ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಜೀವಂತ

ಕಳೆದ ವರ್ಷದ ದುರಂತದಿಂದ ಎಚ್ಚೆತ್ತುಕೊಳ್ಳದ ಆಡಳಿತ

ಗಣಪತಿ ಹೆಗಡೆ
Published 2 ಜೂನ್ 2025, 4:52 IST
Last Updated 2 ಜೂನ್ 2025, 4:52 IST
ಕಾರವಾರ ತಾಲ್ಲೂಕಿನ ಮಂದ್ರಾಳಿಯಲ್ಲಿ ಜನವಸತಿ ಪ್ರದೇಶದ ಬಳಿ ಅಪಾಯಕಾರಿ ಸ್ಥಿತಿಯಲ್ಲಿರುವ ಗುಡ್ಡ.
ಕಾರವಾರ ತಾಲ್ಲೂಕಿನ ಮಂದ್ರಾಳಿಯಲ್ಲಿ ಜನವಸತಿ ಪ್ರದೇಶದ ಬಳಿ ಅಪಾಯಕಾರಿ ಸ್ಥಿತಿಯಲ್ಲಿರುವ ಗುಡ್ಡ.   

ಕಾರವಾರ: ರಾಜ್ಯದಲ್ಲೇ ಅತಿ ಹೆಚ್ಚು ಭೂಕುಸಿತ ಸಂಭವಿಸುವ ಜಿಲ್ಲೆಯಲ್ಲಿ ಕುಸಿತ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಲು ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪಗಳ ನಡುವೆಯೇ ಮಳೆಗಾಲ ಆರಂಭಗೊಂಡಿದೆ. ಕಳೆದ ಸಾಲಿನಲ್ಲಿ ಸಂಭವಿಸಿದ ದುರಂತಗಳ ಬಳಿಕವೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ದಶಕದಿಂದ ಈಚೆಗೆ ಜಿಲ್ಲೆಯಲ್ಲಿ 588ರಷ್ಟು ಭೂಕುಸಿತದ ಘಟನೆಗಳು ನಡೆದಿವೆ. ಜಿಲ್ಲೆಯಲ್ಲಿ 439 ಸ್ಥಳಗಳಲ್ಲಿ ಕುಸಿತ ಸಂಭವಿಸಬಹುದು ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ತಜ್ಞರು ವರದಿ ನೀಡಿ ಮೂರು ವರ್ಷ ಕಳೆದಿದೆ. ಆದರೆ, ಈವರೆಗೂ ಕುಸಿತ ಸಂಭವಿಸಿದ ಸ್ಥಳಗಳ ಪೈಕಿ ಕೆಲವಷ್ಟರಲ್ಲಿ ಮಾತ್ರ ತಡೆಗೋಡೆಯೊಂದನ್ನು ನಿರ್ಮಿಸಲಾಗಿದೆ. ಅದರ ಹೊರತಾಗಿ ಯಾವುದೇ ಸುರಕ್ಷಿತಾ ಕ್ರಮವಾಗಿಲ್ಲ.

ಕಾರವಾರದ ಮಂದ್ರಾಳಿಯಲ್ಲಿ ತಡೆಗೋಡೆ ನಿರ್ಮಿಸಿದ್ದರ ಹೊರತಾಗಿಯೂ ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿ, ಹೆದ್ದಾರಿ ಮತ್ತು ಮನೆಗಳ ಮೇಲೆ ಮಣ್ಣಿನ ರಾಶಿ ಎರಗಿತ್ತು. ಈಗಲೂ ಅಲ್ಲಿ ಆತಂಕ ಮುಂದುವರಿದಿದೆ. ಅಣಶಿ ಘಟ್ಟದಲ್ಲಿ ಗೇಬ್ರಿಯನ್ ವಾಲ್ ನಿರ್ಮಿಸಿದ್ದರೂ ಆಗಾಗ ಕುಸಿತ ಸಂಭವಿಸುತ್ತಲೇ ಇದೆ. ಅಧಿಕಾರಿಗಳು ಕುಸಿತ ತಡೆಗೆ ಸಭೆಗಳನ್ನು ನಡೆಸಿ ಚರ್ಚಿಸಿದ್ದರ ಹೊರತಾಗಿ, ಸ್ಥಳದಲ್ಲಿ ಯಾವುದೇ ಕ್ರಮವೂ ಆಗುತ್ತಿಲ್ಲ ಎಂಬುದು ಜನರ ಆರೋಪ.

