ADVERTISEMENT

ಮದ್ಯ ಅಕ್ರಮ ಸಾಗಣೆ ತಡೆಗೆ ಸ್ಥಳೀಯರ ಅಡ್ಡಿ

ಮಾಜಾಳಿಯ ಗಾಬಿತವಾಡ: ಅಕ್ರಮ ಚಟುವಟಿಕೆಗೆ ಪ್ರಭಾವಿ ರಾಜಕಾರಣಿಯ ಬೆಂಬಲದ ಆರೋಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 12:34 IST
Last Updated 20 ಫೆಬ್ರುವರಿ 2019, 12:34 IST
ಕಾರವಾರ ತಾಲ್ಲೂಕಿನ ಮಾಜಾಳಿ ಗ್ರಾಮದ ಗಾಬಿತವಾಡದಲ್ಲಿ ಗೋವಾ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸಾಗಿಸಲು ಸ್ಕೂಟರ್‌ನಲ್ಲಿ ಇಟ್ಟಿರುವುದು
ಕಾರವಾರ ತಾಲ್ಲೂಕಿನ ಮಾಜಾಳಿ ಗ್ರಾಮದ ಗಾಬಿತವಾಡದಲ್ಲಿ ಗೋವಾ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸಾಗಿಸಲು ಸ್ಕೂಟರ್‌ನಲ್ಲಿ ಇಟ್ಟಿರುವುದು   

ಕಾರವಾರ: ತಾಲ್ಲೂಕಿನಗಾಬಿತವಾಡದಲ್ಲಿಮದ್ಯದ ಅಕ್ರಮ ಸಾಗಣೆ ತಡೆಯಲು ಮುಂದಾದ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಸ್ಥಳೀಯರುದಾಳಿ ಮಾಡಲು ಯತ್ನಿಸಿದ್ದಾರೆ. ಸಿಬ್ಬಂದಿಯ ಮೊಬೈಲ್ ಕಸಿದು ನೆಲಕ್ಕೆ ಬಡಿದು, ಅಕ್ರಮ ಮದ್ಯದ ಮೂಟೆಗಳನ್ನು ಕಸಿದುಕೊಂಡು ಹೋಗಿದ್ದಾರೆ.

ಆಗಿದ್ದೇನು?: ಪ್ರಕರಣದ ಮಾಹಿತಿ ನೀಡಿದ ಇಲಾಖೆಯ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ್, ‘ಫೆ.18ರಂದು ಬೆಳಿಗ್ಗೆ 7.30ರ ಸುಮಾರಿಗೆ ಮಾಜಾಳಿ ಗ್ರಾಮದ ಗಾಬಿತವಾಡದ ಸಮುದ್ರದ ದಡದಲ್ಲಿ ಈ ಪ್ರಕರಣ ನಡೆದಿದೆ. ದೋಣಿಯಿಂದ ಗೋವಾ ಮದ್ಯದ ಮೂಟೆಗಳನ್ನು ಸ್ಕೂಟರ್‌ನಲ್ಲಿ ಸಾಗಿಸುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು.ಕೂಡಲೇ ಸ್ಥಳಕ್ಕೆ ತೆರಳಿದಾಗ ದೋಣಿಯಿಂದ ಎರಡು ಮೂಟೆಗಳನ್ನು ಸ್ಕೂಟರ್‌ನಲ್ಲಿ ಇಟ್ಟು, ಉಳಿದ ನಾಲ್ಕು ಮೂಟೆಗಳನ್ನು ಕೆಳಗಿಳಿಸಲು ಮುಂದಾಗಿದ್ದುಕಂಡುಬಂತು’ ಎಂದು ಹೇಳಿದರು.

