
32 ವರ್ಷಗಳ ಹಿಂದೆ ಕುಮಟಾ ತಾಲ್ಲೂಕಿನ ಉಳ್ಳೂರಮಠ ಅರಣ್ಯದಲ್ಲಿ ಪಶ್ಚಿಮ ಘಟ್ಟಗಳ ಕುರಿತು ಅಧ್ಯಯನ ನಡೆಸಿದ್ದ ತಂಡದ ನೇತೃತ್ವ ವಹಿಸಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್ (ಎಡದಿಂದ 4ನೇಯವರು). ತಂಡದಲ್ಲಿ ಪರಿಸರ ತಜ್ಞ ಎಂ.ಡಿ.ಸುಭಾಶ್ಚಂದ್ರನ್, ಎಂ.ಬಿ.ನಾಯ್ಕ, ಶ್ರೀಧರ ಪಟಗಾರ, ಇತರರು ಪಾಲ್ಗೊಂಡಿದ್ದರು.
(ಸಂಗ್ರಹ ಚಿತ್ರ)
ಕಾರವಾರ: ‘1970ರ ದಶಕದಲ್ಲಿ ಖಗ್ರಾಸ ಸೂರ್ಯಗ್ರಹಣ ಸಂಭವಿಸಿದಾಗ ಅದು ಸುದೀರ್ಘ ಅವಧಿಗೆ ಕಾಣಿಸಿದ ಯಲ್ಲಾಪುರ ಭಾಗದಲ್ಲಿ ವನ್ಯಜೀವಿ ಮತ್ತು ಪರಿಸರದ ಮೇಲೆ ಬೀರುವ ಪ್ರಭಾವದ ಕುರಿತು ಅಧ್ಯಯನ ನಡೆಸಲು ತಂಡದೊಂದಿಗೆ ಬಂದಿದ್ದ ಮಾಧವ ಗಾಡ್ಗೀಳ್ ನಂತರ ಇದೇ ನೆಲವನ್ನು ಕೇಂದ್ರವಾಗಿಸಿಕೊಂಡು ಪಶ್ಚಿಮ ಘಟ್ಟದ ಸಂರಕ್ಷಣೆಗೆ ನಡೆಸಿದ ಅಧ್ಯಯನವನ್ನು ಜಗತ್ತು ಮರೆಯಲಾಗದು’
ಹೀಗೆ ಮಾತಿಗಿಳಿದರು ಶಿರಸಿ ತಾಲ್ಲೂಕು ಭೈರುಂಬೆಯ ಹಿರಿಯ ಪರಿಸರ ಕಾರ್ಯಕರ್ತ ಕೆ.ಎಂ.ಹೆಗಡೆ. ಅವರು ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ಒಡನಾಡಿಯಾಗಿದ್ದವರು.
‘ಗಾಡ್ಗೀಳ್ ಬಂದ ಅವಧಿಯಲ್ಲೇ ಬೇಡ್ತಿ ನದಿಗೆ ಅನೆಕಟ್ಟು ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸಿದ್ದರ ವಿರುದ್ಧ ಹೋರಾಟ ನಡೆಸಲು ಚರ್ಚೆ ನಡೆದಿತ್ತು. ಅವರಿಗೆ ಇದೇ ವಿಷಯ ಮನವರಿಕೆ ಮಾಡಿದಾಗ ಯಾವುದೇ ರಾಜಕೀಯ ಅಜೆಂಡಾ ಇಲ್ಲದಿದ್ದರೆ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದ್ದರು. 1986ರಲ್ಲಿ ಬೇಡ್ತಿ ನದಿ ಸಂರಕ್ಷಣೆಗೆ ನಡೆಸಿದ ಸಮಾವೇಶದಲ್ಲಿ ಪರಿಣಾಮಕಾರಿ ವೈಜ್ಞಾನಿಕ ವರದಿ ಸಹಿತ ಅವರು ಮಂಡಿಸಿದ ವಿಚಾರಗಳನ್ನು ಇಂದಿಗೂ ಮರೆಯಲಾಗದು’ ಎಂದರು ಹೆಗಡೆ.
