದಲ್ಲಿ ವರದಾ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಏತ ನೀರಾವರಿ ಯೋಜನೆ ಅನುಷ್ಠಾನವಾಗಿ ವರ್ಷ ಕಳೆದರೂ ಬಹುತೇಕ ಕೆರೆಗಳು ಬತ್ತಿಕೊಂಡೇ ಇವೆ.

ADVERTISEMENT

₹65 ಕೋಟಿ ವೆಚ್ಚದ ಯೋಜನೆ: 

ಬನವಾಸಿ ಭಾಗದ 32 ಕೆರೆಗಳನ್ನು ತುಂಬಿಸಲು ₹65 ಕೋಟಿ ವೆಚ್ಚದಲ್ಲಿ 2018ರಲ್ಲಿ ಬನವಾಸಿ ಏತ ನೀರಾವರಿ ಯೋಜನೆ ಆರಂಭಿಸಲಾಗಿತ್ತು. ಪೈಪ್‌ಲೈನ್ ಜೋಡಣೆ, ಪಂಪ್‌ಹೌಸ್‌ ನಿರ್ಮಾಣ ಸೇರಿದಂತೆ ಯೋಜನೆ ಕಾಮಗಾರಿಗಳು ಪೂರ್ಣಗೊಂಡು ವರ್ಷಗಳು ಕಳೆದಿವೆ. ಜಾಕ್‌ವೆಲ್‌ ಸಮೀಪದ ಗುಡ್ನಾಪುರ, ತಿಗಣಿ, ಕಲಕರಡಿ ಕೆರೆಗಳಿಗೆ 2023ರಲ್ಲಿ ಒಮ್ಮೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿತ್ತು. ಅದಾದ ನಂತರ ಈ ಭಾಗದ ಯಾವ ಕೆರೆಗಳಿಗೂ ನೀರು ಹರಿದಿಲ್ಲ.

‘ನದಿಯಿಂದ 120 ಅಡಿ ಎತ್ತರದಲ್ಲಿ ಪೈಪ್‌ಲೈನ್ ಇದೆ. ಯೋಜನೆಯಡಿ 22 ಕಿ.ಮೀ. ದೂರದವರೆಗೆ ಮುಖ್ಯ ಪೈಪ್‍ಲೈನ್, 20 ಕಿ.ಮೀ. ಉಪ ಪೈಪ್‍ಲೈನ್ ಇದೆ. ಪದೇ ಪದೇ ವಿದ್ಯುತ್ ಹೋಗುವುದು, ಲೋ ವೋಲ್ಟೇಜ್ ಸಮಸ್ಯೆ ಇತ್ತು. ಹೀಗಾಗಿ ನೀರು ಒತ್ತಡದಿಂದ ಹರಿಸಲಾಗಲಿಲ್ಲ’ ಎಂದು ಯೋಜನೆ ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

₹220 ಕೋಟಿ ವೆಚ್ಚದ ಯೋಜನೆ

ಹಳಿಯಾಳ ತಾಲ್ಲೂಕಿನ ಆರು ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲ ಕಲ್ಪಿಸಲು ದಾಂಡೇಲಿ ತಾಲ್ಲೂಕಿನಲ್ಲಿ ಹರಿಯುವ ಕಾಳಿನದಿಯ ನೀರು ತಂದು ಕೆರೆಗಳಿಗೆ ತುಂಬಿಸುವ ಯೋಜನೆಯ ಕಾಮಗಾರಿ ನಾಲ್ಕು ವರ್ಷವಾದರೂ ಮುಗಿದಿಲ್ಲ.

ಶಾಸಕ ಆರ್‌.ವಿ.ದೇಶಪಾಂಡೆ ಮುತುವರ್ಜಿಯಿಂದ ₹220 ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆ 2018ರ ಫೆಬ್ರವರಿಯಲ್ಲಿ ಜಾರಿಯಾಗಿತ್ತು. 2019 ರಲ್ಲಿ ಯೋಜನೆ ಪೂರ್ಣ ಗೊಳ್ಳಬೇಕಿತ್ತಾದರೂ, ಆಮೆಗತಿಯ ಕೆಲಸದಿಂದ ನೀರು ಹರಿಸಲು ತಡವಾಗಿದೆ. ಸದ್ಯ ಶೇ 85 ರಷ್ಟು ಕಾಮಗಾರಿ ಮುಗಿದಿದ್ದು, ಮಾರ್ಚ್ ಅಂತ್ಯದೊಳಗೆ ಕೆಲಸ ಪೂರ್ಣವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

