ADVERTISEMENT

ಶುಭ ಶುಕ್ರವಾರ: ಶಿರಸಿ ಜಾತ್ರೆಯಲ್ಲಿ ಭಕ್ತಸಾಗರ

ಬೀಡುಬಿಟ್ಟಿರುವ ಹೊರ ಊರಿನ ಭಕ್ತರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 15:58 IST
Last Updated 18 ಮಾರ್ಚ್ 2022, 15:58 IST
ಶಿರಸಿಯ ಜಾತ್ರೆಪೇಟೆಯಲ್ಲಿ ಅಭಿಮಾನಿಯೊಬ್ಬ ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶಿಸಿದ್ದು ಹೀಗೆ.  ಚಿತ್ರ: ರೋಹನ್ ಡಿ.ಕುಡಾಳಕರ್
ಶಿರಸಿಯ ಜಾತ್ರೆಪೇಟೆಯಲ್ಲಿ ಅಭಿಮಾನಿಯೊಬ್ಬ ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶಿಸಿದ್ದು ಹೀಗೆ.  ಚಿತ್ರ: ರೋಹನ್ ಡಿ.ಕುಡಾಳಕರ್   

ಶಿರಸಿ: ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ಮಾರಿಕಾಂಬೆಯನ್ನು ಶುಭ ಶುಕ್ರವಾರ ದರ್ಶನ ಮಾಡುವ ಹಂಬಲದಿಂದ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನಸುಕಿನ ಜಾವದಿಂದಲೇ ಜಾತ್ರಾ ಗದ್ದುಗೆಗೆ ಭಕ್ತಸಾಗರದಿಂದ ತುಂಬಿ ತುಳುಕಿದೆ.

ದೇವಿಯ ದರ್ಶನಕ್ಕೆ ಶುಕ್ರವಾರ ಸೂಕ್ತ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಗದ್ದುಗೆಯತ್ತ ಆಗಮಿಸಿದ್ದರು. ಮಹಿಳೆಯರು ಉಡಿ ಸೇವೆ ಸಮರ್ಪಿಸಿದರು. ಲಡ್ಡು ಪ್ರಸಾದಕ್ಕೂ ಭಕ್ತರಿಂದ ವ್ಯಾಪಕ ಬೇಡಿಕೆ ಬರುತ್ತಿದೆ. ದೇವಿಗೆ ಸಮರ್ಪಿಸಲಾದ ಸಾಮಗ್ರಿಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಭಕ್ತರು ಪೈಪೋಟಿಗೆ ಇಳಿದಿದ್ದಾರೆ.

ಜಾತ್ರಾ ಗದ್ದುಗೆ ಸಮೀಪ ಒಮ್ಮೆಲೇ ಜನದಟ್ಟಣೆ ಹೆಚ್ಚಿದ ಪರಿಣಾಮ ನಿಯಂತ್ರಣಕ್ಕೆ ಪೊಲೀಸರು, ಸೇವಾ ಕಾರ್ಯಕರ್ತರು ಹರಸಾಹಸಪಟ್ಟರು.

ADVERTISEMENT

ಗದ್ದುಗೆಯ ಎದುರಿನ ಅಂಗಳದಲ್ಲಿ ಕುರಿ, ಕೋಳಿ ಭಂಡಾರ ಸೇವೆಗಳು ಆರಂಭಗೊಂಡಿದ್ದು ಭಕ್ತರು ಕುರಿ, ಕೋಳಿ ಖರೀದಿಸಿ ಅವುಗಳಿಗೆ ಭಂಡಾರ ಹಚ್ಚಿಸಿಕೊಂಡು ತೆರಳುತ್ತಿದ್ದಾರೆ. ಆಸಾದಿಯರಿಂದ ರಾಣಿಕೋಲಿನ ಆಶೀರ್ವಾದ ಪಡೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.

ಬೆಳಿಗ್ಗೆಯಿಂದಲೇ ಜಾತ್ರೆಪೇಟೆಯಲ್ಲಿ ದೇವಿ ದರ್ಶನಕ್ಕೆ ನಿಂತಿದ್ದ ಭಕ್ತರ ಸಾಲು ಉದ್ದಕ್ಕೆ ಬೆಳೆದಿತ್ತು. ವಿಶೇಷ ಆಮಂತ್ರಿತರ ಪಾಸ್‍ಗಳನ್ನು ಪಡೆದಿದ್ದವರ ಸರತಿಯೂ ಕಿ.ಮೀ. ದೂರದವರೆಗೆ ಇತ್ತು. ಬಿಸಿಲಿನ ಝಳವನ್ನೂ ಲೆಕ್ಕಿಸದೆ ಜನರು ದೇವಿಯ ದರ್ಶನ ಪಡೆದರು. ಬಸವಳಿಯುತ್ತಿದ್ದ ಭಕ್ತರಿಗೆ ತಂಪು ಪಾನೀಯಗಳನ್ನು ಆಗಾಗ ಸೇವಾ ಕಾರ್ಯಕರ್ತರು ಒದಗಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.