ADVERTISEMENT

ಮಹಿಮೆ ಗ್ರಾಮಸ್ಥರಿಗೆ ನಡಿಗೆಯೇ ಗತಿ

ಈ ವರ್ಷವೂ ಭರವಸೆಯಾಗಿ ಉಳಿಯುವುದೇ ಡಾಂಬರು ರಸ್ತೆ, ಸೇತುವೆ?

ಸದಾಶಿವ ಎಂ.ಎಸ್‌.
Published 15 ಸೆಪ್ಟೆಂಬರ್ 2022, 21:45 IST
Last Updated 15 ಸೆಪ್ಟೆಂಬರ್ 2022, 21:45 IST
ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮದ ವಿದ್ಯಾರ್ಥಿಗಳು ಕೆಸರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು
ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮದ ವಿದ್ಯಾರ್ಥಿಗಳು ಕೆಸರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು   

ಕಾರವಾರ: ‘ಹೊಳೆ ನೀರನ್ನು ಮಕ್ಕಳು ದಾಟುವುದನ್ನು ನೋಡಿದರೆ ಎದೆ ಜೋರಾಗಿ ಹೊಡೆದು ಕೊಳ್ಳುತ್ತದೆ. ಸೇತುವೆ, ಡಾಂಬರು ರಸ್ತೆ ಕನಸಾಗಿದೆ. ನಮಗಂತೂ ಕೆಸರಿನ ಹಾದಿಯಲ್ಲಿ ಎಂಟು ಕಿಲೋಮೀಟರ್ ನಡೆದು ನಂತರ ಬಸ್ ಹಿಡಿಯುವುದೇ ಆಗಿದೆ..’

‘ನಮಗೆ ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಆಗ್ತಿಲ್ಲ. ಹಸಿದ ಹೊಟ್ಟೆಯಲ್ಲಿ ಬೆಳಿಗ್ಗೆ 7.30ಕ್ಕೆ ಶುರು ಮಾಡಿ, ಒಂದೂವರೆ ಗಂಟೆ ನಡೆದರೆ ಮಾತ್ರ ಬಸ್ ಸಿಗುತ್ತದೆ. ನಂತರವೇ ತರಗತಿಗೆ ಹಾಜರಾಗಲು ಸಾಧ್ಯವಾಗ್ತದೆ. ಹುಡುಗರಾದ್ರೂ ಹೇಗೋ ಬರ್ತಾರೆ, ಹುಡುಗಿಯರ ಸ್ಥಿತಿ ಕೇಳೋದೇ ಬೇಡ..‌’

‘ಕೆಲವು ದಿನಗಳ ಹಿಂದೆ ನಮ್ಮೂರಿನ ಹಿರಿಯರೊಬ್ಬರಿಗೆ ಅನಾರೋಗ್ಯವಾಯ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಕೃಷಿ ಚಟುವಟಿಕೆಯಲ್ಲಿ ಬಳಸುವ ಕೈಗಾಡಿಯಲ್ಲಿ ಕೂರಿಸಿ ತಳ್ಳಿಕೊಂಡು ಮುಖ್ಯರಸ್ತೆಗೆ ಬಂದಿದ್ದೇವೆ...’

ADVERTISEMENT

ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿಯ ಕುಗ್ರಾಮ ಮಹಿಮೆಯ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರಿಂದ ಇಂಥ ಹಲವು ಮಾತುಗಳು ಕೇಳ ಸಿಗುತ್ತವೆ. ಅದೆಷ್ಟೇ ಮನವಿಗಳು ಸಲ್ಲಿಕೆಯಾದರೂ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ ಇಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜನಪ್ರತಿನಿಧಿಗಳು ಕೇವಲ ಮಾತಿನಲ್ಲೇ ಮಂಟಪ ಕಟ್ಟುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರದ್ದು.

‘ಎರಡು ಕಿಲೋಮೀಟರ್ ಮಾತ್ರ ಡಾಂಬರು ರಸ್ತೆಯಿದೆ. ಅಲ್ಲಿಂದ ನಂತರ ಎಂಟು ಕಿಲೋಮೀಟರ್ ಮಣ್ಣಿನ ರಸ್ತೆಯಿದ್ದು, ಮಳೆಯಿಂದಾಗಿ ದೊಡ್ಡ ಹೊಂಡಗಳಾಗಿದ್ದು, ನಡೆಯಲೂ ಸಾಧ್ಯವಾಗುತ್ತಿಲ್ಲ. ಸೂಕ್ತ ರಸ್ತೆ ನಿರ್ಮಾಣ ತೀರಾ ಅತ್ಯಗತ್ಯವಾಗಿದೆ’ ಎಂದು ಹೊನ್ನಾವರ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ದಿನೇಶ ಹೇಳುತ್ತಾರೆ.