ADVERTISEMENT

ಶಿರಸಿ ತಾಲ್ಲೂಕಿನ ಮತ್ತಿಘಟ್ಟ ಕೆಳಗಿನಕೇರಿ ಸಮೀಪದ ಕಲಗದ್ದೆಯಲ್ಲಿ ಈಚಿನ ವರ್ಷದಲ್ಲಿ ಎರಡು ಸಾರಿ ಭೂಕುಸಿತ ಸಂಭವಿಸಿದ್ದು, ಈ ಬಾರಿ ಮಳೆ ಅಧಿಕವಾದರೆ ಮತ್ತೆ ಇಲ್ಲಿ ಭೂ ಕುಸಿತವಾಗುವ ಸಾಧ್ಯತೆ ದಟ್ಟವಾಗಿದೆ. ಕುಸಿತವಾದ ಪ್ರದೇಶದ ಸುತ್ತಲಿನ ಅಡಿಕೆ ತೋಟ ಮತ್ತಷ್ಟು ನಾಶವಾಗುವ ಆತಂಕದಲ್ಲಿ ಸ್ಥಳೀಯರಿದ್ದಾರೆ. ಸಮೀಪದ ಮಾಡಲಮನೆಯಲ್ಲಿ ಕಳೆದ ವರ್ಷ ಭೂಕುಸಿತ ಉಂಟಾಗಿದ್ದು, ಈ ಬಾರಿಯೂ ಆತಂಕದ ಸ್ಥಿತಿ ಇದೆ ಎನ್ನುತ್ತಾರೆ ಸೀತಾರಾಮ ಭಟ್.

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆ, ತಳಕೆಬೈಲ್, ಬೀಗಾರ ಹಾಗೂ ಡಬ್ಗುಳಿ ಭೂ ಕುಸಿತದ ಸಾಧ್ಯತೆ ಇರುವ ಸ್ಥಳಗಳಾಗಿವೆ. ತಳಕೇಬೈಲಿನಲ್ಲಿ ರಸ್ತೆ ಕುಸಿತದ ನಂತರ ಅಪಾಯ ತಪ್ಪಿಸಲು ತಂತಿ ಅಳವಡಿಸಿ ಜನ ಸಮೀಪ ಹೋಗದಂತೆ ತಡೆಯಲಾಗಿದೆ.

ಜೊಯಿಡಾ ತಾಲ್ಲೂಕಿನಲ್ಲಿ ಹಾದು ಹೋಗಿರುವ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ ಮಳೆಗಾಲದಲ್ಲಿ ಅಣಶಿ ಘಟ್ಟ, ದೋಣಪಾ ಮತ್ತು ಚಾಪೋಲಿ ಬಳಿ ಕುಸಿಯುತ್ತಿದೆ. ದೋಣಪಾದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಡಿಗ್ಗಿ ಭಾಗದ ಸುಮಾರು 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉಳವಿ-ಗೋವಾ ಗಡಿ ರಾಜ್ಯ ಹೆದ್ದಾರಿ ಕಾಳಪೆ, ಪಣಸಗಾಳಿ ಬಳಿ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಮಣ್ಣು ಕುಸಿದು ಸಂಚಾರ ಸಮಸ್ಯೆ ಎದುರಾಗುತ್ತದೆ. ಕಾಳಪೆಯ ಒಂದು ಕಡೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ದೋಣಪಾದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸೇತುವೆಯ ಒಂದು ಭಾಗದ ಮಣ್ಣು ಕುಸಿಯುತ್ತಿದ್ದು ಮಳೆ ಪ್ರಾರಂಭವಾದರೂ ಲೋಕೋಪಯೋಗಿ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬುದು ಜನರ ಆರೋಪ.

ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿರುವ ರಾಮತೀರ್ಥದ ದೇವಸ್ಥಾನದ ಬಳಿ, ಕಳೆದ ಜುಲೈ ತಿಂಗಳಲ್ಲಿ ಬಂದ ಭಾರಿ ಮಳೆಗೆ ಕುಸಿದು ಬಿದ್ದ ಗುಡ್ಡದ ಕಲ್ಲು, ಮಣ್ಣಿನ ರಾಶಿ ಈವರೆಗೂ ತೆರವುಗೊಂಡಿಲ್ಲ. ಈ ವರ್ಷದ ಮಳೆಗೆ ದೇವಸ್ಥಾನಕ್ಕೂ ಹಾನಿಯಾಗಬಹುದು ಎಂಬ ಆತಂಕವನ್ನು ಅರ್ಚಕ ಪ್ರಕಾಶ ಅಂಬೇಕರ ವ್ಯಕ್ತಪಡಿಸುತ್ತಾರೆ.

‘ಗುಡ್ಡ ಕುಸಿದ ಸ್ಥಳ ಖಾಸಗಿಯವರಿಗೆ ಸೇರಿದೆ. ಈ ಸ್ಥಳಕ್ಕೆ ಜೆಸಿಬಿ ತರುವುದು ಸಾಧ್ಯವಾಗದ ಕಾರಣ ಮಣ್ಣು ತೆರವುಗೊಳಿಸುವುದು ಕಷ್ಟವಾಗಿದೆ’ ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿದರು.

ಸಮೀಪದ ಮೂಡಂಗಿ ಗ್ರಾಮದಲ್ಲಿ, ಒಂದೇ ಕೌಂಪೌಂಡ್‌ನಲ್ಲಿರುವ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಗುಡ್ಡದ ಬಹು ದೊಡ್ಡಭಾಗ ಕುಸಿದು ಬಿದ್ದಿತ್ತು. ಕುಸಿದ ಬೃಹದಾಕಾರದ ಬಂಡೆಕಲ್ಲುಗಳು ಒಂದು ಶಾಲೆಯ ಹಿಂಬದಿ ಗೋಡೆಗೆ ತಾಗಿ ನಿಂತಿದೆ. ಈವರೆಗೂ ಬಂಡೆಕಲ್ಲುಗಳನ್ನು ತೆರವುಗೊಳಿಸಿಲ್ಲ. ಬರ್ಗಿ ಗ್ರಾಮದ ಕುರಿಗದ್ದೆ ಬಳಿ, ಗುಡ್ಡದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಭಾರೀ ಬಿರುಕು ಉಂಟಾಗಿದ್ದು ಸ್ಥಳೀಯರಲ್ಲಿ ಇನ್ನೂ ಆತಂಕವಿದೆ.

ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡ, ಆರೊಳ್ಳಿ, ಭಾಸ್ಕೇರಿ ಮುಂತಾದೆಡೆಗಳಲ್ಲಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿತ ಉಂಟಾಗಿ ಅವಾಂತರಗಳು ಉಂಟಾಗಿದ್ದವು. ಪ್ರಸ್ತುತ ವರ್ಷ ಮಳೆಗಾಲದ ಆರಂಭದಲ್ಲೇ ಚಿಕ್ಕನಕೋಡ, ಭಾಸ್ಕೇರಿ, ಮುಗ್ವಾ, ಕರ್ನಲ್ ಹಿಲ್, ಹುಲಿಯಪ್ಪನಕಟ್ಟೆಯಲ್ಲಿ ಧರೆ ಕುಸಿದಿದೆ. ಧರೆಯಂಚಿನಲ್ಲಿ ಜೆಜೆಎಂ ಕಾಮಗಾರಿಗಾಗಿ ಪೈಪ್ ಅಳವಡಿಸುವ ಕಾರ್ಯ ನಡೆದಿದ್ದು ಗುಡ್ಡದ ಮಣ್ಣು ಮತ್ತಷ್ಟು ಶಿಥಿಲವಾಗಿದೆ. ಹುಲಿಯಪ್ಪನಕಟ್ಟೆ ಸಮೀಪ ಗುಡ್ಡ ಕೊರೆದು ಭಾರಿ ಪ್ರಮಾಣದಲ್ಲಿ ಮಣ್ಣು ಸಾಗಿಸಿರುವುದರಿಂದ ಅಲ್ಲಿಯೂ ಗುಡ್ಡ ಕುಸಿತದ ಅಪಾಯ ಎದುರಾಗಿದೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.

