ADVERTISEMENT

ಒಂದು ವಾರದಲ್ಲಿ ವರದಿ ನೀಡಲು ಸಚಿವ ಜೆ.ಸಿ.ಮಾಧುಸ್ವಾಮಿ ತಾಕೀತು

ಸಣ್ಣ ನೀರಾವರಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯಲ್ಲಿ ಸಚಿವ ಮಾಧುಸ್ವಾಮಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 19:30 IST
Last Updated 26 ಡಿಸೆಂಬರ್ 2019, 19:30 IST
ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರವಾರದಲ್ಲಿ ಗುರುವಾರ ತಮ್ಮ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದರು. ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಮುಖ್ಯ ಎಂಜಿನಿಯರ್ ಜಿ.ಟಿ.ಸುರೇಶ್ ಚಿತ್ರದಲ್ಲಿದ್ದಾರೆ.
ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರವಾರದಲ್ಲಿ ಗುರುವಾರ ತಮ್ಮ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದರು. ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಮುಖ್ಯ ಎಂಜಿನಿಯರ್ ಜಿ.ಟಿ.ಸುರೇಶ್ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದಾಗ ರೈಲು ಹಳಿಯ ಮೇಲೆ ಸಾಗುತ್ತಿಲ್ಲ ಎಂದು ಅನಿಸುತ್ತಿದೆ. ಈ ಬಗ್ಗೆಸಂಪೂರ್ಣವಾಗಿ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸಲು ಇಲಾಖೆಯಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದೇನೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಇಲಾಖೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಇಲಾಖೆಯ ಕಾಮಗಾರಿಗಳಲ್ಲಿ ಹಲವು ಲೋಪಗಳು, ನಿರ್ಲಕ್ಷ್ಯಗಳಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಟ್ಟಿದ್ದೇನೆ’ ಎಂದರು.

ADVERTISEMENT

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

2019–20ರಲ್ಲಿ ಜಿಲ್ಲೆಗೆ ಮಂಜೂರಾದ 96 ಕಾಮಗಾರಿಗಳ ಪೈಕಿ ನಾಲ್ಕು ಟೆಂಡರ್ ಹಂತದಲ್ಲಿವೆ. 31 ಕಾಮಗಾರಿಗಳು ಆರಂಭ ಆಗಬೇಕಿದೆ. ಎರಡು ಕೆಲಸಗಳಿಗೆ ಮರು ಟೆಂಡರ್ ಕರೆಯಲಾಗಿದೆ. 18 ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸಂಬಂಧ ಅಪೂರ್ಣ ಮಾಹಿತಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾಧುಸ್ವಾಮಿ, ಬೆಂಗಳೂರಿಗೆ ತೆರಳಿದ ಬಳಿಕ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸುವ ಎಚ್ಚರಿಕೆ ನೀಡಿದರು.

ಇಲಾಖೆಯಿಂದ ಬಿಡುಗಡೆಗೆ ಸೂಚನೆ: ‘ಹಲವು ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿರುವ ಮೊತ್ತಕ್ಕಿಂತ ಹೆಚ್ಚಿನ ದರಕ್ಕೆ ಟೆಂಡರ್ ನೀಡಲಾಗಿದೆ.ಬೇರೆ ಜಿಲ್ಲೆಗಳಲ್ಲಿ ಕಡಿಮೆ ಮೊತ್ತ ತೋರಿಸಿದರೆ ಇಲ್ಲಿ ಹೆಚ್ಚು ತೋರಿಸಲಾಗಿದೆ. ಹೇಗೆ ಸಾಧ್ಯ ಇದು’ ಎಂದು ಪ್ರಶ್ನಿಸಿದರು.

ಈ ಬಗ್ಗೆ ಮಾಹಿತಿ ನೀಡಲು ತಡಬಡಾಯಿಸಿದ ಎಂಜಿನಿಯರ್ ಎಂ.ಪಿ.ಕಳಸ್ ಅವರನ್ನು ಇಲಾಖೆಯಿಂದ ಬಿಡುಗಡೆ ಮಾಡುವಂತೆ ತಾಕೀತು ಮಾಡಿದರು.

ಇದೇವೇಳೆ ಮಾತನಾಡಿದ ಶಾಸಕರಾದ ರೂಪಾಲಿ ನಾಯ್ಕ ಮತ್ತು ದಿನಕರ ಶೆಟ್ಟಿ, ‘ಇಲಾಖೆಯಲ್ಲಿ ಮೊದಲಿನಿಂದಲೂ ಇದ್ದ ಅಧಿಕಾರಿಗಳೇ ಮುಂದುವರಿದಿದ್ದಾರೆ. ಅವರನ್ನು ಬದಲಿಸಿ. ಬೇರೆಡೆಗಳಲ್ಲಿ ಹೇಗೆ ಕೆಲಸವಾಗುತ್ತಿದೆ ಎಂದು ನೋಡಿ ಬರಲಿ’ ಎಂದುಒತ್ತಾಯಿಸಿದರು.

‘ಹೆಂಡ ಗಿಂಡ ಕುಡಿದಿದ್ರಾ?’:ಪ್ರಗತಿ ಪರಿಶೀಲನೆಯ ವೇಳೆ, ಅಧಿಕಾರಿಗಳು ಮೊದಲೇ ನೀಡಿದ ಮಾಹಿತಿಗೂ ಸಭೆಯಲ್ಲಿ ಹೇಳುತ್ತಿರುವುದಕ್ಕೂ ಬಹಳ ವ್ಯತ್ಯಾಸ ಕಂಡುಬಂತು. ಇದರಿಂದ ಸಿಟ್ಟಾದ ಸಚಿವ ಮಾಧುಸ್ವಾಮಿ, ‘ಅಂಕಿ ಅಂಶ ಭರ್ತಿ ಮಾಡಿದವರು ಯಾರ್ರೀ? ಹೆಂಡ ಗಿಂಡ ಕುಡಿದಿದ್ರಾ? ₹ 50 ಲಕ್ಷದ ಕಾಮಗಾರಿಗೆ ₹ 500 ಲಕ್ಷ (₹ 5 ಕೋಟಿ) ಎಂದು ನಮೂದಿಸ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಜಿಲ್ಲೆಯ 19 ಕಾಮಗಾರಿಗಳನ್ನು ಆಂಧ್ರಪ್ರದೇಶದ ಒಬ್ಬರೇ ಗುತ್ತಿಗೆದಾರ ಗುತ್ತಿಗೆ ಪಡೆದುಕೊಂಡಿದ್ದಾರೆ.ಎಲ್ಲ ಟೆಂಡರ್‌ಗಳಲ್ಲೂ ಹೆಚ್ಚಿನ ಮೊತ್ತವನ್ನು ನಮೂದಿಸಿದ್ದಾರೆ. ಇದು ಹೇಗೆ ಸಾಧ್ಯ? ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ’ ಎಂದು ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್,ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಮುಖ್ಯ ಎಂಜಿನಿಯರ್ ಜಿ.ಟಿ.ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.