‘ಕಂಚಿಬೀಳು– ಮಸ್ಕಾರ– ಮಹಿಮೆ ಕೇರಿ ಮೂಲಕ ಮಹಿಮೆ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಯ ನಡುವೆ ಹೊಳೆ ಹರಿಯುತ್ತದೆ. ಅದಕ್ಕೆ ಸೇತುವೆ ನಿರ್ಮಿಸುವುದು ಊರಿನವರ ಹಲವು ವರ್ಷಗಳ ಬೇಡಿಕೆ. ಇನ್ನೂ ಕಾಮಗಾರಿ ಶುರುವಾಗಿಲ್ಲ’ ಎಂದು ಬೇಸರಿಸುತ್ತಾರೆ.

ಗ್ರಾಮಸ್ಥ ಮಹಾದೇವ ಮರಾಠಿ ಮಾತನಾಡಿ, ‘ಶಾಸಕ ಸುನೀಲ ನಾಯ್ಕ ಅವರನ್ನು ಸುಮಾರು 15 ಜನ ನಾಲ್ಕು ತಿಂಗಳ ಹಿಂದೆ ಭಟ್ಕಳದಲ್ಲಿ ಭೇಟಿ ಮಾಡಿದ್ದೆವು. ಆಗ, ಹೊಳೆಗೆ ಸೇತುವೆ ಮಂಜೂರಾಗಿ ಟೆಂಡರ್ ಆಗಿದೆ. ಮಳೆಗಾಲಕ್ಕೂ ಮೊದಲು ಗುದ್ದಲಿ ಪೂಜೆ ಮಾಡುವುದಾಗಿ ಹೇಳಿದ್ದರು. ಆದರೆ, ನಂತರ ಯಾವುದೇ ಬೆಳವಣಿಗೆಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮತ್ತೆ ಸ್ಥಗಿತಗೊಂಡ ಬಸ್ ಸಂಚಾರ:

ಮಹಿಮೆಗೆ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ದಿನವೂ ಒಟ್ಟು 16 ಕಿಲೋಮೀಟರ್ ನಡೆಯುವ ಬಗ್ಗೆ 2021ರ ಮಾರ್ಚ್ 13ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ವಿಚಾರವು ವಿಧಾನಮಂಡಲ ಕಲಾಪದಲ್ಲೂ ಚರ್ಚೆಯಾಗಿ, ತಕ್ಷಣವೇ ಹೊನ್ನಾವರದಿಂದ ಬಸ್ ಸಂಚಾರ ಶುರುವಾಗಿತ್ತು.

ಈಗ ಮತ್ತದೇ ಸಮಸ್ಯೆ ಶುರುವಾಗಿದ್ದು, ಗ್ರಾಮಕ್ಕೆ ಬಸ್ ಸಂಚಾರವಿಲ್ಲ. ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ರಸ್ತೆಯಲ್ಲಿ ಬಸ್ ಹೂತು ಹೋಗುತ್ತದೆ. ಹಾಗಾಗಿ ಮಳೆ ನಿಂತ ಮೇಲೆ ಬಸ್ ಸಂಚಾರ ಶುರು ಮಾಡುವುದಾಗಿ ಹೇಳುತ್ತಾರೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

‘ಗ್ರಾಮದಲ್ಲಿ 45ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಗೇರುಸೊಪ್ಪ ಮಾರ್ಗದ ಮಹಿಮೆ ಕ್ರಾಸ್‌ಗೆ ಬಂದು, ಅಲ್ಲಿ ಸಿಗುವ ಕೆಲವೇ ಬಸ್‌ಗಳಿಗೆ ಕಾಯಬೇಕು. ದೂರ ಪ್ರಯಾಣದ ಯಾವ ಬಸ್‌ಗಳನ್ನೂ ಅಲ್ಲಿ ನಿಲ್ಲಿಸುವುದಿಲ್ಲ. ಗೇರುಸೊಪ್ಪದಿಂದ ಬರುವ ಬಸ್‌ನಲ್ಲಿ ಕಾಲಿಡಲೂ ಜಾಗವಿರುವುದಿಲ್ಲ. ನಡೆದು ಬರುವಾಗ ತಡವಾಗಿ ಬಸ್ ಸಿಗದಿದ್ದರೆ ತರಗತಿಗೆ ಗೈರು ಹಾಜರಾಗಿ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

ಮಹಿಮೆಗೆ ರಸ್ತೆ, ಸೇತುವೆ ಕಾಮಗಾರಿಗೆ ₹ 1.50 ಕೋಟಿ ಟೆಂಡರ್ ಆಗಿದೆ. ಸದ್ಯದಲ್ಲೇ ಕಾಮಗಾರಿ ಶುರುವಾಗಲಿದೆ. ಬಸ್ ಸಂಚಾರದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವೆ.

- ಸುನೀಲ ನಾಯ್ಕ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.