
ಕಾರವಾರ: ಅಕ್ರಮ, ಕರ್ತವ್ಯಲೋಪ ಎಸಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಬುಧವಾರ ಜಿಲ್ಲೆಯ 8 ಉಪ ನೋಂದಣಾಧಿಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಕಾರವಾರ, ಮುಂಡಗೋಡ ಸೇರಿದಂತೆ ವಿವಿಧ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಸೂಚನೆ ಆಧರಿಸಿ ಡಿಎಸ್‌ಪಿ ಧನ್ಯಾ ನಾಯಕ ನೇತೃತ್ವದಲ್ಲಿ ಕಾರವಾರ, ಉಡುಪಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವು ಪ್ರತ್ಯೇಕವಾಗಿ ಪರಿಶೀಲನೆ ಕೈಗೊಂಡವು.
ಕಾರವಾರದಲ್ಲಿ ಜಿಲ್ಲಾ ನೋಂದಣಾಧಿಕಾರಿ ಫಣೀಂದ್ರ ಅವರನ್ನು ಉಡುಪಿ ಲೋಕಾಯುಕ್ತ ಡಿಎಸ್‌ಪಿ ಮಂಜುನಾಥ ಅವರು ವಿಚಾರಣೆ ನಡೆಸಿದರು. ಬಳಿಕ ಉಪ ನೋಂದಣಾಧಿಕಾರಿ, ಕಚೇರಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಯಿತು.
ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಹಲವು ದಾಖಲೆಗಳನ್ನು ವಶಕ್ಕೆ ಪಡೆದರು. ಕಚೇರಿಗೆ ಬಂದಿದ್ದ ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಿದ ಅಧಿಕಾರಿಗಳು ಸರ್ಕಾರ ನಿಗದಿಪಡಿಸಿದ ಶುಲ್ಕ ಮೀರಿ ಹಣ ಪಡೆಯಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
‘ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕ್ಕೆ ಲಂಚ ಪಡೆಯುತ್ತಿರುವ ದೂರು ಹೆಚ್ಚಿದ್ದವು. ಜೊತೆಗೆ ಜಮೀನು, ವಿವಾಹ ನೋಂದಣಿಯಲ್ಲಿ ಅಕ್ರಮ ಎಸಗುತ್ತಿರುವ ದೂರುಗಳು ಬಂದಿದ್ದವು. ಲೋಕಾಯುಕ್ತ ಸಂಸ್ಥೆಯು ಈಗಾಗಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಹಿಂದೆ ಅಂಕೋಲಾ ಮತ್ತು ಹೊನ್ನಾವರದಲ್ಲಿ ತಪಾಸಣೆ ನಡೆಸಲಾಗಿತ್ತು. ಮುಂದುವರಿದ ಭಾಗವಾಗಿ 8 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಪರಿಶೀಲಿಸಲಾಯಿತು’ ಎಂದು ಲೋಕಾಯುಕ್ತ ಡಿಎಸ್‌ಪಿ ಧನ್ಯಾ ನಾಯಕ ತಿಳಿಸಿದರು.
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿನ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದು ಅವುಗಳನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ಲೋಕಾಯುಕ್ತ ಕೇಂದ್ರ ಸಂಸ್ಥೆಗೆ ಕಳುಹಿಸಲಾಗುತ್ತದೆ.ಧನ್ಯಾ ನಾಯಕ, ಲೋಕಾಯುಕ್ತ ಡಿಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.