‘ಸುಮಾರು 125 ಕೀ.ಮೀ ಪೈಪ್‍ಲೈನ್‌ ಅಳವಡಿಸುವ ಕಾರ್ಯ ವ್ಯಾಪಿ ಹೊಂದಿದೆ. ರೈತರ ಕೃಷಿ ಜಮೀನಿನಲ್ಲಿ ಪೈಪ್‍ಲೈನ್ ಅಳವಡಿಸುವ ಕೆಲಸ ನಡೆಸಲು ಅವರ ಮನವೊಲಿಸಲು ಸಮಯ ಹಿಡಿದಿದೆ. ಜತೆಗೆ ಭೂಸ್ವಾದೀನ ಪ್ರಕ್ರಿಯೆ ಹಾಗೂ ಅರಣ್ಯ ಜಾಗದಲ್ಲಿ ಅನುಮತಿ ಪಡೆಯಲು ವಿಳಂಬವಾಗಿದೆ. ಕೋವಿಡ್ ಕಾರಣದಿಂದ ಎರಡು ವರ್ಷ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ’ ಎಂದು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್ ಆರ್.ಬಿ.ಮರಾಠೆ ಹೇಳಿದರು.

‘ಯೋಜನೆಯಿಂದ 19 ಬಾಂದಾರು ಹಾಗೂ 46 ಕೆರೆಗಳು ಹಾಗೂ ಮಿನಿ ಚೆಕ್‌‍ಡ್ಯಾಮ್‌ ತುಂಬಿಸಲಾಗುತ್ತದೆ. ಕಾಳಿನದಿಯಿಂದ 0.812 ಟಿ.ಎಂ.ಸಿ ನೀರನ್ನು ಕೆರೆಗಳಿಗೆ ಹಾಯಿಸಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ಮುಂಡಗೋಡ ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿ ನಿರೀಕ್ಷೆಯಂತೆ ಸಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಕವಲಗಿ ಹಾಗೂ ಬೇಡ್ತಿ ಹಳ್ಳದಿಂದ ತಾಲ್ಲೂಕಿನ 184 ಕೆರೆಗಳಿಗೆ ನೀರು ತುಂಬಿಸುವ ಬೃಹತ್‌ ನೀರಾವರಿ ಯೋಜನೆಯಾಗಿದೆ. ಕವಲಗಿ ಹಳ್ಳದಿಂದ ನೀರು ತುಂಬಿಸುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬೇಡ್ತಿ ಹಳ್ಳದ ಕಾಮಗಾರಿ ಶೇ 50ರಷ್ಟು ಆಗಿದೆ. ಒಟ್ಟು ಮೂರು ಹಂತದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿದ್ದರೇ, ಬರಗಾಲದಂತ ಇಂತಹ ಸಮಯದಲ್ಲಿ ರೈತರಿಗೆ ಅನುಕೂಲವಾಗುತ್ತಿತ್ತು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

‘ಬೇಡ್ತಿ ಹಳ್ಳದಿಂದ ಅಗಡಿ, ಇಂದೂರ ಮಾರ್ಗವಾಗಿ ಮುಖ್ಯ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಕವಲಗಿ ಹಳ್ಳದಿಂದ ನೀರು ತುಂಬಿಸುವ ಕಾಮಗಾರಿ ಶೇ 90ರಷ್ಟು ಮುಗಿದಿದೆ. ಈ ವರ್ಷದ  ಸೆಪ್ಟಂಬರ್‌ ಅಂತ್ಯದ ವೇಳೆಗೆ ಬಹುತೇಕ ಕಾಮಗಾರಿ ಮುಗಿಯುವ ಸಾಧ್ಯತೆಯಿದೆ. ಕೋವಿಡ್‌ ಮತ್ತಿತರ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ನೀರಾವರಿ ನಿಗಮದ ಎಇಇ ಮಂಜುನಾಥ ಬಿಂಡಿ ಹೇಳಿದರು.

