ಕಾಸರಕೋಡಿನಲ್ಲಿ 5.57 ಲಕ್ಷ ಗೇರುಸೊಪ್ಪದಲ್ಲಿ 2.09 ಲಕ್ಷ ಸಸಿ
ಸಿಬ್ಬಂದಿಯಿಂದ ಪ್ರತಿದಿನ ಆರೈಕೆ
ಔಷಧೀಯ ಸಸ್ಯಗಳೂ ಲಭ್ಯ
ಹೊನ್ನಾವರ: ತಾಲ್ಲೂಕಿನ ಕಾಸರಕೋಡ ಹಾಗೂ ಗೇರುಸೊಪ್ಪ ಸಸ್ಯಪಾಲನಾ ಕೇಂದ್ರಗಳಲ್ಲಿ ಲಕ್ಷಾಂತರ ಸಸಿಗಳು ಹಸಿರಿನಿಂದ ನಳನಳಿಸುತ್ತಿದ್ದು, ಮುಂಗಾರಿನಲ್ಲಿ ನಾಟಿಗೆ ಎದುರು ನೋಡುತ್ತಿವೆ.
ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಗೇರುಸೊಪ್ಪದ ಶರಾವತಿ ಸಸ್ಯಪಾಲನಾಲಯ ಹಾಗೂ ಕಾಸರಕೋಡಿನ ಕೇಂದ್ರೀಯ ಸಸ್ಯಪಾಲನಾಲಯಗಳಲ್ಲಿ ಸಾಲು ಸಾಲಾಗಿ ಜೋಡಿಸಿಡಲಾಗಿರುವ ಲಕ್ಷಕ್ಕೂ ಅಧಿಕ ಸಸಿಗಳು, ಸೊಬಗು ಹೆಚ್ಚಿಸಿವೆ. ಎರಡೂ ಕೇಂದ್ರಗಳಲ್ಲಿ ಹತ್ತಾರು ಕೆಲಸಗಾರರು ಪ್ರತಿದಿನ ಅಗತ್ಯ ನೀರು, ಗೊಬ್ಬರ ನೀಡಿ ಸಸಿಗಳನ್ನು ಪೋಷಿಸುತ್ತಿದ್ದಾರೆ.
ಕಾಸರಕೋಡಿನ ಕೇಂದ್ರ ಸಸ್ಯಪಾಲನಾಲಯದಲ್ಲಿ 5.57 ಲಕ್ಷ ಸಸಿಗಳು ಹಾಗೂ ಶರಾವತಿ ಸಸ್ಯಪಾಲನಾ ಕೇಂದ್ರದಲ್ಲಿ 2.09 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.
‘ಮಕ್ಕಳಂತೆ ಇಲ್ಲಿ ಸಸಿಗಳನ್ನು ಪೋಷಿಸಿದ್ದೇವೆ. ಇವು ಹೆಮ್ಮರವಾಗಿ ಅಸಂಖ್ಯ ಪ್ರಾಣಿ–ಪಕ್ಷಿಗಳಿಗೆ ಆಶ್ರಯ ತಾಣ ಆಗುವುದನ್ನು ಕಲ್ಪಿಸಿಕೊಂಡರೆ ರೋಮಾಂಚನವಾಗುತ್ತದೆ’ ಎಂದು ಕಾಸರಕೋಡ ಸಸ್ಯಪಾಲನಾಲಯದ ಅರಣ್ಯ ಸಿಬ್ಬಂದಿಯೊಬ್ಬರು ಹರ್ಷ ವ್ಯಕ್ತಪಡಿಸಿದರು.
‘ಸಾರ್ವಜನಿಕರು ಹಾಗೂ ರೈತರಿಗೆ ಸಾಗುವಾನಿ, ಗೇರು, ರಕ್ತಚಂದನ, ಬಿಲ್ವಪತ್ರೆ, ಸೀತಾಫಲ, ಮಾವು, ನೇರಳೆ, ಹೊಂಗೆ, ಮಹಾಗನಿ, ಬೆಟ್ಟಹೊನ್ನೆ, ಕಾಮತ್ತಿ, ಕಾಡು ಬದಾಮ, ಸಂಪಿಗೆ, ಕದಂಬ, ಸುರಗಿ, ಮುರುಗಲು, ಶ್ರೀಗಂಧ ಮೊದಲಾದ ಜಾತಿಯ ಒಟ್ಟು 4,200 ಸಸಿಗಳನ್ನು ವಿತರಿಸಲಾಗುವುದು’ ಎಂದು ಹೊನ್ನಾವರ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ತಿಳಿಸಿದರು.
‘ಅಪರೂಪದ ಸಸ್ಯಕಾಶಿ’
ಸಸ್ಯಪಾಲನಾಲಯದಲ್ಲಿ ದೊಡ್ಡ ಗಾತ್ರದ ಮರಗಳಾಗುವ ಹೆಬ್ಬಲಸು ಮಾವು ನೇರಳೆ ಸಾಲುಧೂಪ ಬೆಟ್ಟಹೊನ್ನೆ ಮಹೋಗನಿ ಕದಂಬ ಮೊದಲಾದ ಸಸಿಗಳಿವೆ. ಜೊತೆಗೆ ಕಿರು ಅರಣ್ಯ ಉತ್ಪನ್ನ ನೀಡುವ ಮುರುಗಲು ಉಪ್ಪಾಗೆ ರಾಮಪತ್ರೆ ನೆಲ್ಲಿ ನೇರಳೆ ಮೊದಲಾದ ಗಿಡಗಳೂ ಆದ್ಯತೆ ಪಡೆದಿವೆ. ಅಳಿವಿನಂಚಿನಲ್ಲಿರುವ ಸೀತಾ ಅಶೋಕ ಗುಳಮಾವು ಹೆಬ್ಬಲಸು ರಾಮಪತ್ರೆ ಸಾಲಧೂಪ ಸಸಿಗಳ ಜೊತೆಗೆ ಔಷಧೀಯ ಗುಣಗಳನ್ನೊಳಗೊಂಡ ಮುತ್ತುಗ ಸೆಮಿಪತ್ರೆ ಅಂಟುವಾಳ ಜಾಯಿಕಾಯಿ ಬಿಲ್ವಪತ್ರೆ ರಕ್ತಚಂದನ ಶ್ರೀಗಂಧ ಮೊದಲಾದ ಸಸಿಗಳೂ ಆಶ್ರಯ ಪಡೆದಿರುವುದು ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.