ADVERTISEMENT

ಮನೆಯಲ್ಲಿ ಲಕ್ಷ್ಮಿನೃಸಿಂಹ ಜಯಂತಿ ಆಚರಿಸಿ: ಸ್ವರ್ಣವಲ್ಲಿ ಶ್ರೀ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 13:10 IST
Last Updated 15 ಏಪ್ರಿಲ್ 2020, 13:10 IST
ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ
ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ   

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಮೇ 5ರಿಂದ ನಡೆಯಬೇಕಾಗಿದ್ದ ಶ್ರೀಲಕ್ಷ್ಮೀ ನರಸಿಂಹ ರಥೋತ್ಸವ ಹಾಗೂ ರಾಜ್ಯ ಮಟ್ಟದ ಕೃಷಿ ಜಯಂತಿಯನ್ನು ಸಾಮೂಹಿಕವಾಗಿ ಆಚರಿಸದಿರಲು ನಿರ್ಣಯಿಸಲಾಗಿದೆ. ಭಕ್ತರು ಅಂದು ತಮ್ಮ ಮನೆಯ ದೇವರಿಗೆ ಪೂಜೆ ಸಲ್ಲಿಸಿ ಪಾನಕ ನೈವೇದ್ಯ ನೀಡುವಂತೆ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಮೇ 3ರ ತನಕ ವಿಸ್ತರಣೆಯಾದ ಕಾರಣ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರಿಗೆ ಧ್ವನಿ ಸಂದೇಶವನ್ನು ನೀಡಿರುವ ಶ್ರೀಗಳು, ‘ದೊಡ್ಡ ಪ್ರಮಾಣದಲ್ಲಿ ಉತ್ಸವ ನಡೆಸುವುದನ್ನು ಕೈ ಬಿಡಲಾಗಿದೆ. ದೇವರ ಪೂಜೆ ಹವನ, ಅಭಿಷೇಕ ಮಠದ ಒಳಗಡೆ ನಡೆಯಲಿದೆ. ದೇವರ ಅನುಗ್ರಹದಿಂದ ಸಮಾಜಕ್ಕೆ ಅಂಟಿರುವ ಕರೊನಾ ವೈರಸ್ ಪಿಡುಗು ಬೇಗ ನಿವಾರಣೆ ಆಗಲಿ’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

‘ಮಠದ ಭಕ್ತರು ಮೇ 6ರಂದು ಲಕ್ಷ್ಮೀ ನರಸಿಂಹ ಜಯಂತಿಯ ಉತ್ಸವದ ದಿನ ಸಂಜೆ 6 ಗಂಟೆಗೆ ದೇವರಿಗೆ ದೀಪ ಹಚ್ಚಿ, ಪಾನಕದ ಸೇವೆಯನ್ನು ಮಾಡಬೇಕು. ಜೊತೆಗೆ ಮಠದ ಸ್ಮರಣೆ ಮಾಡಿ ಮನೆಯಲ್ಲಿಯೇ ಉತ್ಸವ ಆಚರಣೆ ಮಾಡಬೇಕು. ಜಾಗತಿಕ ಸಮಸ್ಯೆ ನಿವಾರಣೆ ಆಗಲು ದೇವರಿಗೆ ಜಪ, ಪೂಜೆ, ಪ್ರಾರ್ಥನೆಯನ್ನು ಮಾಡಬೇಕು. ಬೆಳಗಿನ ವೇಳೆ ಆಸನ, ಪ್ರಾಣಾಯಾಮ ಮಾಡಬೇಕು. ಇವುಗಳಿಂದ ಶಾರೀರಿಕ ಹಾಗೂ ಮಾನಸಿಕವಾಗಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಅದರ ಜೊತೆಗೆ ದೇವರ ಪೂಜೆ ಮಾಡಿದಲ್ಲಿ ಭಗವಂತನ ಅನುಗ್ರಹದಿಂದ ಎಲ್ಲವೂ ಸರಿ ಹೋಗುತ್ತದೆ’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.