ADVERTISEMENT

ಅಡಿಕೆ ಮದ್ದು ಹೊಡೆಯಲು ದೋಟಿ

ಟಿಎಂಎಸ್‌ನಿಂದ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 13:54 IST
Last Updated 28 ಜೂನ್ 2019, 13:54 IST
ಶಿರಸಿ ತಾಲ್ಲೂಕಿನ ಕಬ್ಬೆಯಲ್ಲಿ ಅಡಿಕೆ ಗೊನೆಗೆ ಮದ್ದು ಸಿಂಪಡಿಸುವ ಪ್ರಾತ್ಯಕ್ಷಿಕೆ ನಡೆಯಿತು
ಶಿರಸಿ ತಾಲ್ಲೂಕಿನ ಕಬ್ಬೆಯಲ್ಲಿ ಅಡಿಕೆ ಗೊನೆಗೆ ಮದ್ದು ಸಿಂಪಡಿಸುವ ಪ್ರಾತ್ಯಕ್ಷಿಕೆ ನಡೆಯಿತು   

ಶಿರಸಿ: ಕೂಲಿ ಸಮಸ್ಯೆಯ ನಡುವೆ ಅಡಿಕೆ ಬೆಳೆಗಾರರಿಗೆ ಕೊನೆ ಕೊಯ್ಲು ಹಾಗೂ ಮದ್ದು ಸಿಂಪಡಣೆಗೆ ಪೂರಕವಾಗಿ ಟೆಲಿಸ್ಕೋಪಿಕ್ ದೋಟಿ ತೋಟಕ್ಕೆ ಇಳಿದಿದೆ. ತಾಲ್ಲೂಕಿನ ಕಬ್ಬೆ ಮೋಹನ ಹೆಗಡೆ ಅವರ ತೋಟದಲ್ಲಿ ಶುಕ್ರವಾರ ಇದರ ಪ್ರಾತ್ಯಕ್ಷಿಕೆ ನಡೆಯಿತು.

ಟಿಎಂಎಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೋಟಿಯಲ್ಲಿ ಮದ್ದು ಹೊಡೆಯುವ ಹಾಗೂ ಬ್ಯಾಟರಿ ಚಾಲಿತ ಸ್ಪ್ರೇಯರ್ ಬಳಸುವ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಈ ಉಪಕರಣ ಉಪಯೋಗಿಸುತ್ತಿರುವ ಉಂಚಳ್ಳಿಯ ಧನಂಜಯ ಹೆಗಡೆ ಮಾಹಿತಿ ನೀಡಿ, ‘ಇದು ಕಾರ್ಬನ್ ಫೈಬರ್‌ನಿಂದ ಮಾಡಿರುವ ದೋಟಿಯಾಗಿದೆ. ಪೈಪ್ ಒಳಗಿನ ಮದ್ದು ಸೇರಿ ೫ ಕೆಜಿ ಭಾರ ಇರುತ್ತದೆ. ಇಡೀ ತೋಟದಲ್ಲಿ ಬೇಕಾದ ಕಡೆ ಸಾಗಿಸಬಹುದು. ನೆಲದಲ್ಲಿಯೇ ನಿಂತು 80 ಅಡಿ ಎತ್ತರದಲ್ಲಿನ ಅಡಿಕೆ ಗೊನೆಗೆ ಮದ್ದು ಸಿಂಪಡಣೆ ಮಾಡಬಹುದು. ಅಲ್ಲದೇ, ಗೊನೆಯನ್ನೂ ಕೊಯ್ಯಬಹುದು’ ಎಂದರು.

‘ಎತ್ತರವನ್ನು ಹೊಂದಾಣಿಕೆ ಮಾಡುವ ವ್ಯವಸ್ಥೆಯಿದ್ದು, ಅಡಿಕೆ ಕೊನೆ ಹತ್ತಿರಕ್ಕೆ ಹೋಗಿ ಮದ್ದು ಸಿಂಪಡಣೆ ಮಾಡಬಹುದು. ಹೀಗಾಗಿ ಮದ್ದು ನಷ್ಟವಾಗುವ ಪ್ರಮಾಣವೂ ಕಡಿಮೆ. ಹಾಸನದ ಬಾಲಸುಬ್ರಹ್ಮಣ್ಯ ಎನ್ನುವವರು ಅಭಿವೃದ್ಧಿಪಡಿಸಿರುವ 60 ಅಡಿಯ ಈ ದೋಟಿಗೆ ₹ 65ಸಾವಿರ ವೆಚ್ಚವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ, ಐದು ತಾಸು ಸಿಂಪರಣೆ ಮಾಡಬಹುದು. ದೋಟಿ ಬೇಕಿದ್ದಲ್ಲಿ ಟಿಎಂಎಸ್‌ ಸಂಪರ್ಕ ಮಾಡಬಹುದು’ ಎಂದು ಹೇಳಿದರು. ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.