ADVERTISEMENT

ಸಿದ್ದರಾಮಯ್ಯರಿಂದ ಕಾಲಕಾಲಕ್ಕೆ ಹೇಳಿಕೆ 'ಸ್ಫೋಟ'ಗೊಂಡರೆ ಬಿಜೆಪಿಗೆ ಲಾಭ: ಸಚಿವ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 11:14 IST
Last Updated 26 ಮಾರ್ಚ್ 2022, 11:14 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಕಾರವಾರ: ‘ಸಿದ್ದರಾಮಯ್ಯ ಅವರ ಹೇಳಿಕೆಗಳು ಕಾಲಕಾಲಕ್ಕೆ ‘ಸ್ಫೋಟ’ಗೊಂಡಾಗ ಬಿ.ಜೆ.ಪಿ.ಗೇ ಅನುಕೂಲವಾಗುತ್ತದೆ. ನ್ಯಾಯಾಲಯದ ಆದೇಶವನ್ನೂ ಗೌರವಿಸುವ ಸ್ಥಿತಿಯಲ್ಲಿ ಅವರ ಮಾನಸಿಕತೆಯಿಲ್ಲ. ಯಾಕಿಲ್ಲ ಎಂದು ಅವರಿಗೇ ಕೇಳಬೇಕು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

ರಾಜ್ಯದ ವಿವಿಧೆಡೆ ಜಾತ್ರೆಗಳಲ್ಲಿ ಹಿಂದೂಯೇತರ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸಚಿವ ಮಾಧುಸ್ವಾಮಿ ಸದನದಲ್ಲಿ ನೀಡಿದ ಉತ್ತರವನ್ನು ಉಲ್ಲೇಖಿಸಿದರು. ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ, ‘ಈ ಕಾಯ್ದೆಯನ್ನು ರೂಪಿಸಿದವರು ನೀವು. ಅದನ್ನು ಅನುಷ್ಠಾನ ಮಾಡಲಾಗುತ್ತಿದೆಯೇ ವಿನಾ ನಾವು ಯಾವುದೇ ಕಾಯ್ದೆಯನ್ನು ತಂದಿಲ್ಲ. ಎಲ್ಲರೂ ಸಮಾನವಾಗಿ ಬದುಕಲು ಒತ್ತು ಕೊಟ್ಟು ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

‘ಕೆಲವರು ಸಾಮಾಜಿಕ ‌ಜಾಲತಾಣಗಳಲ್ಲಿ, ಜಾತಿ, ಧರ್ಮ, ದೇಶದ ವಿರುದ್ಧದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಎಲ್ಲ ಪ್ರಕರಣಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಕುಚೋದ್ಯ ಮಾಡುವವರನ್ನು ಕಾನೂನು ಚೌಕಟ್ಟಿಗೆ ತರುವ ಕೆಲಸ ಮಾಡುತ್ತೇವೆ. ಕಾನೂನಿಗೆ, ರಾಷ್ಟ್ರೀಯತೆಗೆ ಸವಾಲು ಹಾಕುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.