ADVERTISEMENT

ಕಾರವಾರ: ಕುಗ್ರಾಮದಲ್ಲಿ ಲಸಿಕೆ ಪಡೆದವರಿಗೆ ಸ್ಥಳದಲ್ಲೇ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 15:27 IST
Last Updated 25 ನವೆಂಬರ್ 2021, 15:27 IST
ಹೊನ್ನಾವರ ತಾಲ್ಲೂಕಿನ ಯಲಕೊಟ್ಟಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಪ್ರಮಾಣಪತ್ರವನ್ನು ಮುದ್ರಿಸಿ ವಿತರಿಸಲಾಯಿತು
ಹೊನ್ನಾವರ ತಾಲ್ಲೂಕಿನ ಯಲಕೊಟ್ಟಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಪ್ರಮಾಣಪತ್ರವನ್ನು ಮುದ್ರಿಸಿ ವಿತರಿಸಲಾಯಿತು   

ಕಾರವಾರ: ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕೊಟ್ಟಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಯಿತು. ಲಸಿಕೆ ಪಡೆದವರಿಗೆ ಪ್ರಮಾಣ ಪತ್ರಗಳನ್ನು ಸ್ಥಳದಲ್ಲೇ ಡೌನ್‌ಲೋಡ್ ಮಾಡಿ ಮುದ್ರಿಸಿ ವಿತರಿಸಿದ್ದು ವಿಶೇಷವಾಗಿತ್ತು.

ಮಹಿಮೆ, ಉಪ್ಪೋಣಿ ಮಜಿರೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದಿಲ್ಲ. ಇದರಿಂದ ಲಸಿಕೆ ಪಡೆದ ಅಂಗವಿಕಲರು, ವೃದ್ಧರು, ಮಹಿಳೆಯರು ಹಾಗೂ ಅಶಕ್ತರಿಗೆ ಪ್ರಮಾಣಪತ್ರವನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ಪಡೆದುಕೊಳ್ಳಲು ತೊಂದರೆಯಿತ್ತು. ಹಾಗಾಗಿ ಗ್ರಾಮದ ಎತ್ತರದ ಪ್ರದೇಶದಲ್ಲಿ ಸಿಗ್ನಲ್ ಬೂಸ್ಟರ್ ಹಾಗೂ ಆ್ಯಂಟೆನಾಗಳನ್ನು ಅಳವಡಿಸಿ ಪರಿಹಾರ ಕಂಡುಕೊಳ್ಳಲಾಯಿತು. ಅದರ ಮೂಲಕ ಇಂಟರ್‌ನೆಟ್ ಸಂಪರ್ಕ ಸಿಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ಕಾರ್ಯ ನಿರ್ವಹಿಸಲಾಯಿತು.

ಫಲಾನುಭವಿಗಳ ಮೊಬೈಲ್ ಫೋನ್‌ಗಳಿಗೆ ಬಂದ ಒ.ಟಿ.ಪಿ ಸಹಾಯದಿಂದ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ ಮುದ್ರಿಸಿ ನೀಡಲಾಯಿತು. ಗ್ರಾಮದ ಸುಮಾರು 250 ಮಂದಿ ಈ ರೀತಿ ಪ್ರಮಾಣಪತ್ರಗಳನ್ನು ಪಡೆದುಕೊಂಡರು. ಲಸಿಕೆ ಪಡೆಯಲು ಬಂದಿದ್ದ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಸನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ADVERTISEMENT

ಉಪ್ಪೋಣಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಗೌಡ, ಗೇರುಸೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.