ADVERTISEMENT

ಕಳೆಮುಕ್ತ ಮಾರಿಕಾಂಬಾ ಕ್ರೀಡಾಂಗಣಕ್ಕೆ ಹೊಸ ಕಳೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರಂತರ ನಿರ್ವಹಣೆಗೆ ಕ್ರೀಡಾಪಟುಗಳ ಒತ್ತಾಯ

ಸಂಧ್ಯಾ ಹೆಗಡೆ
Published 14 ಅಕ್ಟೋಬರ್ 2018, 19:30 IST
Last Updated 14 ಅಕ್ಟೋಬರ್ 2018, 19:30 IST
ಕ್ರೀಡಾಸ್ನೇಹಿಯಾಗಿ ಪರಿವರ್ತಿತಗೊಂಡ ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ
ಕ್ರೀಡಾಸ್ನೇಹಿಯಾಗಿ ಪರಿವರ್ತಿತಗೊಂಡ ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ   

ಶಿರಸಿ: ಶಾಲೆ, ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯುವ, ಅನೇಕ ಕ್ರೀಡಾ ಸ್ಪರ್ಧಿಗಳಿಗೆ ಪ್ರತಿದಿನ ಬೆಳಿಗ್ಗೆ ಅಭ್ಯಾಸ ನಡೆಸಲು ಅನುಕೂಲವಾಗಿರುವ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣಕ್ಕೆ ಹೊಸ ಕಳೆ ಬಂದಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾಂಗಣದ ಒಳಗೆ ಸ್ವಚ್ಛತಾ ಕಾರ್ಯ ನಡೆಸಿದೆ. ಮಳೆಗಾಲದಲ್ಲಿ ಮೈದಾನದ ಒಳಗೆ ಬೆಳೆದಿದ್ದ ಹುಲ್ಲು, ಗಿಡಗಳನ್ನು ಕೆಲಸಗಾರರು ಸ್ವಚ್ಛಗೊಳಿಸಿದ್ದಾರೆ. ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತಿದ್ದ ಓಟದ ಪಥದ ಮೇಲೆ ರೋಲ್ ಸಂಚಾರ ಮಾಡಿಸಿ, ಸರಿಪಡಿಸಲಾಗಿದೆ.

ಆಗಸ್ಟ್‌ ತಿಂಗಳಿನಿಂದ ಆರಂಭವಾಗುವ ಶಾಲಾ ಕ್ರೀಡಾಕೂಟಗಳು ಕೆಸರಿನಿಂದ ಕೂಡಿರುವ ಈ ಮೈದಾನದಲ್ಲಿಯೇ ನಡೆಯುತ್ತಿದ್ದವು. ಮಕ್ಕಳು ಬೀಳುತ್ತ, ಏಳುತ್ತ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಅರ್ಧದಷ್ಟು ಕ್ರೀಡಾ ಸ್ಪರ್ಧೆಗಳು ಮುಗಿದ ಮೇಲಾದರೂ, ಸೆಪ್ಟೆಂಬರ್ ತಿಂಗಳಿನಲ್ಲಿ ಇಲಾಖೆ ಆಸಕ್ತಿ ತೋರಿ ಕ್ರೀಡಾಂಗಣವನ್ನು ವ್ಯವಸ್ಥಿತಗೊಳಿಸಿದೆ.

ADVERTISEMENT

‘ಜಿಲ್ಲಾ ಪಂಚಾಯ್ತಿಯಿಂದ ಕ್ರೀಡಾಂಗಣ ನಿರ್ವಹಣೆಗೆ ವಾರ್ಷಿಕವಾಗಿ ದೊರೆಯುವ ಅನುದಾನದಲ್ಲಿ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಸಲಾಗಿದೆ. ಓಟದ ಪಥ ಸರಿಪಡಿಸಿ, ಬೆಳೆದಿದ್ದ ಹುಲ್ಲಿನ ಕಟಾವು ಮಾಡಿಸಲಾಗಿದೆ. ಎತ್ತರ ಜಿಗಿತದ ತಾಲೀಮು ನಡೆಸುವ ಕ್ರೀಡಾಸಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದು ಇಲಾಖೆಯ ಅಧಿಕಾರಿ ಜಿ.ಗಾಯತ್ರಿ ತಿಳಿಸಿದರು.

‘ಅಂಗವಿಕಲ ಮಕ್ಕಳಿಗೆ ರ್‍ಯಾಂಪ್ ಮತ್ತು ಜನಸ್ನೇಹಿ ಶೌಚಾಲಯ ನಿರ್ಮಿಸುವ ಸಂಬಂಧ ಕಳೆದ ವರ್ಷ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮೈದಾನದಲ್ಲಿ ಒಳಚರಂಡಿ ಯೋಜನೆಯ ಅಗತ್ಯವಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗುವುದು. ಮೈದಾನದಲ್ಲಿರುವ ಒಟ್ಟು ಎಂಟು ಓಟದ ಪಥಗಳಲ್ಲಿ ಎರಡು ಪಥಗಳನ್ನು ₹ 6 ಲಕ್ಷ ವೆಚ್ಚದಲ್ಲಿ ಈ ಹಿಂದೆಯೇ ವ್ಯವಸ್ಥಿತಗೊಳಿಸಲಾಗಿದೆ. ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಕನಿಷ್ಠ ₹ 40 ಲಕ್ಷ ಅನುದಾನ ಬೇಕಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ತರಬೇತಿ, ಆಧುನಿಕ ಸೌಲಭ್ಯದ ಕ್ರೀಡಾಂಗಣದ ಕೊರತೆಯಿಂದ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕ್ರೀಡಾ ತರಬೇತುದಾರರ ಅಗತ್ಯವಿದೆ’ ಎನ್ನುತ್ತಾರೆ, ಕ್ರೀಡಾಂಗಣದ ದುಃಸ್ಥಿತಿ ಸಂಬಂಧ ಕ್ರೀಡಾ ಇಲಾಖೆಗೆ ಕಾನೂನು ನೋಟಿಸ್ ನೀಡಿದ್ದ, ಸ್ಪಂದನ ಸ್ಪೋರ್ಟ್ಸ್‌ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.