‘ಪರಿಸರ ಸಂರಕ್ಷಣೆ ಹೆದಿರಿಸಿ, ಬೆದರಿಸಿ ನಡೆಸಲಾಗದು. ಇದಕ್ಕೆ ಜನರ ಸಹಭಾಗಿತ್ವ ಅತೀ ಅಗತ್ಯ. ಕೃಷಿಗೆ ಪೂರಕವಾಗಿ ಅರಣ್ಯ ಸಂರಕ್ಷಣೆ ನಿಂತಿದೆ’ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದ್ದ ಗಾಡ್ಗೀಳ್ ಅಡಿಕೆ ತೋಟಗಳಿಗೆ ಪೂರಕವಾಗಿ ಬೆಟ್ಟ ಭೂಮಿ ನೀಡಿದ್ದನ್ನು ವೈಜ್ಞಾನಿಕ ಸಂಗತಿಗಳ ಸಹಿತ ಪುರಾವೆ ಮಾಡಿದ್ದರು’ ಎಂದು ಹಿರಿಯ ಪರಿಸರ ತಜ್ಞ ಎಂ.ಡಿ.ಸುಭಾಶ್ಚಂದ್ರನ್ ಹೇಳಿದರು.
‘ಪಶ್ಚಿಮ ಘಟ್ಟಗಳ ಬಗ್ಗೆ ಗಾಡ್ಗೀಳ್ ಅವರಷ್ಟು ಪರಿಣಾಮಕಾರಿ ಅಧ್ಯಯನ ನಡೆಸಿದವರು ಮತ್ತೊಬ್ಬರು ಸಿಗಲಾರರು. ಉತ್ತರ ಕನ್ನಡ ಜಿಲ್ಲೆಯಿಂದಲೇ ಪಶ್ಚಿಮ ಘಟ್ಟದ ಅಧ್ಯಯನ ಆರಂಭಿಸಿದ್ದ ಅವರು ನಾಲ್ಕು ದಶಕಗಳ ಹಿಂದೆಯೇ ಶಿರಸಿಯಲ್ಲಿ ಪರಿಸರ ವಿಜ್ಞಾನ ಕೇಂದ್ರದ ಫೀಲ್ಡ್ ಸ್ಟೇಶನ್ ಕೂಡ ತೆರೆದಿದ್ದರು. ಜನರೇ ಅರಣ್ಯ ಉಳಿಸಿದ ಪರಿಣಾಮಕಾರಿ ಸಂಗತಿಗಳ ಅಧ್ಯಯನಕ್ಕೆ ಶಿರಸಿ, ಕುಮಟಾದ ಹಳಕಾರ ಸೇರಿದಂತೆ ಹಲವೆಡೆ ಸಂಚರಿಸಿ ಅಧ್ಯಯನ ನಡೆಸಿದ್ದರು. ಅವರೊಂದಿಗೆ ನಾನೂ ಜೊತೆಯಾಗಿ ಅಧ್ಯಯನಕ್ಕೆ ನೆರವಾಗಿದ್ದೆ’ ಎಂದು ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.
‘ಕಾಗದ ಕಾರ್ಖಾನೆಗಳಿಗೆ ಕಡಿಮೆ ವೆಚ್ಚದಲ್ಲಿ ಬಿದಿರು ಪೂರೈಸಲು ಸರ್ಕಾರ ಮುಂದಾಗಿದ್ದರ ವಿರುದ್ಧ ವೈಜ್ಞಾನಿಕ ಸಂಗತಿಗಳ ಆಧಾರದ ಮೇಲೆ ವಿರೋಧ ವ್ಯಕ್ತಪಡಿಸಿದ್ದರು. ಬಿದಿರು ನಾಶಕ್ಕೆ ಇದು ಕಾರಣವಾಗಲಿದೆ ಎಂದು ಎಚ್ಚರಿಸಿದ್ದರು. ಕೊನೆಗೆ ಜಿಲ್ಲೆಯಲ್ಲಿ ಬಿದಿರು ನಾಶವಾದಾಗ ಗಾಡ್ಗೀಳ್ ಎಚ್ಚರಿಕೆಯ ಮಾತುಗಳು ಮನದಟ್ಟಾಗಿದ್ದವು’ ಎಂದು ಹಿರಿಯ ಪರಿಸರವಾದಿ ಪಾಂಡುರಂಗ ಹೆಗಡೆ ಹೇಳಿದರು.
