ADVERTISEMENT

ಉತ್ತರ ಕನ್ನಡ | ವಾಹನ ಕಲಿಕಾ ಪರವಾನಗಿ: ಅರ್ಜಿ ಸಲ್ಲಿಕೆಯೇ ಸವಾಲು

ಸ್ಮಾರ್ಟ್ ಲಾಕ್ ತಂತ್ರಾಂಶದಲ್ಲಿ ತಿಂಗಳಿನಿಂದ ದೋಷ

ರಾಜೇಂದ್ರ ಹೆಗಡೆ
Published 22 ಅಕ್ಟೋಬರ್ 2025, 6:55 IST
Last Updated 22 ಅಕ್ಟೋಬರ್ 2025, 6:55 IST
ಶಿರಸಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ 
ಶಿರಸಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ    

ಶಿರಸಿ: ಸಾರಿಗೆ ಇಲಾಖೆ ಹೊಸದಾಗಿ ವಾಹನ ಚಾಲನೆ ಕಲಿಯುವವರಿಗೆ ನೀಡುವ ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಸುವುದು ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಅಭಿವೃದ್ಧಿ ಪಡಿಸಿರುವ ಸಾರಿಗೆ ಇಲಾಖೆಯ ಸ್ಮಾರ್ಟ್ ಲಾಕ್ ತಂತ್ರಾಂಶ ಹಲವು ದಿನಗಳಿಂದ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅರ್ಜಿ ಸಲ್ಲಿಸಲು ಸಾರ್ವಜನಿಕರು ಪರದಾಡುವಂತಾಗಿದೆ. 

ಯಾವುದೇ ವಾಹನದ ಚಾಲನೆ ಕಲಿಯುವವರು ಪ್ರಾದೇಶಿಕ ಸಾರಿಗೆ ಇಲಾಖೆ (ಆರ್.ಟಿ.ಒ)ದಿಂದ ಚಾಲನಾ ಕಲಿಕೆ ಪರವಾನಗಿ ಪಡೆಯಬೇಕು. ಅಂತಿಮವಾಗಿ ಚಾಲನಾ ಪರವಾನಗಿ ಪಡೆಯಲು ಕಲಿಕಾ ಪರವಾನಗಿ ಪತ್ರ (ಎಲ‍್‍ಎಲ್‍ಆರ್) ಸಲ್ಲಿಸಬೇಕಾದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಆರ್‌ಟಿಒ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ 4 ವರ್ಷಗಳ ಹಿಂದೆ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಎರಡು ತಿಂಗಳ ಹಿಂದೆ ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಸಲು ಇರುವ ಆನ್‌‍ಲೈನ್ ತಂತ್ರಾಂಶದಲ್ಲಿ ಬದಲಾವಣೆ ಮಾಡಿದ್ದು, ಆದಾದ ಬಳಿಕ ಅರ್ಜಿ ಸಲ್ಲಿಸಲು ತೊಡಕಾಗುತ್ತಿದೆ’ ಎಂಬುದು ಅರ್ಜಿದಾರರ ದೂರಾಗಿದೆ. 

‘ಎಲ್‌ಎಲ್‌ಆರ್‌ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಅಪ್‌‍ಲೋಡ್ ಮಾಡಲು ಮುಂದಾದರೆ ಅದು ಸರಿಯಾಗಿ ಸ್ವೀಕೃತ ಆಗುತ್ತಿಲ್ಲ. ಹಲವು ಬಾರಿ ಪ್ರಯತ್ನ ಮಾಡಿದರೂ ಆಪ್‍ಲೋಡ್ ಆಗುತ್ತಿಲ್ಲ. ಕೆಲವರು ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಸಲು ತಿಂಗಳಿಂದ ಪರದಾಡುತ್ತಿದ್ದಾರೆ. ಅಪರೂಪಕ್ಕೆ ಒಂದೋ ಎರಡೋ ಅರ್ಜಿಗಳು ಅಪ್‌‍ಲೋಡ್ ಆಗುತ್ತಿವೆ. ಪ್ರಾದೇಶಿಕ ಆರ್‌ಟಿಒ ಕಚೇರಿ ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನಿಸಿದರೆ, ತಂತ್ರಾಂಶ ಸಮಸ್ಯೆಗೆ ನಾವೇನು ಮಾಡಲಾಗದು ಎಂದು ಹೇಳುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಏನು ಮಾಡಬೇಕು ಎಂಬುದು ತಿಳಿಯದಾಗಿದೆ’ ಎನ್ನುತ್ತಾರೆ ಅರ್ಜಿದಾರ ಸುರೇಶ ಗೌಡ. 

