
ಶಿರಸಿ: ಎರಡು ವರ್ಷಗಳಿಗೊಮ್ಮೆ ಜರುಗುವ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ಸಾಗುತ್ತಿದ್ದು, ಮಂಗಳವಾರ ಸಂಭವಿಸಿದ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಾತ್ರಾ ಅಂಗಳದಲ್ಲಿ ಭಕ್ತರ ಸಂಚಾರ ಮತ್ತು ಧಾರ್ಮಿಕ ಸೇವೆಗಳ ಅಬ್ಬರ ತುಸು ತಗ್ಗಿದಂತೆ ಕಂಡುಬಂದಿತು.
ಕಳೆದ ಶುಕ್ರವಾರದಿಂದಲೇ ಜನಸಾಗರದಿಂದ ತುಂಬಿ ತುಳುಕುತ್ತಿದ್ದ ಶಿರಸಿ ನಗರಕ್ಕೆ ಮಂಗಳವಾರ ಗ್ರಹಣದ ಕಾರಣದಿಂದಾಗಿ ಕ್ಷಣಕಾಲ ಜನಜಂಗುಳಿಯಿಂದ ಮುಕ್ತಿ ಸಿಕ್ಕಂತಾಗಿತ್ತು. ದೇವಿಯ ದರ್ಶನ ಹಾಗೂ ಹರಕೆಗಳನ್ನು ಸಲ್ಲಿಸಲು ಬರುತ್ತಿದ್ದ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ನಗರದ ರಸ್ತೆಗಳು ಎಂದಿನ ಗಿಜಿಗುಟ್ಟುವಿಕೆಯಿಂದ ಮುಕ್ತವಾಗಿದ್ದವು.
ಧಾರ್ಮಿಕ ವಿಧಿವಿಧಾನಗಳ ಪ್ರಕಾರ, ಗ್ರಹಣದ ಸೂತಕದ ಹಿನ್ನೆಲೆಯಲ್ಲಿ ಜಾತ್ರಾ ಗದ್ದುಗೆಯಲ್ಲಿ ಭಕ್ತರಿಗೆ ನೀಡಲಾಗುತ್ತಿದ್ದ ಸೇವೆಗಳಿಗೆ ಮಧ್ಯಾಹ್ನದವರೆಗೆ ಮಾತ್ರ ಕಾಲಾವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಹಣ್ಣು-ಕಾಯಿ ಸಮರ್ಪಣೆ, ಉಡಿ ತುಂಬುವ ಸೇವೆ ಹಾಗೂ ವಿಶೇಷ ಪೂಜೆಗಳಿಗೆ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಆನಂತರ ಗ್ರಹಣ ಕಾಲದ ಅಂತ್ಯದವರೆಗೂ ಎಲ್ಲಾ ರೀತಿಯ ಧಾರ್ಮಿಕ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಪ್ರತಿ ನಿಮಿಷವೂ ಸಾವಿರಾರು ಭಕ್ತರಿಂದ ತುಂಬಿರುತ್ತಿದ್ದ ಗದ್ದುಗೆಯ ಆವರಣವು ಮಧ್ಯಾಹ್ನದ ನಂತರ ದೇವಿಯ ದರ್ಶನಕ್ಕಷ್ಟೇ ಸೀಮಿತವಾಗಿತ್ತು. ಗ್ರಹಣದ ಭೀತಿ ಹಾಗೂ ಆಚರಣೆಗಳ ಕಾರಣದಿಂದಾಗಿ ಜಿಲ್ಲೆಯ ಹೊರಗಿನಿಂದ ಬರುವ ಭಕ್ತರ ಸಂಖ್ಯೆಯೂ ಕ್ಷೀಣಿಸಿತ್ತು.
ಧಾರ್ಮಿಕ ಕಾರ್ಯಕ್ರಮಗಳಿಗೆ ಗ್ರಹಣದ ಬಿಸಿ ತಟ್ಟಿದ್ದರೂ, ಮೋಜಿನ ಜಾತ್ರೆಯ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ದೇವಿಯ ದರ್ಶನ ಪಡೆದ ಭಕ್ತರು ಗದ್ದುಗೆಯಿಂದ ನೇರವಾಗಿ ಮನರಂಜನಾ ಪಾರ್ಕ್ ಹಾಗೂ ಮಾರುಕಟ್ಟೆಯತ್ತ ಮುಖ ಮಾಡಿದ್ದರು. ವಿವಿಧ ರೀತಿಯ ತೊಟ್ಟಿಲುಗಳು, ಸರ್ಕಸ್ ಹಾಗೂ ತಿಂಡಿ-ತಿನಿಸುಗಳ ಅಂಗಡಿಗಳಲ್ಲಿ ಜನರ ಓಡಾಟ ಕಂಡುಬಂದಿತು. ಮಕ್ಕಳು ಮತ್ತು ಯುವಜನತೆ ಗ್ರಹಣದ ಕಾಲವನ್ನೂ ಲೆಕ್ಕಿಸದೆ ಮನರಂಜನಾ ಆಟಗಳಲ್ಲಿ ನಿರತರಾಗಿದ್ದರು. ಅತ್ತ ಭಕ್ತರ ಸಂಖ್ಯೆ ಕಡಿಮೆಯಿದ್ದ ಪರಿಣಾಮವಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವು ಸುಗಮವಾಗಿತ್ತು. ಪ್ರತಿ ಬಾರಿ ಜಾತ್ರೆಯ ಸಂದರ್ಭದಲ್ಲಿ ಕಂಡುಬರುತ್ತಿದ್ದ ಸಂಚಾರ ದಟ್ಟಣೆಯ ಸಮಸ್ಯೆ ಕಂಡುಬರಲಿಲ್ಲ. ರಾತ್ರಿ 7.30ರ ನಂತರ ಎಲ್ಲ ರೀತಿಯ ಸೇವೆಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.