‘ಕಳೆದ ಮಳೆಗಾಲದಲ್ಲಿ ಪುನರ್ವಸತಿ ಕೇಂದ್ರ ತೆರೆದಿದ್ದನ್ನು ಬಿಟ್ಟರೆ ಗುಡ್ಡ ಕುಸಿತ ತಡೆಯಲು ಯಾವುದೇ ಶಾಶ್ವತ ಪರಿಹಾರ ಕಾರ್ಯ ಕೈಗೊಂಡಿಲ್ಲ’ ಎನ್ನುತ್ತಾರೆ ಅಪ್ಸರಕೊಂಡದ ಮಂಜುನಾಥ ಗೌಡ.

ಕುಮಟಾ ತಾಲ್ಲೂಕಿನಲ್ಲಿ ಕಳೆದ ಕೆಲ ವರ್ಷಗಳಿಂದ ಭೂಕುಸಿತದ ಘಟನೆಗಳು ಹೆಚ್ಚುತ್ತಲೇ ಇವೆ. ಕಳೆದ ವರ್ಷ ಇಲ್ಲಿನ ಉಳ್ಳೂರ ಮಠ, ಬರ್ಗಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ಭಾರಿ ಕುಸಿತ ಉಂಟಾಗಿತ್ತು. ಈ ಮಳೆಗಾಲದ ಆರಂಭದಲ್ಲಿಯೂ ಖೈರೆ, ಮುರೂರು ಸೇರಿದಂತೆ ಹಲವೆಡೆ ಕುಸಿತ ಸಂಭವಿಸಿದ್ದು ಅಪಾಯದ ಎಚ್ಚರಿಕೆ ಗಂಟೆ ಬಾರಿಸಿದೆ.

ಜೊಯಿಡಾ ತಾಲ್ಲೂಕಿನ ದೋಣಪಾದಲ್ಲಿ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಕುಸಿತ ತಡೆಗೆ ತಡೆಗೋಡೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.
ಕುಮಟಾ ತಾಲ್ಲೂಕಿನ ಖೈರೆ ಬಳಿ ಕಾರವಾರ–ಶಿರಸಿ ಹೆದ್ದಾರಿಯ ಅಂಚಿನಲ್ಲಿ ಕುಸಿತ ಸಂಭವಿಸಿರುವುದು.
ಕಳೆದ ವರ್ಷ ಗುಡ್ಡ ಕುಸಿದಿದ್ದ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ರಸ್ತೆ ಪಕ್ಕ ಕಾಂಕ್ರೀಟ್ ತಡೆಗೋಡೆ ಅಳವಡಿಸಿದ್ದರ ಹೊರತಾಗಿ ಯಾವುದೇ ಕ್ರಮವಾಗಿಲ್ಲ.
ಭೂಕುಸಿತವಾಗಬಹುದಾದ ಸ್ಥಳದಲ್ಲಿ ಸ್ಪಾಟರ್ಸ್‌ಗಳನ್ನು ನಿಯೋಜಿಸಲಾಗಿದ್ದು ಅವಘಡದ ಮಾಹಿತಿ ತಕ್ಷಣ ಪಡೆದು ಜೀವಹಾನಿ ಆಗದಂತೆ ಎಚ್ಚರವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಕಳೆದ 3 ವರ್ಷದಿಂದ ಬೀಗಾರ- ಬಾಗಿನಕಟ್ಟಾ ರಸ್ತೆಯಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಇಲ್ಲಿ ತಡೆಗೋಡೆ ನಿರ್ಮಿಸಿ ಭೂ ಕುಸಿತದ ಅಪಾಯ ತಪ್ಪಿಸಬೇಕು
ಗಣೇಶ ಕಿರಗಾರಿ ಬೀಗಾರ ಗ್ರಾಮಸ್ಥ
ಜೊಯಿಡಾದ ದೋಣಪಾದಲ್ಲಿ ಸೇತುವೆ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದೆ ಸೇತುವೆಗೆ ಹಾನಿಯಾದರೆ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ
ಚಂದ್ರಕಾಂತ ದೇಸಾಯಿ ಕುಂಬಾರವಾಡಾ ಗ್ರಾಮಸ್ಥ
ಮೂಡಂಗಿಯ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ಬಿದ್ದ ಬಂಡೆ ಮಣ್ಣುಗಳನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಮಕ್ಕಳನ್ನು ಮತ್ತೆ ಅಲ್ಲಿಗೇ ಕಳಿಸಲು ಆತಂಕವಾಗುತ್ತಿದೆ
ಕಮಲಾಕ್ಷಿ ಮೂಡಂಗಿ ಮೂಡಂಗಿ ಗ್ರಾಮಸ್ಥೆ

