ADVERTISEMENT

ಮಹಾಸ್ಯಂದನ ಬೇಧ ರಹಿತ ಭಕ್ತಿ ರಥವಾಗಲಿ: ಸಚಿವ ಹೆಬ್ಬಾರ

ರಥ ನಿರ್ಮಾಣ ಕಾರ್ಯ ಪ್ರಾರಂಭೋತ್ಸವದಲ್ಲಿ ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 12:52 IST
Last Updated 12 ಫೆಬ್ರುವರಿ 2022, 12:52 IST
ಬನವಾಸಿ ಮಧುಕೇಶ್ವರ ದೇವಸ್ಥಾನದ ಮಹಾಸ್ಯಂದನ ರಥ ನಿರ್ಮಾಣ ಕಾರ್ಯ ಪ್ರಾರಂಭೋತ್ಸವಕ್ಕೆ ರಥ ಶಿಲ್ಪಿಗಳಾದ ಕುಂಭಾಶಿಯ ಆರ್.ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಅವರಿಗೆ ವೀಳ್ಯ ನೀಡುವ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಚಾಲನೆ ನೀಡಿದರು
ಬನವಾಸಿ ಮಧುಕೇಶ್ವರ ದೇವಸ್ಥಾನದ ಮಹಾಸ್ಯಂದನ ರಥ ನಿರ್ಮಾಣ ಕಾರ್ಯ ಪ್ರಾರಂಭೋತ್ಸವಕ್ಕೆ ರಥ ಶಿಲ್ಪಿಗಳಾದ ಕುಂಭಾಶಿಯ ಆರ್.ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಅವರಿಗೆ ವೀಳ್ಯ ನೀಡುವ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಚಾಲನೆ ನೀಡಿದರು   

ಶಿರಸಿ: ತಾಲ್ಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ಮಹಾಸ್ಯಂದನ ರಥ ನಿರ್ಮಾಣ ಕಾರ್ಯ ಪ್ರಾರಂಭೋತ್ಸವ ಶನಿವಾರ ನಡೆಯಿತು.

ಮಧುಕೇಶ್ವರ ದೇವರ ಸನ್ನಿಧಿಯಲ್ಲಿ ರಥ ಶಿಲ್ಪಿಗಳಾದ ಕುಂಭಾಶಿಯ ಆರ್.ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಅವರಿಗೆ ವೀಳ್ಯ ನೀಡುವ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ರಥ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಮುದ್ರೆ ಒತ್ತಿದರು.

ಇದಕ್ಕೂ ಮೊದಲು ಪಂಪ ವೃತ್ತದಿಂದ ದೇವಸ್ಥಾನದವರೆಗೆ ರಥಕ್ಕೆ ಬಳಸುವ ಮರದ ಅಚ್ಚುಗಳನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನದ ಎದುರಿಗೆ ತರಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತದ ತಂಡಗಳು ಮೆರಗು ಹೆಚ್ಚಿಸಿದ್ದವು.

ADVERTISEMENT

ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಮಹಾಸ್ಯಂದನ ರಥಕ್ಕೆ ಧಾರ್ಮಿಕ ಪ್ರಾಮುಖ್ಯತೆಯ ಜತೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಈ ರಥ ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಪ್ರತಿಯೊಬ್ಬರ ಕಾಣಿಕೆಯಿಂದ ನಿರ್ಮಾಣಗೊಳ್ಳಬೇಕು. ಆಗ ರಥದ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ’ ಎಂದರು.

‘ನಾಲ್ಕು ಶತಮಾನಗಳ ನಂತರ ಮಹಾಸ್ಯಂದನ ರಥ ಮರು ನಿರ್ಮಾಣ ಪುಣ್ಯದ ಕಾಯಕ. ಇದು ಜೀವಮಾನದ ಅಪರೂಪದ ಅವಕಾಶ’ ಎಂದರು.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ‘ಧರ್ಮದಲ್ಲಿ ವಿಶ್ವಾಸ ಇಟ್ಟರೆ ಧರ್ಮ ನಮ್ಮನ್ನು ಕಾಪಾಡುತ್ತದೆ’ ಎಂದರು.

‘ರಥವನ್ನು ಒಂದು ವರ್ಷದ ಅವಧಿಯೊಳಗೆ ನಿರ್ಮಿಸಿಕೊಡಲಾಗುವದು’ ಎಂದುಆರ್.ಲಕ್ಷ್ಮೀನಾರಾಯಣ ಆಚಾರ್ಯ ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಬನವಾಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತುಳಸಿ ಆರೇರ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್, ರಥ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಡಿ.ಭಟ್, ದ್ಯಾಮಣ್ಣ ದೊಡ್ಮನಿ, ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಇತರರು ಇದ್ದರು. ಮಧುಸೂಧನ ಭಟ್ ವೇದಘೋಷ ಮಾಡಿದರು. ಶಿವಣ್ಣ ಗೌಡ ಸ್ವಾಗತಿಸಿದರು.ಶ್ರೀನಿಧಿ ಭಟ್ಟ ಮಂಗಳೂರು ನೇತೃತ್ವದಲ್ಲಿ ರಥದ ಅಚ್ಚಿಗೆ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.