ಶಿರಸಿ: ಸಿದ್ದಾಪುರ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಬೇಕು ಎಂಬ ಹಲವು ವರ್ಷದ ಕೂಗಿಗೆ ಕಳೆದ ವರ್ಷ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸ್ಪಂದನೆ ಸಿಕ್ಕಿತ್ತು. ಈ ವರ್ಷ ವಸಾಹತು ಸ್ಥಾಪನೆಗೆ 47.4 ಎಕರೆ ಜಾಗ ಪಡೆದುಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆ.ಎಸ್.ಎಸ್.ಐ.ಡಿ.ಸಿ.) ಜ.24 ರಂದು ಸಿದ್ದಾಪುರ ತಾಲ್ಲೂಕಿನ ಮನ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಲವಳ್ಳಿ ಗ್ರಾಮದ ಸರ್ವೆ ನಂ.64ರ 11.13 ಎಕರೆ, 65ರಲ್ಲಿರುವ 8.2 ಎಕರೆ, 66ರಲ್ಲಿರುವ 14.7 ಎಕರೆ ಮತ್ತು 67ರಲ್ಲಿರುವ 13.24 ಎಕರೆ ಭೂಮಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಜಾಗ ಸ್ವಾಧೀನಗೊಂಡ ಬಳಿಕ ಕೈಗಾರಿಕಾ ವಸಾಹತುಗಳಿಗೆ ಅಗತ್ಯ ಸೌಲಭ್ಯ ಬೇಗನೆ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಕೈಗಾರಿಕೋದ್ಯಮಿಗಳಿದ್ದಾರೆ. ಕಳೆದ ಬಜೆಟ್‍ನಲ್ಲಿ ಇದಕ್ಕಾಗಿ ₹2 ಕೋಟಿ ಅನುದಾನ ಮೀಸಲಿಟ್ಟಿರುವ ಕಾರಣ ಸೌಕರ್ಯಗಳಿಗೆ ಕೊರತೆ ಉಂಟಾಗದು ಎಂಬುದು ಉದ್ಯಮಿಗಳ ಅಭಿಪ್ರಾಯ.
ತಾಲ್ಲೂಕಿನಲ್ಲಿ ನೂರಾರು ಸಂಖ್ಯೆಯ ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸೂಕ್ತ ಸೌಕರ್ಯಗಳನ್ನು ಒಳಗೊಂಡಿರುವ ಕೈಗಾರಿಕಾ ವಸಾಹತು ಇರಲಿಲ್ಲ ಎಂಬ ಸಿದ್ದಾಪುರದ ಜನತೆಯ ಕೊರಗು ದೂರವಾಗುವ ಕಾಲ ಸನ್ನಿಹಿತವಾಗಿದೆ.
‘ವಸಾಹತು ಸ್ಥಾಪನೆಗೆ ನಿಗದಿಪಡಿಸಿದ ಜಾಗ ಪಟ್ಟಣದಿಂದ ದೂರವಿದ್ದರೂ ಸೂಕ್ತ ಸ್ಥಳದಲ್ಲಿದೆ ಎಂಬ ಸಮಾಧಾನವಿದೆ. ವಸಾಹತು ಸ್ಥಾಪನೆಗೊಳ್ಳುವ ಜಾಗದ ಪಕ್ಕವೇ ಬೆಂಗಳೂರು–ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿ ಇದೆ. ಒಂದೂವರೆ ಕಿ.ಮೀ. ದೂರದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣವೂ ಇದೆ. ಹೀಗಾಗಿ ಇದು ಸರಕು ಸಾಗಣೆಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವೀರಭದ್ರ ನಾಯ್ಕ.
‘ಗ್ರಾಮೀಣ ಭಾಗದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೊಳ್ಳಲಿರುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುವ ಭರವಸೆ ಮೂಡಿದೆ. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು ಕೃಷಿ ನಂಬಿ ಬದುಕುವುದು ಅಸಾಧ್ಯ. ಹೀಗಾಗಿ ಈ ವಸಾಹತು ಇಲ್ಲಿನ ಜನರ ಜೀವನದ ದಿಕ್ಕು ಬದಲಿಸುವ ಆಶಾಭಾವ ಮೂಡಿದೆ’ ಎಂದು ಅಭಿಪ್ರಾಯಪಟ್ಟರು.
ನೂರಾರು ಜನರಿಂದ ಅರ್ಜಿ
‘ಮಳಲವಳ್ಳಿ ಗ್ರಾಮದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸುವ ಸಲುವಾಗಿ ಜಾಗ ನೀಡಲು ನಾಲ್ಕು ವರ್ಷಗಳ ಹಿಂದೆಯೇ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಠರಾವು ಮಾಡಲಾಗಿತ್ತು. ಆಗ ನಾನೇ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿದ್ದೆ. ವಸಾಹತು ಸ್ಥಾಪನೆಗೆ ಬಜೆಟ್‍ನಲ್ಲಿ ಅನುಮೋದನೆ ದೊರೆತ ಬಳಿಕ ಸ್ಥಳಿಯ ಉದ್ಯಮಿಗಳಲ್ಲಿ ಭರವಸೆ ಮೂಡಿತು. ಕೈಗಾರಿಕೆಗಳ ಸ್ಥಾಪನೆಗೆ ಪ್ಲಾಟುಗಳನ್ನು ಪಡೆಯಲು ಈಗಾಗಲೆ ಗ್ರಾಮದ ನೂರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ’ ಎಂದು ವೀರಭದ್ರ ನಾಯ್ಕ ತಿಳಿಸಿದರು.
-----------
ವಸಾಹತು ಸ್ಥಾಪನೆಗೆ ಅಗತ್ಯವಿರುವ ಜಾಗ ಕಬ್ಜಾ ಪಡೆಯಲಾಗಿದೆ. ಅಲ್ಲಿರುವ ಗಿಡ, ಮರಗಳನ್ನು ಕಟಾವು ಮಾಡಿದ ಬಳಿಕ ಪ್ಲಾಟುಗಳನ್ನು ರಚಿಸುತ್ತೇವೆ. ಬಳಿಕ ಸೌಕರ್ಯಗಳನ್ನು ಒದಗಿಸುತ್ತೇವೆ.
ದಿನೇಶ ಜವಳಿ
ಸಹಾಯಕ ವ್ಯವಸ್ಥಾಪಕ, ಕೆ.ಎಸ್.ಎಸ್.ಐ.ಡಿ.ಸಿ. ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.