ADVERTISEMENT

ವಿದ್ಯಾರ್ಥಿಗಳನ್ನು ರಾಷ್ಟ್ರದ ಸಂಪತ್ತನ್ನಾಗಿ ರೂಪಿಸಿ: ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:33 IST
Last Updated 17 ಮೇ 2025, 15:33 IST
ದಾಂಡೇಲಿಯ ಅಂಬೇವಾಡಿಯಲ್ಲಿ ನಡೆದ ವಸತಿ ಕಾಲೇಜು ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು
ದಾಂಡೇಲಿಯ ಅಂಬೇವಾಡಿಯಲ್ಲಿ ನಡೆದ ವಸತಿ ಕಾಲೇಜು ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು   

ದಾಂಡೇಲಿ: ‘ರಾಷ್ಟ್ರದ ಸಂಪತ್ತಾದ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸಬೇಕೆಂಬ ಉದ್ದೇಶದಿಂದ ವಸತಿ ಶಾಲೆಗಳಿಗೆ ಸರ್ಕಾರವು ಅಗತ್ಯ  ಸೌಲಭ್ಯ ನೀಡುತ್ತಿದ್ದು, ಇದರ ಅನುಕೂಲ ಪಡೆಯಬೇಕು’ ಎಂದು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರೂ ಆದ ಶಾಸಕ  ಆರ್.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ಅಂಬೇವಾಡಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಹಯೋಗದಲ್ಲಿ ₹8 ಕೋಟಿ ವೆಚ್ಚದಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಒಂದು ಕಾಲದಲ್ಲಿ ವಿದ್ಯೆ ದುಬಾರಿಯಾಗಿತ್ತು. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕಾಲೇಜುಗಳನ್ನು ಸ್ಥಾಪಿಸಿ, ಉನ್ನತ ಶಿಕ್ಷಣ ನೀಡುತ್ತಿದೆ. ಬಡ ಪಾಲಕರು ಸಹ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಅವರಿಗೆ ಇಂತಹ ವಸತಿ ಕಾಲೇಜುಗಳು ಅನುಕೂಲಕರವಾಗಿವೆ. ವಿದ್ಯಾರ್ಥಿಗಳು ಭವಿಷ್ಯದ ಭಾರತದ ರೂವಾರಿಗಳಾಗಿ, ರಾಷ್ಟ್ರದ ಪ್ರಗತಿಗೆ ಭಾಗಿದಾರರಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಜಡೇನವರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಸಾಲಿನ ಶೈಕ್ಷಣಿಕ ಪ್ರಗತಿ, ಪ್ರವೇಶಾತಿ ಮತ್ತು ಫಲಿತಾಂಶದ ಕುರಿತು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ ಗಡ್ಡೇಗೌಡರ, ತಹಶೀಲ್ದಾರ್‌ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ನಗರಸಭೆಯ ಅಧ್ಯಕ್ಷ ಅಷ್ಪಾಕ ಶೇಖ್‌, ಸ್ಥಾಯಿಸಮಿತಿ ಅಧ್ಯಕ್ಷೆ ಸುಧಾ ಜಾಧವ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕೃಷ್ಣಾ ಪಾಟೀಲ, ಸಂಜಯ ನಂದ್ಯಾಳಕರ ಇದ್ದರು.

ಭಾರತೀಯ ಎನ್ನುವ ಹೆಮ್ಮೆ ನಿಮ್ಮದಾಗಲಿಜಾತಿ ಧರ್ಮ ಪಕ್ಷ ಆನಂತರ. 

ಭಯೋತ್ಪಾದನಾ ಕೃತ್ಯಕ್ಕೆ ಭಾರತೀಯ ಸೈನಿಕರ ದಿಟ್ಟ ಉತ್ತರ ನೀಡಿದ್ದು ಶ್ಲಾಘನೀಯ. ಭಾರತವು ತನ್ನ ದೈತ್ಯ ಶಕ್ತಿಯನ್ನು ಪ್ರಪಂಚದ ಮುಂದೆ ತೋರಿಸಿದೆ’ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು. ‘ಆಪರೇಷನ್‌ ಸಿಂಧೂರ’ದಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರ ಅದರಲ್ಲಿ ಯಶಸ್ವಿಯಾಗಿದೆ. ಮೂರು ಸೇನೆಗಳ ದಿಟ್ಟತನ ಧೈರ್ಯದ ಬಗ್ಗೆ ಅಭಿಮಾನ ಮೂಡಿದೆ. ಯುದ್ಧದ ಸಂದರ್ಭ ಬಂದರೆ ದಿಟ್ಟ ಉತ್ತರ ನೀಡಲು ನಮ್ಮ ಸೈನ್ಯ ಸಮರ್ಥವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.