‘ನಮ್ಮ ಸಿಬ್ಬಂದಿಯನ್ನು ಕಂಡ ಸ್ಕೂಟರ್ ಸವಾರ ಪರಾರಿಯಾದ. ದೋಣಿಯಲ್ಲಿದ್ದವ್ಯಕ್ತಿಯನ್ನುವಶಕ್ಕೆ ಪಡೆದು, ಅಕ್ರಮ ಮದ್ಯದ ಮೂಟೆಗಳನ್ನು ಇಲಾಖೆಯ ವಾಹನಕ್ಕೆ ತುಂಬಲಾಗಿತ್ತು. ಅದೇರೀತಿ, ಸ್ಕೂಟರ್‌ ಅನ್ನು ಹೇರಲು ಪ್ರಯತ್ನಿಸುತ್ತಿದ್ದಾಗ 300–400 ಜನ ಸ್ಥಳೀಯರು ಜಮಾಯಿಸಿದರು. ಗಲಾಟೆ ಮಾಡಿ, ಸಿಬ್ಬಂದಿಯನ್ನು ಹೆದರಿಸಿ ವಾಹನದಲ್ಲಿದ್ದ ಮೂಟೆಗಳನ್ನು ಕೆಳಗಿಳಿಸಿ ಆರೋಪಿಯನ್ನು ಬಿಡಿಸಿಕೊಂಡು ಹೋದರು. ಇದನ್ನು ಚಿತ್ರೀಕರಿಸುತ್ತಿದ್ದ ನಮ್ಮ ಸಿಬ್ಬಂದಿ ಶಿವಾನಂದ ಕೋರಡ್ಡಿ ಅವರ ಮೊಬೈಲ್‌ ಅನ್ನೂ ಕಸಿದುಕೊಂಡು ನೆಲಕ್ಕೆ ಬಡಿದರು. ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರು’ ಎಂದು ತಿಳಿಸಿದರು.

ADVERTISEMENT

ಈ ಸಂಬಂಧ ಗೋಟ್ನೇಬಾಗದ ಶಿವಾನಂದಹಾಗೂ ಮತ್ತಿಬ್ಬರ ವಿರುದ್ಧ ಚಿತ್ತಾಕುಲಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಗದು ಬಹುಮಾನ:‘ಮದ್ಯ ಅಕ್ರಮ ಸಾಗಣೆಯ ಬಗ್ಗೆ ಗೊತ್ತಾದರೆ ಅಬಕಾರಿ ಇಲಾಖೆಗೆ ಸಾರ್ವಜನಿಕರು ತಿಳಿಸಬೇಕು. ಮಾಹಿತಿ ನೀಡಿದವರ ಹೆಸರು, ಗುರುತನ್ನು ಗೌಪ್ಯವಾಗಿಡಲಾಗುವುದು. ಅಲ್ಲದೇ ನಗದು ಬಹುಮಾನವನ್ನೂ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು ₹ 5 ಲಕ್ಷವನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ’ ಎಂದರು.

ಪ್ರಭಾವಿಮುಖಂಡರು ಹಾಜರು!:ಮದ್ಯದ ಅಕ್ರಮ ಸಾಗಣೆ ಮಾಡುವವರಿಗೆ ಸ್ಥಳೀಯ ಪ್ರಭಾವಿ ಮುಖಂಡರೊಬ್ಬರು ಬೆಂಬಲವಾಗಿ ನಿಂತಿದ್ದಾರೆ ಎಂದು ಅಧಿಕಾರಿಗಳುದೂರಿದ್ದಾರೆ.

‘ಗಾಬಿತವಾಡದಲ್ಲಿ ಆರೋಪಿ ಹಾಗೂ ಮದ್ಯವನ್ನು ವಶಕ್ಕೆ ಪಡೆದುಕೊಂಡಾಗ ಪ್ರಭಾವಿಯೊಬ್ಬರು ಭೇಟಿ ನೀಡಿದ್ದರು. ಅವರನ್ನು ಕಂಡ ಕೂಡಲೇ ಸ್ಥಳೀಯರಿಗೆ ಮತ್ತಷ್ಟು ಬಲ ಬಂದಂತಾಗಿಜೋರಾಗಿ ಗಲಾಟೆ ಮಾಡಿದರು. ಇದೇ ಸಂದರ್ಭದಲ್ಲಿ ನಮ್ಮ ವಾಹನದಲ್ಲಿದ್ದ ಆಯುಧಗಳು, ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು, ಆರೋಪಿಯನ್ನು ಬಿಡಿಸಿಕೊಂಡು ಹೋದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಅಕ್ರಮವನ್ನು ತಡೆಯಲು ಸಹಕರಿಸಬೇಕಾದವರೇ ಬೆಂಬಲವಾಗಿ ನಿಂತಿರುವುದು ಇಲಾಖೆಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಒಂದುವೇಳೆ, ಮುಂದೆಯೂ ಮುಂದುವರಿಸಿದರೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.