ಹಾರ್ವರ್ಡ್‌ನಂತಹ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಮಾಧವ ಗಾಡ್ಗೀಳ್ ಪಶ್ಚಿಮ ಘಟ್ಟ ಸಂರಕ್ಷಣೆಗೆ ಜೀವನ ಮುಡಿಪಿಟ್ಟರು. ಅವರ ಆಳ ಮತ್ತು ವೈಜ್ಞಾನಿಕ ಅಧ್ಯಯನ ಎಂದಿಗೂ ಪರಿಸರದ ಪರವಾಗಿತ್ತುಎಂ.ಡಿ.ಸುಭಾಶ್ಚಂದ್ರನ್ ಹಿರಿಯ ಪರಿಸರ ತಜ್ಞ
ಮಾಧವ ಗಾಡ್ಗೀಳ್ ಜಗತ್ತು ಕಂಡ ಶ್ರೇಷ್ಠ ಪರಿಸರ ತಜ್ಞ. ಆದರೂ ಹಳ್ಳಿಯಲ್ಲಿನ ನಮ್ಮ ಮನೆಯಲ್ಲಿ ಉಳಿದಾಗ ಇಲ್ಲಿನ ಪರಿಸರದಲ್ಲಿ ಓಡಾಡುವಾಗ ಸಾಮಾನ್ಯರಲ್ಲಿ ಸಾಮಾನ್ಯರಂತಿರುತ್ತಿದ್ದರುಕೆ.ಎಂ.ಹೆಗಡೆ ಭೈರುಂಬೆ ಗಾಡ್ಗೀಳ್ ಅವರ ಒಡನಾಡಿ
ದೇವರ ಕಾಡಿನ ಮಹತ್ವ ಸಾರಿದ್ದರು
‘ಕಾನು ಮತ್ತು ಕಾಡುಗಳ ನಡುವೆ ಭಿನ್ನತೆ ಇದೆ ಎಂಬುದನ್ನು ವೈಜ್ಞಾನಿಕ ಸಂಗತಿಗಳ ಸಮೇತ ಮಾಧವ ಗಾಡ್ಗೀಳ್ ಸಾರಿದ್ದರು. ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದೇವರ ಕಾಡುಗಳ ಕುರಿತು ಜತೆಗೂಡಿ ಅಧ್ಯಯನ ನಡೆಸಿದ್ದೆವು. ಆಗ ಸಿದ್ದಾಪುರ ಭಾಗದ 25 ಚದರ ಕಿ.ಮೀ ವ್ಯಾಪ್ತಿಯಲ್ಲೇ 50 ದೇವರ ಕಾಡುಗಳಿದ್ದುದು (ಶೇ 6ರಷ್ಟು) ಪತ್ತೆಯಾಗಿತ್ತು. ಅವುಗಳ ಸಂರಕ್ಷಣೆಗೆ ಸಲಹೆಗಳನ್ನೂ ನೀಡಲಾಗಿತ್ತು. ಇದೇ ಕಾಡುಗಳ ಪ್ರಮಾಣ ಈಗ ಶೇ 1ಕ್ಕೆ ಇಳಿಕೆಯಾಗಿದೆ’ ಎಂದು ಎಂ.ಡಿ.ಸುಭಾಶ್ಚಂದ್ರನ್ ಹೇಳಿದರು. ‘ಪಶ್ಚಿಮ ಘಟ್ಟಗಳ ಕುರಿತಾಗಿ ಕರಾರುವಕ್ಕಾದ ಅಧ್ಯಯನ ನಡೆಸಿ ಸಲ್ಲಿಸಿದ್ದ ವರದಿಯನ್ನು ಸರ್ಕಾರ ಕೊನೆಗೂ ಜಾರಿ ಮಾಡಲಿಲ್ಲ. ಯಾವುದೇ ಯೋಜನೆ ಜಾರಿಗೆ ತರುವ ಮುನ್ನ ಸ್ಥಳೀಯರ ಅಭಿಪ್ರಾಯ ಆಲಿಸಬೇಕು. ಜನರು ಒಪ್ಪುವ ಅಂಶಗಳು ಯೋಜನೆಯಲ್ಲಿರಬೇಕು. ಪರಿಸರ ಹಾಳುಗೆಡವಲು ಅವಕಾಶ ಕೊಡಬಾರದು ಎಂಬುದನ್ನು ಸಾರಿದ್ದರು. ಗಾಡ್ಗೀಳ್ ವರದಿ ಜಿಲ್ಲೆಯ ಇಂದಿನ ಜ್ವಲಂತ ಸಮಸ್ಯೆ ಬಿಗಡಾಯಿಸಲು ಯೋಜನೆಗಳ ಹೇರಿಕೆಗೆ ಅವಕಾಶವನ್ನೇ ನೀಡುತ್ತಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.