ಯಲ್ಲಾಪುರ ತಾಲ್ಲೂಕು ಕಂಪ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಹೊಸಳ್ಳಿ ಗ್ರಾಮದಲ್ಲಿ ₹3.75 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮದ  53 ರೈತ ಕುಟುಂಬಗಳು ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದಿದ್ದು ಇನ್ನೂ ಕೆಲವರು ನೀರಾವರಿ ಕಾಲುವೆ ಮಾಡಿಕೊಂಡು ನೀರನ್ನು ತಮ್ಮ ಹೊಲಗದ್ದೆಗಳಿಗೆ ಬಳಸಿಕೊಳ್ಳಲಿದ್ದಾರೆ. ಯೋಜನೆಯಿಂದ 250 ರಿಂದ 300 ಎಕರೆ ಕೃಷಿಭೂಮಿ ಸಾಗುವಳಿಗೆ ಅನುಕೂಲವಾಗಿದೆ.

ಯೋಜನೆ ಜಾರಿಗೆ ಅಡ್ಡಿಯಾದ ‘ಗ್ರಿಡ್’

ಬನವಾಸಿ ಹೋಬಳಿಯಲ್ಲಿ ನೂರಾರರು ಎಕರೆ ಕೃಷಿಭೂಮಿಗೆ ವರದಾ ನದಿ ನೀರು ಹರಿಸುವ ಯೋಜನೆ ಕಾರ್ಯರೂಪಕ್ಕೆ ಬಂದು ವರ್ಷಗಳೆ ಕಳೆದಿವೆ. ಆದರೆ ಬನವಾಸಿಯಲ್ಲಿ 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ (ಗ್ರಿಡ್) ಇನ್ನೂ ಸ್ಥಾಪನೆಯಾಗದಿರುವುದು ಕೆರೆಗೆ ನೀರು ಹರಿಸಲು ಅಡ್ಡಿಯಾಗಿದೆ. ‘ಕೆರೆ ತುಂಬಿಸುವ ಮೊದಲ ಹಂತದ ಯೋಜನೆಯ ಕಾಮಗಾರಿಗಳು ಮುಗಿದಿವೆ. ಸುಸಜ್ಜಿತ ಯಂತ್ರಗಳು ಅಳವಡಿಕೆಯಾಗಿವೆ. ಆದರೆ ಅವುಗಳ ಚಾಲನೆಗೆ ವಿದ್ಯುತ್ ಕೊರತೆ ಇದೆ. ದೊಡ್ಡ ಪ್ರಮಾಣದಲ್ಲಿ ನೀರು ಸೆಳೆದು ಕೆರೆಗೆ ಹಾಯಿಸಲು ಹೈ ವೊಲ್ಟೇಜ್ ವಿದ್ಯುತ್ ಅಗತ್ಯವಿರುವುದರಿಂದ ತಾಂತ್ರಿಕ ತೊಂದರೆ ಎದುರಿಸಿದ್ದೇವೆ. ಇದರಿಂದ ಯಂತ್ರಗಳು ಹಲವು ಬಾರಿ ಕೆಟ್ಟಿರುವ ಘಟನೆಗಳು ನಡೆದಿವೆ’ ಎನ್ನುತ್ತಾರೆ ನೀರಾವರಿ ನಿಗಮದ ಶಿಕಾರಿಪುರ ವಿಭಾಗದ ಎಂಜಿನಿಯರ್ ಸತೀಶ್. ‘ಎರಡನೇ ಹಂತದಲ್ಲಿ ಪುನಃ 32ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹಾಯಿಸುವ ಯೋಜನೆಯ ವಿಸ್ತೃತ ಯೋಜನಾ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ’ ಎಂದೂ ತಿಳಿಸಿದರು.

ಚುನಾವಣೆಗೆ ‘ಸರಕು’ ಆಗಿತ್ತು...

ಮುಂಡಗೋಡ ತಾಲ್ಲೂಕಿನಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ರಾಜಕೀಯವಾಗಿ ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಯೋಜನೆ ಬಿಜೆಪಿಗೆ ಪ್ರಚಾರದ ಸರಕು ಆಗಿದ್ದರೆ ಕಾಂಗ್ರೆಸ್‍ಗೆ ಟೀಕಿಸಲು ಸರಕು ಆಗಿತ್ತು. ಮಾಜಿ ಶಾಸಕ ವಿ.ಎಸ್‌.ಪಾಟೀಲ ‘ಕೆರೆಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗುವುದಿಲ್ಲ. ಇದರಿಂದ ರೈತರ ಗದ್ದೆಗಳಿಗೆ ಹನಿ ನೀರೂ ಹರಿಯುವುದಿಲ್ಲ’ ಎಂದು ಹಿಂದೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ‘ರೈತರ ಗದ್ದೆಗಳಿಗೆ ನೀರುಣಿಸಿಯೇ ಯೋಜನೆ ವಿರೋಧಿಸುವರಿಗೆ ಉತ್ತರ ನೀಡುತ್ತೇನೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಯೋಜನೆ ಸಮರ್ಥಿಸಿಕೊಂಡಿದ್ದರು.