ಮುಟ್ಟಳ್ಳಿಯಲ್ಲಿ ಮುಂದುವರಿದ ಆತಂಕ

ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ಮೂರು ವರ್ಷದ ಹಿಂದೆ ಗುಡ್ಡ ಕುಸಿದು 4 ಜನ ಮೃತಪಟ್ಟಿದ್ದರು. ಈ ಸ್ಥಳದಲ್ಲಿ ಈವರೆಗೆ ಗುಡ್ಡ ಕುಸಿತ ತಡೆಗೆ ಸುರಕ್ಷತಾ ಕ್ರಮವಾಗಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡದ ತಪ್ಪಲಿನಲ್ಲಿರುವ ನಿವಾಸಿಗಳಿಗೆ ಮನೆ ಖಾಲಿ ಮಾಡಲು ಕಂದಾಯ ಇಲಾಖೆ ನೋಟಿಸ್ ಜಾರಿ ಮಾಡುತ್ತದೆ. ಅದರ ಹೊರತಾಗಿ ಯಾವುದೇ ಪರಿಹಾರ ಕಾರ್ಯವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಲೊಕೇಶ ನಾಯ್ಕ. ಮುಟ್ಟಳ್ಳಿಯ ಮುನ್ನನಮನೆಯಲ್ಲಿ ಈ ಮಳೆಗೆ ಭೂಕುಸಿತವಾಗಿದೆ.

ಶಿರೂರು:ಎಚ್ಚರಗೊಳ್ಳದ ಆಡಳಿತ

ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿತದಂತಹ ಘೋರ ದುರಂತ ಸಂಭವಿಸಿದರೂ ಜಿಲ್ಲಾಡಳಿತ ಎಚ್ಚರಗೊಂಡಿಲ್ಲ. ಶಿರೂರು ಗುಡ್ಡ ಕುಸಿತದಿಂದ ಮಗ್ಗಲಿನಲ್ಲಿರುವ ಗಂಗಾವಳಿ ನದಿಯಲ್ಲಿ ತುಂಬಿದ ಮಣ್ಣು ವರ್ಷವಾದರೂ ತೆರವುಗೊಳಿಸಿಲ್ಲ. ಸುತ್ತಮುತ್ತಲಿನ ಗ್ರಾಮಗಳಾದ ಬೆಳಸೆ ವಾಸರ ಕುದ್ರಿಗೆ ಸಗಡಗೇರಿ ಮೊಗಟಾ ಉಳುವರೆ ಗ್ರಾಮಸ್ಥರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಪುನಃ ಗುಡ್ಡ ಕುಸಿಯುವ ಆತಂಕವೂ ಸ್ಥಳೀಯರಲ್ಲಿದೆ. ನಿತ್ಯ ನೂರಾರು ವಾಹನಗಳು ಗುಡ್ಡ ಕುಸಿತದ ಸ್ಥಳದ ರಾಷ್ಟೀಯ ಹೆದ್ದಾರಿ ಮೂಲಕವೇ ಸಂಚರಿಸುತ್ತವೆ ಆದರೂ ಕೂಡಾ ಇಲ್ಲಿಯವರೆಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.