ADVERTISEMENT

ಲೋಕಸಭಾ ಚುನಾವಣೆ: ಸವಾಲು ಮೀರಿ ಗೆದ್ದ ಕಾಗೇರಿ

ಕಾಂಗ್ರೆಸ್ ಪಾಲಿಗೆ ಮತ ಫಲ ನೀಡದ ‘ಗ್ಯಾರಂಟಿ’

ಗಣಪತಿ ಹೆಗಡೆ
Published 5 ಜೂನ್ 2024, 6:20 IST
Last Updated 5 ಜೂನ್ 2024, 6:20 IST
ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ಪಾಯಸ ತಿನ್ನಿಸಿದರು.
ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ಪಾಯಸ ತಿನ್ನಿಸಿದರು.   

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಸತತವಾಗಿ ಸಂಸತ್‍ನಲ್ಲಿ ಪ್ರತಿನಿಧಿಸುತ್ತಿದ್ದ ಅನಂತಕುಮಾರ ಹೆಗಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಯೊಳಗಿದ್ದರೂ ಪಕ್ಷದೊಂದಿಗೆ ಕಾಯ್ದುಕೊಂಡ ಅಂತರ. ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ನಾಯಕರ ವಲಯದೊಳಗೆ ಎದುರಾದ ಅಪಸ್ವರ... ಹೀಗೆ ಹಲವು ಸವಾಲುಗಳನ್ನು ಮೀರಿಯೂ ವಿಶ್ವೇಶ್ವರ ಹೆಗಡೆ ಕಾಗೇರಿ ದಾಖಲೆಯ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದರು.

ಬಿಜೆಪಿ ಪಾಲಿನ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ಹಿಂದಿನ ಆರು ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಸಾಧನೆಗೆ ಕಾರಣವಾಗಿದ್ದ ಅನಂತಕುಮಾರ ಹೆಗಡೆ ಅವರನ್ನು ಬದಲಿಸಿದ್ದು ಪಕ್ಷದೊಳಗೆ ಪರ, ವಿರುದ್ಧದ ಅಭಿಪ್ರಾಯಕ್ಕೂ ಕಾರಣವಾಗಿತ್ತು. ಅದರ ಬೆನ್ನಲ್ಲೇ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಕೂಡ ಪಕ್ಷದ ಚಟುವಟಿಕೆಯಿಂದ ದೂರ ಸರಿದು, ತನ್ನ ಬೆಂಬಲಿಗರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸಿದ್ದು ಬಿಜೆಪಿಗೆ ತಲೆನೋವಾಗಿತ್ತು.

ಹೀಗಾಗಿ ಚುನಾವಣೆಯಲ್ಲಿ ಕಾಗೇರಿ ಗೆಲುವಿನ ಬಗ್ಗೆ ಪಕ್ಷದೊಳಗೆ ಶಂಕೆ ಮೂಡುವಂತಾಗಿತ್ತು. ಗೆದ್ದರೂ ಅಂತರ ಕಡಿಮೆಯಾಗಬಹುದು, ಯಲ್ಲಾಪುರ ಕ್ಷೇತ್ರದಲ್ಲಿ ಮತ ಇಳಿಕೆಯಾಗಬಹುದು ಎಂಬ ಚರ್ಚೆಗಳು ಜೋರಾಗಿದ್ದವು.

ADVERTISEMENT

ಈ ಅವಕಾಶವನ್ನು ಬಳಕೆ ಮಾಡಲು ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗೆ, ಅದರಲ್ಲಿಯೂ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮರಾಠಾ ಸಮುದಾಯದ ಡಾ.ಅಂಜಲಿ ನಿಂಬಾಳ್ಕರ ಅವರ ಸ್ಪರ್ಧೆಗೆ ಮಣೆ ಹಾಕಿತ್ತು. ಗ್ಯಾರಂಟಿ ಯೋಜನೆಯ ಲಾಭದೊಂದಿಗೆ ಮತ ಗಳಿಕೆಯ ಲೆಕ್ಕಾಚಾರದಲ್ಲಿತ್ತು.

