ADVERTISEMENT

ಹೊನ್ನಾವರ: ಮುಂದುವರಿದ ಪ್ರತಿಭಟನೆ; ಲಾಠಿಯೇಟಿನ ಆರೋಪ

ಆಪಾದನೆ ನಿರಾಕರಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 14:04 IST
Last Updated 26 ಜನವರಿ 2022, 14:04 IST
ಹೊನ್ನಾವರದ ಟೊಂಕಾದಲ್ಲಿ ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಗಾಯವಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ಹೊನ್ನಾವರದ ಟೊಂಕಾದಲ್ಲಿ ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಗಾಯವಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ   

ಹೊನ್ನಾವರ: ಕಾಸರಕೋಡದ ಟೊಂಕದಲ್ಲಿ ವಾಣಿಜ್ಯ ಬಂದರಿನ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳೀಯರ ಪ್ರತಿಭಟನೆಯ ನಡುವೆಯೇ ಬುಧವಾರವೂ ಮುಂದುವರಿಯಿತು.

ಮಹಿಳೆಯರೂ ಸೇರಿದಂತೆ ಮೀನುಗಾರರು ಹಾಗೂ ಸ್ಥಳೀಯರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳದಲ್ಲಿ ಜಮಾವಣೆಗೊಂಡಿದ್ದ ಪೋಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಕಾಮಗಾರಿಗೆ ಅನುವು ಮಾಡಿಕೊಟ್ಟರು. ಈ ನಡುವೆ ಟೊಂಕದ ನಿವಾಸಿ ಚಿದಂಬರ ತಾಂಡೇಲ ಎನ್ನುವವರು, ತನ್ನ ಬೆನ್ನಿಗೆ ಗಾಯವಾಗುವಂತೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

‘ರಸ್ತೆಗಾಗಿ ನನ್ನ ಮನೆಯ ಮುಂದಿನ ತಡೆಗೋಡೆಯನ್ನು ತೆರವುಗೊಳಿಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ’ ಎಂದು ಅವರು ಹೇಳಿಕೊಂಡಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

‘ನಕಲಿ ವಿಡಿಯೊ’:

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಪಿ.ಐ ಶ್ರೀಧರ ಎಸ್.ಆರ್, ‘ಹೊನ್ನಾವರ ಬಂದರು ವಿಚಾರದಲ್ಲಿ ಪೊಲೀಸರು ಯಾರ ಮೇಲೂ ಲಾಠಿಯಿಂದ ಹಲ್ಲೆ ಮಾಡಿಲ್ಲ. ವ್ಯಕ್ತಿಯೊಬ್ಬರಿಗೆ ಬೆನ್ನಿನ ಮೇಲೆ ಗಾಯವಿರುವ ವಿಡಿಯೊ ನಕಲಿ ಎಂಬುದು ಉತ್ತರ ಕನ್ನಡ ಜಿಲ್ಲಾ ಪೊಲೀಸರು ನಡೆಸಿದ ವಿಡಿಯೊ ಫ್ಯಾಕ್ಟ್ ಚೆಕ್‌ನಿಂದ ಸಾಬೀತಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.