ADVERTISEMENT

ಹೊರಗಿನಿಂದ ಬರುವವರ ವಿಚಾರದಲ್ಲಿ ರಾಜಿ ಬೇಡ: ಸಚಿವ ಶಿವರಾಮ ಹೆಬ್ಬಾರ

ಕುಮಟಾದಲ್ಲಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 13:33 IST
Last Updated 23 ಏಪ್ರಿಲ್ 2020, 13:33 IST
ಕುಮಟಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ ಚಿತ್ರದಲ್ಲಿದ್ದಾರೆ.
ಕುಮಟಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ ಚಿತ್ರದಲ್ಲಿದ್ದಾರೆ.   

ಕುಮಟಾ: ‘ಲಾಕ್‌ಡೌನ್ ಅವಧಿಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಯ ಜನರನ್ನು ಕರೆತರುವ ವಿಚಾರದಲ್ಲಿ ಖಂಡಿತಾ ರಾಜಿ ಬೇಡ. ಪೊಲೀಸರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸೋತಿರುವ ಜನರೊಂದಿಗೆ ದುರ್ವರ್ತನೆ ತೋರಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮಹೆಬ್ಬಾರ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,‘ಇನ್ನು 10 ದಿನ ಕಾಯಿರಿ. ಸದ್ಯಪಟ್ಟಣ ಪ್ರದೇಶದಲ್ಲಿ ಲಾಕ್‌ಡೌನ್ ಯಥಾ ಪ್ರಕಾರ ಮುಂದುವರಿಯುತ್ತದೆ’ ಎಂದು ಹೇಳಿದರು.

‘ಮಳೆ ಆರಂಭವಾಗುವ ಮೊದಲು ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅದಕ್ಕೆ ಬೇಕಾದ ಉಸುಕು, ಜಲ್ಲಿ ಪೂರೈಕೆ ತಾನಾಗಿಯೇ ಆಗುತ್ತದೆ’ ಎಂದರು.

ADVERTISEMENT

‘ಮೊನ್ನೆ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಮುರಿದು ಬಿದ್ದ ಒಂದು ತೆಂಗಿನ ಮರಕ್ಕೆ ಅಧಿಕಾರಿಗಳು ಕೇವಲ ₹400 ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳಬಾರದು. ಹಾನಿಯ ಅಂದಾಜು ಮಾಡುವಾಗ ಅಧಿಕಾರಿಗಳು ಕಾನೂನಿನೊಳಗೇ ಮಾನವೀಯತೆ ತೋರಬೇಕು’ ಎಂದು ಸೂಚಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ತೊರ್ಕೆ ಗ್ರಾಮದಲ್ಲಿ ಅಘನಾಶಿನಿ ಹಿನ್ನೀರು ಗಜನಿ ಕಟ್ಟೆ ಒಡೆದು ಕುಡಿಯುವ ನೀರಿನ ಬಾವಿಗಳಿಗೆ ಉಪ್ಪು ನೀರು ಸೇರಿದೆ. ಅದರ ತುರ್ತು ಕಾಮಗಾರಿಗೆ ಚಿಕ್ಕ ನೀರಾವರಿ ಇಲಾಖೆಯಿಂದ ₹70 ಲಕ್ಷ ಮಂಜೂರಿ ಮಾಡಿಸಿ ಕಾಮಗಾರಿ ಆರಂಭಿಸಲಾಗಿದೆ. ಆದರೆ,ಸ್ಥಳೀಯ ಅಧಿಕಾರಿಗಳು ಕೆಲಸ ಮಾಡದೆ ಬಿಲ್ ಖರ್ಚು ಹಾಕುತ್ತಿದ್ದಾರೆ’ ಎಂದು ದೂರಿದರು.

‘3ರವರೆಗೆ ಕಾಯೋಣ’:‘ಉಡುಪಿಯ ಮೀನು ಸಂಸ್ಕರಣಾ ಕೇಂದ್ರಕ್ಕೆ ಹೋದ ತಾಲ್ಲೂಕಿನ ಯುವತಿಯವರು ಊರಿಗೆ ಬರಲಾಗುತ್ತಿಲ್ಲ.ಅವರನ್ನು ಕರೆ ತರಲು ಕ್ರಮ ಅಗತ್ಯ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಇದಕ್ಕೆಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಹೊರಗಿನಿಂದ ಜನರನ್ನು ಕರೆತರುವ ವಿಚಾರದ ಚರ್ಚೆ ದಯವಿಟ್ಟು ಬೇಡ. ಮೇ 3ರವರೆಗೆ ಕಾಯೋಣ. ಲಾಕ್‌ಡೌನ್ ಆದಾಗಿನಿಂದ ತಾಳ್ಮೆಯಿಂದ ಮನೆಯಲ್ಲಿದ್ದವರ ಊರಿಗೆ, ಈಗ ಹೊರಗಿನಿಂದ ಯಾರಾದರೂ ಬಂದರೆ ಏನು ಉತ್ತರ ಕೊಡಬೇಕು’ ಎಂದು ಪ್ರಶ್ನಿಸಿದರು.

ಉಪ ವಿಭಾಗಾಧಿಕಾರಿ ಎಂ.ಅಜಿತ್, ತಹಶೀಲ್ದಾರ್ ಮೇಘರಾಜ ನಾಯ್ಕ, ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಗಜಾನನ ಪೈ, ಪ್ರದೀಪ ನಾಯಕ, ಗಾಯತ್ರಿ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.