ADVERTISEMENT

ಉತ್ತರ ಕನ್ನಡ: 33 ಮಂದಿಗೆ ಕೋವಿಡ್ ದೃಢ: ಕೆಲವರ ಸೋಂಕಿನ ಮೂಲದ ಹುಡುಕಾಟ

ಪ್ರಾಥಮಿಕ ಸಂಪರ್ಕಕ್ಕೆ ಬಂದವರೇ ಅಧಿಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 12:54 IST
Last Updated 10 ಜುಲೈ 2020, 12:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರವೂ ಕೋವಿಡ್ 19 ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, 33 ಮಂದಿಗೆ ಖಚಿತವಾಗಿದೆ. ಮುಂಡಗೋಡದಲ್ಲಿ 13, ಕಾರವಾರದಲ್ಲಿ 10, ಹಳಿಯಾಳದಲ್ಲಿ 8 ಮಂದಿಗೆ, ಶಿರಸಿ ಹಾಗೂ ಹೊನ್ನಾವರದಲ್ಲಿ ತಲಾ ಒಬ್ಬರಿಗೆ ದೃಢಪಟ್ಟಿದೆ.

ಮುಂಡಗೋಡದಲ್ಲಿ 11 ಮಂದಿಯೂ 23158 ಸಂಖ್ಯೆ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಒಬ್ಬರು ಮಂಗಳೂರಿನಿಂದ ಬಂದಿದ್ದರೆ, ಮತ್ತೊಬ್ಬರು ಬೆಂಗಳೂರಿನಿಂದ ಮರಳಿದ್ದರು. ಕಾರವಾರದ ಆರು ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಒಬ್ಬರು ಬೆಂಗಳೂರಿನಿಂದ ಬಂದವರಾಗಿದ್ದರೆ, ಒಬ್ಬರು ಮಂಗಳೂರಿನಿಂದ ವಾಪಸ್ ಬಂದವರು. ಮತ್ತೊಬ್ಬರು ಯುರೋಪ್ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ಹಳಿಯಾಳದ ಎಲ್ಲ ಸೋಂಕಿತರೂ 23163 ಸಂಖ್ಯೆಯ ಕೋವಿಡ್ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೊನ್ನಾವರದ 80 ವರ್ಷದ ವೃದ್ಧನಿಗೆ ಸೋಂಕು ಬಂದಿರುವ ಮೂಲವನ್ನೂ ಹುಡುಕಲಾಗುತ್ತಿದೆ.

ADVERTISEMENT

ಆರೋಗ್ಯ ಸಿಬ್ಬಂದಿಗೆ ಕೋವಿಡ್:ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಕೋವಿಡ್ 19 ಪೀಡಿತರಾಗುತ್ತಿದ್ದಾರೆ. ಕಾರವಾರದ 25 ವರ್ಷದ ಹಾಗೂ ಶಿರಸಿಯ 28 ವರ್ಷದ ಮಹಿಳಾ ಸಿಬ್ಬಂದಿ ಸೋಂಕಿತರಾಗಿದ್ದಾರೆ.

ಕೋವಿಡ್‌ಗೆ ಮಹಿಳೆ ಸಾವು:ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ 19 ಪೀಡಿತೆ, 71 ವರ್ಷದ ಮಹಿಳೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಮೂರನೇ ಸಾವಾಗಿದೆ.

ಕಾರವಾರದ ಹೊಟೆಗಾಳಿ ಗ್ರಾಮದ ಮಹಿಳೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಾರವಾರಕ್ಕೆ ವಾಪಸಾಗಿದ್ದರು. ಆರೋಗ್ಯ ಹದಗೆಟ್ಟ ಕಾರಣಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಅವರು ಮಂಗಳೂರಿಗೆ ಹೋಗಿ ಬಂದ ವಿಚಾರ ಮತ್ತು ಅನಾರೋಗ್ಯದ ಸಂಗತಿಯನ್ನು ಕುಟುಂಬದವರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ತೀವ್ರ ನಿಗಾ ಘಟಕಕ್ಕೆ ದಾಖಲಿಸಿದಾಗ ಜ್ವರ ಕಂಡುಬಂದ ಕಾರಣ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಆಗ ಕೋವಿಡ್ 19 ದೃಢಪಟ್ಟಿತ್ತು. ಬಳಿಕ ಅವರನ್ನು ‘ಕ್ರಿಮ್ಸ್’ನ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಬಿಗಡಾಯಿಸಿದ ಕಾರಣ ಗುರುವಾರದಿಂದ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.

ಅಂತ್ಯಸಂಸ್ಕಾರಕ್ಕೆ ವಿರೋಧ:ಮಹಿಳೆಯ ಮೃತದೇಹವನ್ನು ನಗರದ ಹೈ ಚರ್ಚ್ ಬಳಿಯ ಸ್ಮಶಾನಕ್ಕೆ ತೆಗೆದುಕೊಂಡು ಬಂದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳು ಮನವೊಲಿಕೆಗೆ ಯತ್ನಿಸಿದರೂ ಜನ ಕೇಳಲಿಲ್ಲ. ಕೊನೆಗೆ ಪೊಲೀಸ್ ಭದ್ರತೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನೆರವೇರಿತು.

‘ಅರಣ್ಯದಲ್ಲಿ ಅಂತ್ಯಕ್ರಿಯೆಮಾಡಿ’:ಕೋವಿಡ್‌ನಿಂದ ಮೃತಪಟ್ಟವರನ್ನು ಕಾರವಾರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಬೇಕು ಎಂದು ನಗರಸಭೆ ಸದಸ್ಯರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಹೈಚರ್ಚ್ರಸ್ತೆಯಲ್ಲಿರುವ ಸ್ಮಶಾನದಲ್ಲಿ ಮಾಡಲಾಗಿದೆ. ಇದನ್ನುಸ್ಥಳೀಯರು ವಿರೋಧಿಸಿದಾಗ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ನಗರಸಭೆ ಸದಸ್ಯರಿಗೆ ಮಾಹಿತಿ ನೀಡದೇಅಂತ್ಯಸಂಸ್ಕಾರ ಮಾಡಲಾಗಿದೆ. ತರಾತುರಿಯಲ್ಲಿ ಈ ರೀತಿ ಮಾಡಿರುವುದು ವಿಷಾದನೀಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎಸ್ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರೂ ಹಾಜರಿದ್ದರು.

ಉತ್ತರ ಕನ್ನಡದಲ್ಲಿ ಕೊರೊನಾ: ಅಂಕಿ ಅಂಶ

545 – ಒಟ್ಟು ಸೋಂಕಿತರ ಸಂಖ್ಯೆ

220 – ಗುಣಮುಖರಾದವರು

322 – ಸಕ್ರಿಯ ಪ್ರಕರಣಗಳು

3 – ಮೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.