ADVERTISEMENT

ಶಿರಸಿ ಮಾರಿಕಾಂಬಾ ಜಾತ್ರೆಗೆ ಹರಿದುಬಂದ ಭಕ್ತಸಾಗರ

ರಜಾ ದಿನದಂದು ದೇವಿಯ ದರ್ಶನಕ್ಕೆ ಕಿಕ್ಕಿರಿದು ಸೇರಿದ ಜನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:06 IST
Last Updated 2 ಮಾರ್ಚ್ 2026, 7:06 IST
<div class="paragraphs"><p>ಶಿರಸಿ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಭಾನುವಾರ ಜಾತ್ರಾ ಚಪ್ಪರ ಜನಜಂಗುಳಿಯಿಂದ ತುಂಬಿತ್ತು</p></div>

ಶಿರಸಿ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಭಾನುವಾರ ಜಾತ್ರಾ ಚಪ್ಪರ ಜನಜಂಗುಳಿಯಿಂದ ತುಂಬಿತ್ತು

   

ಶಿರಸಿ: ಮಾರಿಕಾಂಬಾ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವವು ಆರನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ರಜಾ ದಿನವಾದ ಕಾರಣ ಇಡೀ ಶಿರಸಿ ನಗರವೇ ಜನಸಾಗರದಲ್ಲಿ ಮುಳುಗಿದಂತಾಗಿತ್ತು.

ಶನಿವಾರ ರಾತ್ರಿಯಿಂದಲೇ ಆರಂಭವಾದ ಜನರ ಹರಿವು ಭಾನುವಾರ ಮಧ್ಯಾಹ್ನದ ವೇಳೆಗೆ ನೂಕುನುಗ್ಗಲಿನ ಸ್ಥಿತಿಗೆ ತಲುಪಿತ್ತು. ನಗರದ ಪ್ರತಿಯೊಂದು ರಸ್ತೆಗಳೂ ಭಕ್ತರಿಂದ ತುಂಬಿ ತುಳುಕುತ್ತಿದ್ದು, ಕಾಲಿಡಲೂ ಜಾಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

​ಕೇವಲ ಉತ್ತರ ಕನ್ನಡ ಜಿಲ್ಲೆಯಷ್ಟೇ ಅಲ್ಲದೆ, ನೆರೆಯ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆದರು.

ರಜೆಯ ಮೋಜು ಮತ್ತು ಅಮ್ಮನ ದರ್ಶನದ ಹಂಬಲ ಭಕ್ತರನ್ನು ಶಿರಸಿಯತ್ತ ಸೆಳೆದಿತ್ತು. ಮಾರಿಕಾಂಬಾ ದೇವಸ್ಥಾನದಿಂದ ಬಿಡ್ಕಿಬೈಲಿನ ಜಾತ್ರಾ ಮಂಟಪದವರೆಗೂ ಭಕ್ತರು ಕಿಲೋಮೀಟರ್‌ಗಟ್ಟಲೇ ಸಾಲಿನಲ್ಲಿ ನಿಂತು ದೇವಿಗೆ ಹಣ್ಣು-ಕಾಯಿ ಅರ್ಪಿಸಿದರು. ಹರಕೆ, ಕಾಣಿಕೆ ಹಾಗೂ ತುಲಾಭಾರದಂತಹ ವಿವಿಧ ಸೇವೆಗಳನ್ನು ಸಲ್ಲಿಸಲು ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರ ದಂಡು ಜಮಾಯಿಸಿತ್ತು. ಸಂಜೆಯವರೆಗೂ ಈ ನೂಕುನುಗ್ಗಲು ಅಡೆತಡೆಯಿಲ್ಲದೆ ಮುಂದುವರಿಯಿತು.

​ಜಾತ್ರೆಯ ಮತ್ತೊಂದು ಪ್ರಮುಖ ಆಕರ್ಷಣೆಯಾದ ಕೋಟೆಕೆರೆ ಭಾಗದಲ್ಲಂತೂ ಜನದಟ್ಟಣೆ ನಿಭಾಯಿಸುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಇಲ್ಲಿನ ವಿಶಾಲ ಪ್ರದೇಶದಲ್ಲಿ ಹಾಕಲಾದ ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಸಾಹಸ ಕ್ರೀಡೆಗಳತ್ತ ಯುವಜನತೆ ಹಾಗೂ ಮಕ್ಕಳು ಮುತ್ತಿಗೆ ಹಾಕಿದ್ದರು. ಪ್ರತಿಯೊಂದು ಆಟಿಕೆಗಳನ್ನು ಹತ್ತಲು ಜನರು ನೂಕುನುಗ್ಗಲಿನಲ್ಲಿ ಪೈಪೋಟಿ ನಡೆಸುತ್ತಿರುವುದು ಕಂಡುಬಂತು. ವಿದ್ಯುತ್ ದೀಪಗಳ ಅಲಂಕಾರದ ನಡುವೆ ಮಧ್ಯರಾತ್ರಿ ಕಳೆದರೂ ಜನರ ಉತ್ಸಾಹ ಕುಂದಿರಲಿಲ್ಲ. ರಾತ್ರಿ 3 ಗಂಟೆಯವರೆಗೂ ಜನಜಂಗುಳಿ ಜಾತ್ರಾ ಮೈದಾನದಲ್ಲಿ ಬೀಡುಬಿಟ್ಟು ಸಂಭ್ರಮಿಸಿತು.

ಈ ಬಾರಿಯ ರಜಾ ದಿನವು ಮಾರಿಕಾಂಬಾ ಜಾತ್ರೆಯ ಇತಿಹಾಸದಲ್ಲೇ ಅತಿ ಹೆಚ್ಚು ಜನದಟ್ಟಣೆ ಕಂಡ ದಿನಗಳಲ್ಲಿ ಒಂದಾಗಿ ದಾಖಲಾಯಿತು. ಭಕ್ತರ ಸಡಗರ, ವ್ಯಾಪಾರಸ್ಥರ ಗಿಜಿಗುಟ್ಟುವಿಕೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಗರವು ಜಾತ್ರಾ ನಗರಿಯಾಗಿ ಕಂಗೊಳಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.