ADVERTISEMENT

ಹೆಗ್ಗಾರ: ಹೆಚ್ಚಿದ ಚಿರತೆ ದಾಳಿ ಆತಂಕ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 14:19 IST
Last Updated 17 ಡಿಸೆಂಬರ್ 2023, 14:19 IST
ಅಂಕೋಲಾ ತಾಲ್ಲೂಕಿನ ಹೆಗ್ಗಾರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಸ್ಥಳವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದರು
ಅಂಕೋಲಾ ತಾಲ್ಲೂಕಿನ ಹೆಗ್ಗಾರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಸ್ಥಳವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದರು    

ಕಾರವಾರ: ಅಂಕೋಲಾ ತಾಲ್ಲೂಕಿನ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ಚಿರತೆ ದಾಳಿ ಆತಂಕ ಹೆಚ್ಚಿದೆ.

ಶನಿವಾರ ತಡರಾತ್ರಿ ಚಿರತೆಯೊಂದು ಗ್ರಾಮದ ನಾಲ್ಕನೇ ಕ್ರಾಸ್‍ನಲ್ಲಿರುವ ಶ್ರೀಕೃಷ್ಣ ಭಟ್ಟ ಗುಡ್ಡೆ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿ ಆಕಳ ಕರುವನ್ನು ಬೇಟೆಯಾಡಲು ಯತ್ನಿಸಿದೆ. ಕುಟುಂಬ ಸದಸ್ಯರು ಎಚ್ಚರಗೊಂಡು ಕೂಗಿದ್ದರಿಂದ ಕರುವನ್ನು ಬಿಟ್ಟು ಚಿರತೆ ಓಡಿದೆ.

‘ಚಿರತೆ ದಾಳಿಗೆ ಒಳಗಾಗಿರುವ ಕರುವು ಸಾವು ಬದುಕಿನ ನಡುವೆ ಒದ್ದಾಡುತ್ತಿದೆ. ದಾಳಿಯ ತೀವೃತೆಗೆ ರಕ್ತಸ್ರಾವವಾಗಿದ್ದು ಬದುಕುವುದು ಅನುಮಾನ’ ಎಂದು ಶ್ರೀಕೃಷ್ಣ ಭಟ್ಟ ಹೇಳಿದರು.

ADVERTISEMENT

‘ಹೆಗ್ಗಾರ ಗ್ರಾಮವೂ ಸೇರಿದಂತೆ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧೆಡೆ ಚಿರತೆ ದಾಳಿ ಈಚೆಗೆ ಹೆಚ್ಚಿದೆ. ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳನ್ನು ಚಿರತೆಯು ಅವ್ಯಾಹತವಾಗಿ ಬೇಟೆಯಾಡುತ್ತಿದೆ. ಈಗ ಆಕಳ ಕರುವಿನ ಮೇಲೆ ದಾಳಿ ನಡೆಸಿದ್ದು ಆತಂಕ ತಂದಿದೆ’ ಎಂದು ಸ್ಥಳೀಯರಾದ ಜಯಪ್ರಕಾಶ ಗಾಂವ್ಕರ ಹೇಳಿದರು.

‘ಗ್ರಾಮಸ್ಥರ ದೂರು ಆಧರಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಚಿರತೆ ದಾಳಿ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗುವುದು’ ಎಂದು ರಾಮನಗುಳಿ ವಲಯ ಅರಣ್ಯದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.