ವರದಾ ನದಿಯಲ್ಲಿ ನೀರಿನ ಕೊರತೆಯ ಕಾರಣಕ್ಕೆ ಸರಿಯಾಗಿ ನೀರು ಹರಿದಿಲ್ಲ. ಉತ್ತಮ ಮಳೆಯಾಗುವ ಜತೆಗೆ ಈ ಭಾಗದ ವಿದ್ಯುತ್‌ ವೋಲ್ವೇಜ್ ಸಮಸ್ಯೆ ಬಗೆಹರಿದರೆ ಎಲ್ಲ ಕೆರೆಗಳು ತುಂಬಲಿವೆ.
ಶಿವರಾಮ ಹೆಬ್ಬಾರ, ಶಾಸಕ
ಬನವಾಸಿ ಹೋಬಳಿಯಲ್ಲಿ ಮಳೆ ಕೊರತೆ ಉಂಟಾಗಿ ಬರಗಾಲ ಸ್ಥಿತಿಯಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಬವಣೆ ಎದುರಾಗಿದೆ. ಅಂತರ್ಜಲವೂ ತಗ್ಗಿದ್ದು ಕೆರೆಗಳು ಒಣಗಿವೆ. ಯೋಜನೆ ಉದ್ದೇಶ ಈಡೇರದ ಕಾರಣ ಇಂಥ ಸ್ಥಿತಿ ನಿರ್ಮಾಣವಾಗಿದೆ.
ಸಂತೋಷ ನಾಯ್ಕ, ಕೃಷಿಕ, ಬನವಾಸಿ
ಕೆರೆಹೊಸಳ್ಳಿ ಕೆರೆ ತುಂಬಿಸುವ ಯೋಜನೆ ಜಾರಿಯಾಗಿದ್ದರಿಂದ ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲ ಆಗಿದೆ.
ದತ್ತಾತ್ರಯ ಭಾಗ್ವತ, ಕೆರೆಹೊಸಳ್ಳಿ ಗ್ರಾಮಸ್ಥ
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ರೈತರ ಗದ್ದೆಗಳಲ್ಲಿ ಕಾಲುವೆ ನಿರ್ಮಿಸಿ ಅರ್ಧಮರ್ಧವಾಗಿ ಪೈಪ್‌ಗಳನ್ನು ಹಾಕಿದ್ದಾರೆ.
ಪೀರಜ್ಜ ಸಾಗರ, ಮುಂಡಗೋಡ ರೈತ ಸಂಘದ ಅಧ್ಯಕ್ಷ

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ವಿಶ್ವೇಶ್ವರ ಗಾಂವ್ಕರ.

ಮುಂಡಗೋಡ ತಾಲ್ಲೂಕಿನ ಹುನಗುಂದ ಕ್ರಾಸ್‌ ಸನಿಹ ಮುಖ್ಯ ಪೈಪ್‌ಲೈನ್‌ ಅಳವಡಿಸುವ ಕಾರ್ಯ ನಡೆದಿರುವುದು
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಅಂಡಗಿ–ದಾಸನಕೊಪ್ಪ ರಸ್ತೆ ಸಮೀಪದಲ್ಲಿರುವ ಸಣ್ಣಕೆರೆ ನೀರಿಲ್ಲದೆ ಒಣಗಿರುವುದು
ಕೆರೆಗಳಿಗೆ ನೀರು ತುಂಬಿಸುವ ಮೊದಲನೇ ಹಂತದಲ್ಲಿ ಅಂಬೇವಾಡಿ ಬಳಿ ನಿರ್ಮಿಸಿದ ಜಾಕ್‍ವೆಲ್
ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿ ಕೆರೆ ತುಂಬಿಸುವ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹಾಯಿಸಿ ಪರಿಶೀಲಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.