ADVERTISEMENT

ಟಿಬೆಟನ್ ಕ್ಯಾಂಪ್‌ನಲ್ಲಿ ಕಟ್ಟುನಿಟ್ಟಿನ ಕ್ರಮ

ಕ್ಯಾಂಪ್‌ನಿಂದ ಹೊರಹೋದರೆ ₹ 1000 ದಂಡ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:17 IST
Last Updated 22 ಮೇ 2020, 15:17 IST
ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ರಸ್ತೆಯನ್ನು ಮುಳ್ಳು, ಗಿಡಗಂಟಿಗಳಿಂದ ಟಿಬೆಟನ್ನರು ಮುಚ್ಚಿರುವುದು
ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ರಸ್ತೆಯನ್ನು ಮುಳ್ಳು, ಗಿಡಗಂಟಿಗಳಿಂದ ಟಿಬೆಟನ್ನರು ಮುಚ್ಚಿರುವುದು   

ಮುಂಡಗೋಡ: ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದರೂ, ತಾಲ್ಲೂಕಿನ ಟಿಬೆಟನ್ ಕ್ಯಾಂಪ್‍ನಲ್ಲಿ ಕಠಿಣ ಕ್ರಮ ಮುಂದುವರಿದಿದೆ. ಸ್ಥಳೀಯ ಕಾರ್ಮಿಕರು ಸೇರಿದಂತೆ ಹೊರಗಿನವರನ್ನು ಕ್ಯಾಂಪ್ ಒಳಗಡೆ ಹೋಗಲು ಅವಕಾಶ ನಿರಾಕರಿಸಲಾಗುತ್ತಿದೆ.

ಮೇ 18ರಂದು ತಾಲ್ಲೂಕಿನಲ್ಲಿ ಎರಡು ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಅಂದಿನಿಂದ ಕ್ಯಾಂಪ್‍ನಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೌದ್ಧ ಮಂದಿರಗಳ ರಸ್ತೆ ಸೇರಿದಂತೆ ಏಳೆಂಟು ಕಡೆ, ಮುಳ್ಳು, ಗಿಡಗಂಟಿಗಳಿಂದ ಮಾರ್ಗ ಬಂದ್ ಮಾಡಲಾಗಿದೆ. ಅಧಿಕೃತ ಪಾಸ್ ಹೊಂದಿರುವ ವಾಹನಗಳು ಕ್ಯಾಂಪ್ ಪ್ರವೇಶಿಸುವ ಮುನ್ನ, ಪ್ರವೇಶದ್ವಾರದಲ್ಲಿಯೇ ವಾಹನಗಳನ್ನು ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಟಿಬೆಟನ್ ಕ್ಯಾಂಪ್ ಸುತ್ತಲಿನ ಸ್ಥಳೀಯರು ಸಹ, ಕ್ಯಾಂಪ್ ಒಳಗಡೆ ಬಂದು ಹೋಗದಂತೆ ಒಳದಾರಿಗಳನ್ನೂ ಮುಚ್ಚಲಾಗಿದೆ.

'ತಾಲ್ಲೂಕಿನಲ್ಲಿ ಕೋವಿಡ್19 ಪ್ರಕರಣಗಳು ದೃಢಗೊಂಡಿದ್ದರಿಂದ, ಬೌದ್ಧ ಮಂದಿರದ ಮುಖಂಡರು, ಕ್ಯಾಂಪ್ ಪ್ರಮುಖರು ಸೇರಿ ಮೊದಲಿನಂತೆ ಲಾಕ್‍ಡೌನ್ ಮುಂದುವರೆಸಲು ನಿರ್ಧರಿಸಿದ್ದಾರೆ. ಟಿಬೆಟನ್ನರು ಕ್ಯಾಂಪ್ ಒಳಗಡೆ ಅನಗತ್ಯವಾಗಿ ಸಂಚರಿಸುವುದನ್ನು ತಡೆಗಟ್ಟಲು, ಸೊಸೈಟಿ ಹಾಗೂ ಲೋಸಲಿಂಗ್ ಮಳಿಗೆಗಳಲ್ಲಿ ತರಕಾರಿ, ಹಾಲು ಇನ್ನಿತರ ಸಾಮಗ್ರಿ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮೇ 31ರವರೆಗೆ ತೆರೆಯುವಂತಿಲ್ಲ' ಎಂದು ಟಿಬೆಟನ್ ಸೆಟ್ಲಮೆಂಟ್ ಕಚೇರಿಯ ಚೇರಮನ್ ಲಾಖ್ಪಾ ಸಿರಿಂಗ್ ಹೇಳಿದರು.

ADVERTISEMENT

'ಬೈಕ್ ಮೇಲೆ ಅಡ್ಡದಾರಿ ಹಿಡಿದು ಟಿಬೆಟನ್‍ರು ಮುಂಡಗೋಡಕ್ಕೆ ಹೋದರೆ ₹ 1000 ದಂಡ ಹಾಕುವ ಬಗ್ಗೆ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ. ಇದಲ್ಲದೇ ಸುತ್ತಲಿನ ಯಾವುದೇ ಗ್ರಾಮಗಳಿಗೆ ಹೋದರೂ ದಂಡ ಹಾಕಲಾಗುತ್ತಿದೆ. ಪ್ರತಿ ಕ್ಯಾಂಪ್‌ನಲ್ಲಿ ತಲಾ ಇಬ್ಬರಿಗೆ ಪಾಸ್ ನೀಡಲಾಗಿದ್ದು, ಅಗತ್ಯ ಕೆಲಸಗಳಿಗೆ ಅವರು ಮಾತ್ರ ಹೊರಗಡೆ ಹೋಗಬಹುದು' ಎಂದು ಲಾಖ್ಪಾ ಸಿರಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.