ADVERTISEMENT

‘ಹೊಸದಾಗಿ ಅಳವಡಿಕೆಯಾಗಿರುವ ಸ್ಮಾರ್ಟ್ ಲಾಕ್ ತಂತ್ರಾಂಶದಲ್ಲಿ ಒಂದು ಐಪಿ ಅಡ್ರೆಸ್‌ನಲ್ಲಿ ಗರಿಷ್ಠ2 ಎಲ್‍ಎಲ್‌ಆರ್ ಅರ್ಜಿಗಳನ್ನು ಮಾತ್ರ ಸಲ್ಲಿಕೆ ಮಾಡಲು ಸಾಧ್ಯವಾಗಲಿದೆ. ಇದರ ಜತೆ ಕೆಲ ನ್ಯೂನತೆಗಳು ಇರುವ ಕಾರಣ ಗೊಂದಲ ಎದುರಾಗಿದೆ’ ಎನ್ನುತ್ತಿವೆ ಸಾರಿಗೆ ಇಲಾಖೆ ಮೂಲಗಳು.

‘ಈ ಹಿಂದೆ ಆರ್‌ಟಿಒ ಕಚೇರಿಯಲ್ಲಿ ದಿನವೊಂದಕ್ಕೆ 20–30ರವರೆಗೆ ಚಾಲನಾ ಕಲಿಕಾ ಪರವಾನಗಿಗೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆದರೆ, ತಂತ್ರಾಂಶದಲ್ಲಿನ ಸಮಸ್ಯೆಯ ಕಾರಣಕ್ಕೆ ಒಂದೂವರೆ ತಿಂಗಳಿಂದ ದಿನಕ್ಕೆ 4 ರಿಂದ 5 ಅರ್ಜಿಗಳು ಸಲ್ಲಿಕೆಯಾದರೆ ಹೆಚ್ಚು ಎಂಬಂತಾಗಿದೆ. ಅರ್ಜಿ ಸಲ್ಲಿಕೆಗೆ ತಂತ್ರಾಂಶ ಅಡ್ಡಿಯಾಗಿರುವ ಪರಿಣಾಮ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂಬುದು ಕಚೇರಿ ಸಿಬ್ಬಂದಿಯ ಮಾತು.

ನಿತ್ಯ ಹತ್ತಾರು ಅರ್ಜಿದಾರರಿಗೆ ತೊಂದರೆ ಒಂದು ತಿಂಗಳಿನಿಂದ ಸಮಸ್ಯೆ ತೀವ್ರ  ತಂತ್ರಾಂಶ ದೋಷದಿಂದ ಕಂಗೆಟ್ಟ ಸಾರ್ವಜನಿಕರು 

ಸ್ಮಾರ್ಟ್ ಲಾಕ್ ತಂತ್ರಾಂಶದಲ್ಲಿ ಸಮಸ್ಯೆ ಎಲ್ಲೆಡೆ ಇತ್ತು. ಒಂದೊಮ್ಮೆ ಎಲ್‍ಎಲ್‍ಆರ್ ಪಡೆಯಲು ವಿಳಂಬವಾದರೆ ಅಂಥ ಅರ್ಜಿದಾರರಿಗೆ ಶೀಘ್ರವೇ ಎಲ್‍ಎಲ್‍ಆರ್ ನೀಡಲು ಕ್ರಮ ವಹಿಸಲಾಗುವುದು
ಮಲ್ಲಿಕಾರ್ಜುನಪ್ಪ ಪ್ರಾದೇಶಿಕ ಸಾರಿಗೆ ಅಧಿಕಾರಿ

ಇಲ್ಲದ ದಾಖಲೆ: ದಂಡದ ಭಯ

‘ಪೊಲೀಸ್ ಇಲಾಖೆ ರಸ್ತೆಯಲ್ಲಿ ವಾಹನ ಚಾಲಕರನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಈ ಸಮಯದಲ್ಲಿ ಚಾಲನಾ ಪರವಾನಗಿ ಇಲ್ಲದೇ ಇದ್ದರೆ ಸಾವಿರಾರು ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಆರ್‌ಟಿಒನಲ್ಲಿ ದಾಖಲೆ ಕೊಡದೇ ನಮಗೆ ದಂಡ ಹಾಕುತ್ತಿದ್ದು ಇದು ಯಾವ ನ್ಯಾಯ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.