
ಸಿದ್ದಾಪುರ: ‘ಮುಳಖೇಡ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕಿ ವೇತನ ವಿಳಂಬ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಮೇಲ್ವಿಚಾರಕರ ತಾಲ್ಲೂಕು ಸಂಘದಿಂದ ಸ್ಥಳೀಯ ತಹಶೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಲಾಯಿತು.
‘ಇದು ಒಂದು ಗ್ರಂಥಾಲಯದ ಸಮಸ್ಯೆಯಲ್ಲ, ಹಲವು ಗ್ರಂಥಾಲಯ ಮೇಲ್ವಿಚಾರಕರ ಸಮಸ್ಯೆಯಾಗಿದೆ. ಸರ್ಕಾರದಿಂದ ಕನಿಷ್ಠ ವೇತನ ನಿಗದಿ ಆಗಿದ್ದರೂ ₹12 ಸಾವಿರ ಮಾತ್ರ ಬಿಡುಗಡೆಯಾಗುತ್ತಿದೆ. ಉಳಿದ ಮೊತ್ತವು ಪಂಚಾಯಿತಿ ಉಪ ಕರದಿಂದ ಜಿಲ್ಲಾ ಪಂಚಾಯಿತಿ ಮೂಲಕ ಭರಿಸುವಂತಾಗಿದೆ. ಇದರಿಂದ ಕಾಲಕಾಲಕ್ಕೆ ಪೂರ್ಣ ಪ್ರಮಾಣದ ಕನಿಷ್ಠ ವೇತನ ಕೈ ಸೇರದಂತಾಗಿದೆ’ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
‘ಮಹಿಳಾ ಸಿಬ್ಬಂದಿ ಹಿತದೃಷ್ಟಿಯಿಂದ ಸಂಜೆಯ ಕೆಲಸದ ಸಮಯವನ್ನು 6 ಗಂಟೆಯವರೆಗೆ ಮಾತ್ರ ನಿಗದಿಪಡಿಸಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.
ಸಂಘಟನೆಯ ಅಧ್ಯಕ್ಷ ವಿನಾಯಕ ಕೋಡ್ಸರ, ಕಾರ್ಯದರ್ಶಿ ಗಜಾನನ ನಾಯ್ಕ, ಮುಖಂಡ ವಿನಾಯಕ ಮುಕ್ರಿ, ಪದಾದಿಕಾರಿಗಳು, ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.