ಆದರೆ, ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಮೂಲಕ ಲೆಕ್ಕಾಚಾರವನ್ನು ಹುಸಿಯಾಗಿಸಿದೆ.

‘ಪಕ್ಷದ ಚಟುವಟಿಕೆಗಳಿಂದ ದೂರ ಇದ್ದರೂ ವರ್ಚಸ್ಸು ಹೊಂದಿದ್ದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿ, ಕಳೆದ ವರ್ಷವಷ್ಟೆ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅವಕಾಶ ನೀಡಿದ್ದು ಸಹಜವಾಗಿ ಕೆಲಸ ಮುಖಂಡರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಇನ್ನೊಂದೆಡೆ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಐವರು ಶಾಸಕರಿರುವುದು, ಪಕ್ಷದಲ್ಲಿದ್ದರೂ ಅಂತರ ಕಾಯ್ದುಕೊಂಡ ಅನಂತಕುಮಾರ ಮತ್ತು ಹೆಬ್ಬಾರ ವರ್ತನೆ ಅಭ್ಯರ್ಥಿ ಗೆಲುವಿಗೆ ತೊಡಕಾಗಬಹುದು ಎಂಬ ಲೆಕ್ಕಾಚಾರವಿತ್ತು’ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

‘ಆರು ಅವಧಿಗೆ ಶಾಸಕರಾಗಿದ್ದರೂ ನಿರೀಕ್ಷಿತ ಕೆಲಸ ಮಾಡಿಲ್ಲ ಎಂಬ ಆರೋಪಗಳಿದ್ದ ಕಾಗೇರಿ ಗೆಲ್ಲುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲಿಯೂ ಇದ್ದವು. ಬೂತ್ ಮಟ್ಟದ ಪ್ರಚಾರ ಚುರುಕುಗೊಳಿಸುವ ಜತೆಗೆ ಕ್ಷೇತ್ರದಾದ್ಯಂತ ಮೂರು ಸುತ್ತು ಪ್ರಚಾರ ನಡೆಸುವ ಮೂಲಕ ಕಾಗೇರಿ ನಿರೀಕ್ಷೆ ಬುಡಮೇಲು ಮಾಡಿದರು’ ಎಂದೂ ಹೇಳಿದರು.

ಭ್ರಮೆ ಸೃಷ್ಟಿಸುವ ಕೆಲಸ ನಡೆದಿತ್ತು

‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾ ಶಕ್ತಿಯ ಮೂಲಕ ಹಿಂದಿನಿಂದಲೂ ಬಲವಾಗಿ ಬೇರೂರಿದೆ. ತಾನು ಕೂಗಿದರಷ್ಟೆ ಬೆಳಕಾಗುತ್ತದೆ ಎಂದು ಭಾವಿಸಿದ್ದ ಕೋಳಿಯ ಮನಸ್ಥಿತಿಯ ಕೆಲವರು ತಮ್ಮಿಂದಲೇ ಪಕ್ಷ ಬೆಳೆದಿದೆ ಎಂಬ ಭ್ರಮೆ ಸೃಷ್ಟಿಸುವ ಪ್ರಯತ್ನ ನಡೆಸಿದ್ದರು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅನಂತಕುಮಾರ ಹೆಗಡೆ ಹೆಸರು ಉಲ್ಲೇಖಿಸದೆ ಚಾಟಿ ಬೀಸಿದರು.

‘ಪಕ್ಷದ ಕಾರ್ಯಕರ್ತರ ಶ್ರಮ ಮುಖಂಡರ ಒಗ್ಗಟ್ಟಿನ ಕೆಲಸದ ಪರಿಣಾಮದಿಂದ ಗೆಲುವು ಸಾಧಿಸಿದ್ದೇನೆ. ಜತೆಗೆ ಪ್ರಧಾನಿ ನರೇಂದ್ರ ಮೊದಿ ಅವರ ವರ್ಚಸ್ಸು ಕೆಲಸ ಮಾಡಿದೆ’ ಎಂದು ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.